ಗ್ಯಾಂಗಸ್ಟರ್ ಕಾಯ್ದೆ ಪ್ರಕರಣ : ಉ.ಪ್ರ.ದ ಮಾಜಿ ಶಾಸಕ ಮುಖ್ತರ್ ಅನ್ಸಾರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ

Update: 2022-09-23 17:47 GMT
Photo : indianexpress

ಲಕ್ನೋ, ಸೆ. 23: ಗ್ಯಾಂಗ್‌ಸ್ಟರ್ ಕಾಯ್ದೆಗೆ ಸಂಬಂಧಿಸಿದ 23 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಮುಖ್ತರ್ ಅನ್ಸಾರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಶುಕ್ರವಾರ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ 2020ರಲ್ಲಿ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಅನ್ಸಾರಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ರದ್ದುಗೊಳಿಸಿದ  ನ್ಯಾಯಮೂರ್ತಿ ಡಿ.ಕೆ. ಸಿಂಗ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಅನ್ಸಾರಿ ವಿರುದ್ಧ ಲಕ್ನೋದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ 1999ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ವಿಶೇಷ ನ್ಯಾಯಾಲಯ ಅನ್ಸಾರಿ ಅವರನ್ನು 2020ರಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು ಎಂದು ರಾಜ್ಯ ಸರಕಾರದ ಪರ ನ್ಯಾಯವಾದಿ ರಾವ್ ನರೇಂದ್ರ ಸಿಂಗ್ ತಿಳಿಸಿದ್ದಾರೆ.

ಉಚ್ಚ ನ್ಯಾಯಾಲಯ ಶುಕ್ರವಾರ ಅನ್ಸಾರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಹಾಗೂ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಅವಕಾಶ ನೀಡಿದೆ  ಎಂದು ಅವರು ತಿಳಿಸಿದ್ದಾರೆ. ಜೈಲರ್‌ಗೆ ಬೆದರಿಕೆ ಒಡ್ಡಿದ ಹಾಗೂ ಅವರಿಗೆ ಪಿಸ್ತೂಲು ತೋರಿಸಿದ ಇನ್ನೊಂದು ಪ್ರಕರಣದಲ್ಲಿ ಮುಖ್ತರ್ ಅನ್ಸಾರಿ ಅವರಿಗೆ ನ್ಯಾಯಾಲಯ ಬುಧವಾರ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅನ್ಸಾರಿಯನ್ನು ಭೇಟಿಯಾಗಲು ಆಗಮಿಸಿದ ವ್ಯಕ್ತಿಗಳನ್ನು ಶೋಧಿಸಲು ಆದೇಶ ನೀಡಿರುವುದಕ್ಕೆ ಅನ್ಸಾರಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್ ಎಸ್.ಕೆ. ಅಶ್ವಥಿ ಅವರು ಆಲಂಬಾಗ್ ಪೊಲೀಸ್ ಠಾಣೆಯಲ್ಲಿ 2003ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕೂಡ ವಿಚಾರಣಾ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು. ಮುಖ್ತರ್ ಅನ್ಸಾರಿ ಪ್ರಸಕ್ತ ಬಂದಾ ಕಾರಾಗೃಹದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News