ಮಾಜಿ ಸೈನಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ವರದಿ: ಸದನದಲ್ಲಿ ತನಿಖೆಗೆ ಆಗ್ರಹಿಸಿದ ಹರೀಶ್ ಕುಮಾರ್

Update: 2022-09-23 15:21 GMT

ಮಂಗಳೂರು, ಸೆ.23: ಮಾಜಿ ಸೈನಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿರುವ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ಕೆ. ಹರೀಶ್ ಕುಮಾರ್, 'ವಾರ್ತಾಭಾರತಿ' ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ವಾಮ ಮಾರ್ಗದಲ್ಲಿ ಆದೇಶ ಪಡೆದಿದ್ದ ಪ್ರೌಢಶಾಲಾ ಶಿಕ್ಷಕರ ನೇಮಕ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಕೋಟಾದಡಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದಲ್ಲಿಯೂ ಅಕ್ರಮ ನಡೆದಿರುವುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

2006-07ರಿಂದ 2009-10ನೆ ಸಾಲಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಕೋಟಾದಡಿ ನಕಲಿ ದಾಖಲೆ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಇದು ಸರಕಾರಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಿದೆ. ಈ ಬಗ್ಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸದುರ್ಗ ಉಪ ನಿರ್ದೇಶಕರ ಕಚೇರಿಯಲ್ಲಿನ ಹಿಂದಿನ ಪ್ರಥಮ ದರ್ಜೆ ಸಹಾಯಕರು ಮತ್ತು ಶಹಾಪುರ ತಾಲೂಕಿನ ದೋರನಹಳ್ಳಿ ಸರಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕರ ಮುಂದಿನ ಎರಡು ವಾರ್ಷಿಕ ವೇತನ ಭಡ್ತಿಗಳನ್ನಷ್ಟೆ ತಡೆ ಹಿಡಿಯಲಾಗಿದೆ. ಈ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಬೇಕು. ಕರ್ನಾಟಕ ಸರಕಾರದ ನಾಗರಿಕ ಸೇವಾ ನಿಯಮಗಳ ಅನ್ವಯ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಕೆ. ಹರೀಶ್ ಕುಮಾರ್ ಶೂನ್ಯ ವೇಳೆಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News