ಬೆಳ್ತಂಗಡಿ | ಅಂಗಡಿಯಿಂದ ಅಡಿಕೆ ಕಳ್ಳತನ: ಸೊತ್ತು ಸಹಿತ ಆರೋಪಿಯ ಸೆರೆ

Update: 2022-09-23 09:32 GMT

ಬೆಳ್ತಂಗಡಿ, ಸೆ.23: ನಗರದ ಅಡಿಕೆ ಅಂಗಡಿಯಿಂದ ಕಳವು ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ನಗರದ ಸುದೆಮುಗೇರು ನಿವಾಸಿ ಸಂತೋಷ್ ಕುಮಾರ್ ಯಾನೆ ಸಂತು(28) ಬಂಧಿತ ಆರೋಪಿ. ಆತನಿಂದ ಕಳವು ಮಾಡಿ ಏಳು ಗೋಣಿಯಲ್ಲಿ ಬಚ್ಚಿಟ್ಟಿದ್ದೆನ್ನಲಾದ ಸುಮಾರು ಎಪ್ಪತ್ತು ಸಾವಿರ ರೂ. ಮೌಲ್ಯದ ಒಂದು ಕ್ವಿಂಟಾಲ್ ಐವತ್ತು ಕೆಜಿ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಮೂರುಮಾರ್ಗ ಬಳಿ ಇರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಫಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ಇತ್ತೀಚೆಗೆ ಅಡಿಕೆ ಕಳ್ಳತನವಾಗಿತ್ತು.  ಈಬಗ್ಗೆ  ಮಾಲಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಐಪಿಸಿ 454, 457,380 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದೀಗ ಪೊಲೀಸರು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ಪತ್ತೆಗೆ ಸಹಕಾರಿಯಾದ ಏಣಿ!

 ಅಡಿಕೆ ಕಳ್ಳತನ ಭೇದಿಸುವಲ್ಲಿ ಆತ ಉಪಯೋಗಿಸಿದ ಏಣಿಯೇ ಮಹತ್ವದ ಸುಳಿವು ನೀಡಿತ್ತು.! ಕಳವಿಗೆ ಏಣಿ ಬಳಸಿರುವುದನ್ನು ಪತ್ತೆಹಚ್ಚಿದ ಪೊಲೀಸರು ಇದರ ಜಾಡು ಹಿಡಿದು ತನಿಖೆ ಮುಂದುವರಿಸಿದರು. ಬೆಳ್ತಂಗಡಿಯ ಎಲ್ಲ ವೆಲ್ಡಿಂಗ್ ಅಂಗಡಿಗೆ ಹೋಗಿ ವಿಚಾರಿಸಿದಾಗ ಒಂದು ಶಾಪ್ ನಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವ ಏಣಿ ತಯಾರಿಸಿರುವುದು ತಿಳಿದುಬಂತೆನ್ನಲಾಗಿದೆ.  ಅದನ್ನು ತಯಾರಿಸಲು ಹೇಳಿದ ವ್ಯಕ್ತಿಯನ್ನು ಪತ್ತೆಹಚ್ಚಿದಾಗ ಅಡಿಕೆ ಕಳವು ಕೃತ್ಯ ಬೆಳಕಿಗೆ ಬಂತೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News