ತ್ಯಾಜ್ಯ ಸಂಸ್ಕರಣೆಯಲ್ಲಿ ವಿಫಲ: ಪಂಜಾಬ್ ಸರಕಾರಕ್ಕೆ 2,000 ಕೋ.ರೂ. ದಂಡ

Update: 2022-09-23 17:32 GMT
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್

ಹೊಸದಿಲ್ಲಿ, ಸೆ. 23: ಘನ ಹಾಗೂ ದ್ರವ ತ್ಯಾಜ್ಯವನ್ನು ಸಂಸ್ಕರಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಂಜಾಬ್ ಸರಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗುರುವಾರ 2,000 ಕೋ.ರೂ. ದಂಡ ವಿಧಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಗೋಯಲ್ ನೇತೃತ್ವದ ನ್ಯಾಯಪೀಠ, ಮಾಲಿನ್ಯ ನಿಯಂತ್ರಿಸಲು ಸಮಗ್ರ ಯೋಜನೆಯನ್ನು ಹೊಂದಿರುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ನಿಯಮಗಳ ಅನುಸರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನ್ಯಾಯಮಂಡಳಿ ಒತ್ತಿ ಹೇಳಿದೆ.

ಒಂದು ವೇಳೆ ಬಜೆಟ್ ಹಂಚಿಕೆಯಲ್ಲಿ ಕೊರತೆ ಇದ್ದರೆ ರಾಜ್ಯ ಸರಕಾರ ಅದರ ಹೊಣೆ ಹೊರಬೇಕಾಗುತ್ತದೆ. ವೆಚ್ಚ ಕಡಿತ ಅಥವಾ ಸಂಪನ್ಮೂಲಗಳನ್ನು ಹೆಚ್ಚಿಸುವ ಸೂಕ್ತ ಯೋಜನೆಗಳನ್ನು ರಾಜ್ಯಗಳು ಹೊಂದಿರಬೇಕು ಎಂದು ಪೀಠ ಹೇಳಿದೆ.

ಸಂಸ್ಕರಿಸದ ದ್ರವ ತ್ಯಾಜ್ಯ ಹಾಗೂ ಘನ ತ್ಯಾಜ್ಯವನ್ನು ಬಿಡುಗಡೆ ಮಾಡುವುದನ್ನು ತಡೆಯಲು ವಿಫಲವಾಗಿರುವುದಕ್ಕೆ ಅಂದಾಜು ಒಟ್ಟು 2,180 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪೀಠ ಸೂಚಿಸಿದೆ. ಪಂಜಾಬ್ ಸರಕಾರ ಈಗಾಗಲೇ ನ್ಯಾಯಮಂಡಳಿಗೆ 100 ಕೋಟಿ ರೂಪಾಯಿ ಪಾವತಿಸಿದೆ.

2,080 ಕೋಟಿ ರೂಪಾಯಿಯನ್ನು ಎರಡು ತಿಂಗಳ ಒಳಗೆ ಪಾವತಿಸುವಂತೆ ನ್ಯಾಯಮೂರ್ತಿ ಗೋಯಲ್ ಅವರು ಪಂಜಾಬ್ ಸರಕಾರಕ್ಕೆ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News