ಮಂಗಳೂರು: ಕಟ್ಟಡ ಕಾರ್ಮಿಕರ ಪ್ರತಿಭಟನೆ

Update: 2022-09-23 12:37 GMT

ಮಂಗಳೂರು, ಸೆ.23: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸದೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ದುರ್ಬಳಕೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ದ.ಕ. ಜಿಲ್ಲಾ ಸಮಿತಿ (ಸಿಐಟಿಯು)ಯ ವತಿಯಿಂದ ನಗರದಲ್ಲಿರುವ ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕಲ್ಯಾಣ ನಿಧಿಯನ್ನು ದುರುಪಯೋಗ ಪಡಿಸಿ ನೂರಾರು ಕೋ.ರೂ.ಭ್ರಷ್ಟಾಚಾರ ನಡೆಸಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ವಸತಿ ಸಚಿವ .ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಕಟ್ಟಡ ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ೨೦೧೭ರಲ್ಲಿ ಜಾರಿಗೆ ಬಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಈವರೆಗೆ ಸುಮಾರು ೧೩ ಸಾವಿರ ಕೋಟಿಗೂ ಅಧಿಕ ಸೆಸ್ ಸಂಗ್ರಹವಾಗಿದೆ. ಈ ಹಣದಲ್ಲಿ ಈಗಾಗಲೇ ನೋಂದಾಯಿಸಿರುವ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ, ಮಕ್ಕಳ ಮದುವೆ, ವಿದ್ಯಾಭ್ಯಾಸ, ಅಪಘಾತ ಪರಿಹಾರ, ಆರೋಗ್ಯ ವಿಮೆ ಸಹಿತ ೧೯ ಬಗೆಯ ಸೇವೆಗಳನ್ನು ನೀಡಬೇಕಾಗಿದೆ. ಆದರೆ ಇಂತಹ ಸೌಲಭ್ಯಗಳಿಗೆ ಅರ್ಜಿ ಹಾಕಿದ ಕಾರ್ಮಿಕರಿಗೆ ವಿನಾ ಕಾರಣ ಸೌಲಭ್ಯಗಳನ್ನು ತಡೆ ಹಿಡಿಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಉಪಾಧ್ಯಕ್ಷ ಸುಕುಮಾರ್ ಕೆ, ಕಟ್ಟಡ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಾನಿ, ರವಿಚಂದ್ರ ಕೊಂಚಾಡಿ, ದಿನೇಶ್ ಶೆಟ್ಟಿ, ಉಸ್ಮಾನ್ ಜಯನಗರ, ವಿಶ್ವನಾಥ ಸುಳ್ಯ, ವಸಂತಿ ಕುಪ್ಪೆಪದವು, ಯಶೋಧಾ ಮಳಲಿ, ಕೃಷ್ಣಪ್ಪಮೂಡುಬಿದಿರೆ, ಚಂದ್ರಹಾಸ ಪಿಲಾರ್, ರಾಮಚಂದ್ರ ಪಜೀರು, ರೋಹಿದಾಸ್ ಭಟ್ನಗರ, ನೋಣಯ್ಯ ಗೌಡ, ಪಾಂಡುರಂಗ ಕೊಂಚಾಡಿ, ಅಶೋಕ್ ಶ್ರೀಯಾನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News