×
Ad

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈಯಲ್ಲಿ ಪತ್ತೆ

Update: 2022-09-23 22:26 IST

ಮಂಗಳೂರು, ಸೆ.23: ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮುಂಜಾವ ಸುಮಾರು 3.30ಕ್ಕೆ ಬೆಂಗಳೂರಿನ ಇಬ್ಬರು ಮತ್ತು ಚಿಕ್ಕಮಗಳೂರಿನ ಓರ್ವಳ ಸಹಿತ ಮೂವರು ನಿಗೂಢವಾಗಿ ಕಾಣೆಯಾಗಿದ್ದರು.

ಈ ವಿದ್ಯಾರ್ಥಿನಿಯರು ಹಾಸ್ಟೆಲ್‌ನ ಕಿಟಕಿಯನ್ನು ಮುರಿದು ಪರಾರಿಯಾಗಿದ್ದರು. ಈ ವಿಷಯ ಬುಧವಾರ ಬೆಳಗ್ಗೆ ಸ್ನೇಹಿತೆಯರ ಗಮನಕ್ಕೆ ಬಂದಿತ್ತು. ಅದರಂತೆ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣ ಮೂಲಕ ಕೊಯಮುತ್ತೂರಿಗೆ ಪ್ರಯಾಣಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು  ವಿದ್ಯಾರ್ಥಿನಿಯರ ಪೋಷಕರೊಂದಿಗೆ ಕೊಯಮುತ್ತೂರಿಗೆ ತೆರಳಿದ್ದರು. ಅಲ್ಲದೆ ಮಂಗಳೂರು ಪೊಲೀಸರು ಚೆನ್ನೈಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದರು. ಅಲ್ಲಿಂದ ಇದೀಗ ಮಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News