ಉಡುಪಿ | ಅನುಮತಿಯಿಲ್ಲದೆ ರಸ್ತೆ ತಡೆ ನಡೆಸಿದ ಆರೋಪ: ಪಿಎಫ್ ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2022-09-23 05:57 GMT

ಉಡುಪಿ, ಸೆ.23: ಪಿಎಫ್ ಐ ಕಚೇರಿ ಮೇಲಿನ ದಾಳಿಯನ್ನು ವಿರೋಧಿಸಿ ನಗರದ ಹಳೆ ಡಯಾನ ಸರ್ಕಲ್ ಬಳಿ ಗುರುವಾರ  ಅನುಮತಿಯಿಲ್ಲದೆ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಪಿಎಫ್ ಐ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿರುವುದು ಕಂಡು ಬಂದಿದ್ದು, ಅವರಿಗೆ ಸ್ಥಳದಿಂದ ಹೋಗಲು ಸೂಚನೆ ನೀಡಲಾಗಿತ್ತು. ಆದರೆ ಅವರು ಸ್ಥಳದಿಂದ ಹೋಗಲು ಒಪ್ಪದಿದ್ದಾಗ ಚದುರಿಸಲು ಪ್ರಯತ್ನಿಸಲಾಯಿತು ಎಂದು  ಉಡುಪಿ ಪೊಲೀಸ್ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ

ಈ ಸಂಬಂಧ ಪ್ರತಿಭಟನಾಕಾರರ ಪೈಕಿ ಸಾದಿಕ್‌ ಅಹ್ಮದ್‌(40), ಅಫ್ರೋಝ್ ಕೆ.(39), ಇಲ್ಯಾಸ್‌ ಸಾಹೇಬ್‌(46), ಇರ್ಷಾದ್‌(37), ಫಯಾಝ್ ಅಹ್ಮದ್‌(39), ಮುಹಮ್ಮದ್‌ ಅಶ್ರಫ್‌(43), ಎ.ಹಾರೂನ್‌ ರಶೀದ್‌, ಮುಹಮ್ಮದ್‌ ಜುರೈಝ್ (42), ಇಸಾಕ್‌ ಕಿದ್ವಾಯಿ  (30), ಶೌಕತ್‌ ಅಲಿ (31), ಮುಹಮ್ಮದ್‌ ಝಹೀದ್‌(24) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಇವರು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ರಸ್ತೆಯನ್ನು ತಡೆದು  ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆತಡೆಯನ್ನು ಉಂಟು ಮಾಡಿ ಸಾರ್ವಜನಿಕ ಉಪದ್ರವವನ್ನು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ:  143 147 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News