ದೇಶಾದ್ಯಂತ ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ 30 ವರ್ಷದಿಂದ ಬಾಕಿ ಇರುವ ಪ್ರಕರಣಗಳೆಷ್ಟು ಗೊತ್ತೇ?

Update: 2022-09-23 02:38 GMT

ಹೊಸದಿಲ್ಲಿ: ದೇಶಾದ್ಯಂತ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಪ್ರಕರಣಗಳು ಕಳೆದ 30 ವರ್ಷಗಳಿಂದ ಬಾಕಿ ಇದೆ ಎನ್ನುವ ಅಂಶ ಬಹಿರಂಗವಾಗಿದೆ.

ಈ ಪೈಕಿ ಶೇಕಡ 90ರಷ್ಟು ಪ್ರಕರಣಗಳು ನಾಲ್ಕು ರಾಜ್ಯಗಳಲ್ಲಿವೆ. ಬಾಕಿ ಪ್ರಕರಣಗಳಲ್ಲಿ 67 ಸಾವಿರ ಅಪರಾಧ ಪ್ರಕರಣಗಳಾದರೆ, 33 ಸಾವಿರ ಸಿವಿಲ್ ವ್ಯಾಜ್ಯಗಳು.

ಉತ್ತರ ಪ್ರದೇಶದಲ್ಲಿ ಅತ್ಯಧಿಕ ಅಂದರೆ 41,210 ಪ್ರಕರಣಗಳು ಮೂರು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಮಹಾರಾಷ್ಟ್ರ (23,483), ಪಶ್ಚಿಮ ಬಂಗಾಳ (14,345) ಮತ್ತು ಬಿಹಾರ (11,713) ನಂತರದ ಸ್ಥಾನಗಳಲ್ಲಿವೆ. ಅಂದರೆ ಒಟ್ಟು 91 ಸಾವಿರ ಪ್ರಕರಣಗಳು ಈ ನಾಲ್ಕು ರಾಜ್ಯಗಳಲ್ಲಿವೆ. ಭಾರತದ ಈ ನಾಲ್ಕು ದೊಡ್ಡ ರಾಜ್ಯಗಳು ದೇಶದ ಜನಸಂಖ್ಯೆಯಲ್ಲಿ ಶೇಕಡ 42ರಷ್ಟು ಪಾಲು ಹೊಂದಿವೆ. ಒಡಿಶಾ (4248) ಮತ್ತು ಗುಜರಾತ್ (2826) ಮಾತ್ರ 1000ಕ್ಕೂ ಅಧಿಕ ಪ್ರಕರಣಗಳು 30 ವರ್ಷದಿಂದ ಬಾಕಿ ಇರುವ ರಾಜ್ಯಗಳು.

ಚಂಡೀಗಢ, ಡಮನ್ ಮತ್ತು ಡಿಯು, ದಾದ್ರ ಮತ್ತು ನಗರ ಹವೇಲಿ, ಲಡಾಖ್, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಮೂರು ದಶಕದಷ್ಟು ಹಳೆಯ ಯಾವ ಪ್ರಕರಣಗಳೂ ಇಲ್ಲ. ಉತ್ತರಾಖಂಡ ಹಾಗೂ ಪುದುಚೇರಿಯಲ್ಲಿ ತಲಾ ಒಂದು ಹಾಗೂ ಹಿಮಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳು ಬಾಕಿ ಇವೆ.

ದೊಡ್ಡ ರಾಜ್ಯಗಳ ಪೈಕಿ ಹರ್ಯಾಣದಲ್ಲಿ ಅತ್ಯಂತ ಕನಿಷ್ಠ ಅಂದರೆ 14 ಪ್ರಕರಣಗಳು ಬಾಕಿ ಇವೆ. 100ಕ್ಕಿಂತ ಕಡಿಮೆ ಪ್ರಕರಣಗಳು ಬಾಕಿ ಇರುವ ರಾಜ್ಯಗಳೆಂದರೆ ಮೇಘಾಲಯ, ಆಂಧ್ರಪ್ರದೇಶ, ಪಂಜಾಬ್, ಛತ್ತೀಸ್‍ಗಢ, ಅಸ್ಸಾಂ, ಮಣಿಪುರ, ಜಮ್ಮು ಮತ್ತು ಕಾಶ್ಮೀರ. ಉಳಿದ ರಾಜ್ಯಗಳಲ್ಲಿ 100 ರಿಂದ 1000 ಪ್ರಕರಣಗಳು ಮೂರು ದಶಕಗಳಿಂದ ಬಾಕಿ ಇವೆ.

ದೇಶದಲ್ಲಿ 4.9 ಲಕ್ಷ ಪ್ರಕರಣಗಳು 20 ರಿಂದ 30 ವರ್ಷದಿಂದ ಬಾಕಿ ಇದ್ದರೆ, 10 ರಿಂದ 20 ವರ್ಷದಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆ 28.7 ಲಕ್ಷ. ದೇಶಾದ್ಯಂತ ದಶಕಗಳಿಂದ ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆ 34.6 ಲಕ್ಷ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News