ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ: ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರಕ್ಕೆ ದಲಿತ ಮುಖಂಡರ ಒತ್ತಾಯ

Update: 2022-09-23 13:07 GMT

ಮಂಗಳೂರು, ಸೆ.23: ದಲಿತರ ರಕ್ಷಣೆಗಾಗಿರುವ ದೌರ್ಜನ್ಯ ತಡೆ ಕಾಯ್ದೆ ದಲಿತ ಅಮಾಯಕರ ಮೂಲಕ ದಲಿತರ ಮೇಲೆಯೇ ಹೇರುವ ಪ್ರಸಂಗಗಳು ನಡೆಯುತ್ತಿದೆ. ಆದ್ದರಿಂದ ಕಾಯ್ದೆಯ ಕುರಿತಂತೆ ದಲಿತ ಸಮುದಾಯಕ್ಕೆ ಸಮಗ್ರ ಮಾಹಿತಿಯನ್ನು ಒದಗಿಸುವ ಕೆಲಸ ಆಗಬೇಕು ಎಂಬ ಆಗ್ರಹ  ದಲಿತ ಮುಖಂಡರಿಂದ ವ್ಯಕ್ತವಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ಆಲಿಕೆ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ವಿಷಯ ಪ್ರಸ್ತಾಪಿಸಿ, ದಲಿತ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಾಕಷ್ಟು ಗೊಂದಲಗಳು ಸಮುದಾಯದ ಜನರಿಗಿದೆ. ಈ ಕಾಯ್ದೆಯನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಸೇರಿದಂತೆ ಸಮಗ್ರ ಮಾಹಿತಿಯನ್ನು ದಲಿತ ಸಮುದಾಯಕ್ಕೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಕ್ರಮ ರೂಪಿಸಬೇಕು ಎಂದರು.

ಅದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರಾದ ಶೇಖರ ಲಾಯಿಲ, ನೇಮಿರಾಜ, ಎಸ್ಪಿ ಆನಂದ, ವಿಶ್ವನಾಥ ಮೊದಲಾದವರು ದಲಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಂಬಂಧಿಸಿಯೂ ದಲಿತ ದೌರ್ಜನ್ಯ ತಡೆ ಕಾಯಿದೆ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ಕುಕ್ಕೋಡಿ ಎಂಬಲ್ಲಿ ಡಿಸಿ ಮನ್ನಾದಡಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಭೂಮಿಯ 50 ಸೆಂಟ್ಸ್‌ನಲ್ಲಿ 10 ಸೆಂಟ್ಸ್ ಅಲ್ಲಿನ ಭಜನಾ ಮಂದಿರಕ್ಕೆ ಹಂಚಿಕೆಯಾಗಿತ್ತು. ಈ ಬಗ್ಗೆ ಸಮುದಾಯ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಬಳಿಕ ಉಳಿದ 40 ಸೆಂಟ್ಸ್ ಭೂಮಿಯಲ್ಲಿ ದಲಿತ ಸಮುದಾಯ ಭವನಕ್ಕಾಗಿ 1.50 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಅದಕ್ಕೆ ಆಕ್ಷೇಪ ವ್ಯಕ್ತವಾಯಿತು. ಜಿಪಂನಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಮಾಡಲು ಮುಂದಾದಾಗಲೂ ಅಲ್ಲಿ ಆಕ್ಷೇಪ ವ್ಯಕ್ತವಾಯಿತು. ಆದರೆ ಇದೀಗ ಅಲ್ಲಿ ಮದುವೆ ಹಾಲ್ ನಿರ್ಮಾಣಕ್ಕೆ ಸಿದ್ದತೆ ನಡೆಯುತ್ತಿದೆ. ಈ ನಡುವೆ ದಲಿತ ಸಮುದಾಯದ ಯುವಕನನ್ನು ಉಪಯೋಗಿಸಿ ದಲಿತರ ಮೇಲೆಯೇ ದೌರ್ಜನ್ಯ ಪ್ರಕರಣ ನಡೆಯುತ್ತಿದೆ ಎಂದು ಶೇಖರ ಲಾಯಿಲ ಆರೋಪಿಸಿದರು.

ಕುಕ್ಕೇಡಿ ಗ್ರಾಪಂ ನಲ್ಲಿ ಅದು ಸಾರ್ವಜನಿಕ ಮೈದಾನವಾಗಿ ನಿರ್ಣಯವಾಗಿದ್ದು, ಅದನ್ನು ಸಾರ್ವಜನಿಕ ಮೈದಾನವಾಗಿಯೇ ಉಪಯೋಗಿಸಬೇಕು ಎಂದು ಅವರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಈಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯಾಂಶಕ್ಕೆ ತಕ್ಕಂತೆ ಕ್ರಮ ಆಗಲಿದೆ ಎಂದರು.

ದಲಿತರೊಬ್ಬರ ಭೂಮಿಯನ್ನು ಉಪಯೋಗಿಸಿ ಮೇಲ್ವರ್ಗದವರೊಬ್ಬರು ಬ್ಯಾಂಕ್ ಸಾಲ ಪಡೆದು ವಂಚಿಸಿರುವ ಪ್ರಕರಣದ ಕುರಿತಂತೆ ಸೂಕ್ತ ನ್ಯಾಯ ಒದಗಿಸಬೇಕು. ಕುದುರೆಮುಖ ನ್ಯಾಷನಲ್ ಪಾರ್ಕ್‌ಗೊಳಪಡುವ ನಾರಾವಿ, ಕುತ್ಲೂರು, ಶಿರ್ಲಾಲು, ಸವಣಾಲು, ನಡ ಸೇರಿದಂತೆ 9 ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಹಾಗೂ ರಸ್ತೆ ಸೌಲಭ್ಯ  ಒದಗಿಸಲಾಗಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಅಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅವಕಾಶವಿದ್ದು, ಅದರಂತೆ ಕ್ರಮ ವಹಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಶೇಖರ ಲಾಯಿಲ ಸಭೆಯಲ್ಲಿ ಆಗ್ರಹಿಸಿದರು.

ದಲಿತ ನಾಯಕರಾಗಿದ್ದ ಡೀಕಯ್ಯ ಸಾವಿನ ಬಗ್ಗೆ ಅನುಮಾನವಿದ್ದು, ಅದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸಭೆಯಲ್ಲಿದ್ದ ದಲಿತ ನಾಯಕರು ಆಗ್ರಹಿಸಿದರು.

ತನಿಖಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತನಿಖೆಯಲ್ಲಿ ಕಂಡು ಬಂದಂತೆ ಕ್ರಮ ವಹಿಸಲಾಗುತ್ತದೆ. ಸಾಕ್ಷ್ಯಾಧಾರಗಳ ಮೇಲೆ ಕ್ರಮ ಆಗಲಿದೆ ಎಂದು ಎಸ್ಪಿ ಋಷಿಕೇಶ್ ಭಗವಾನ್ ತಿಳಿಸಿದರು.

ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಅನಿಲ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News