ಅದಾನಿ ಆಕಾಶಕ್ಕೆ ಅನ್ನದಾತ ಪಾತಾಳಕ್ಕೆ

Update: 2022-09-24 05:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹರೂನ್ ಸಂಸ್ಥೆಯು ಮೊನ್ನೆ ಬಿಡುಗಡೆ ಮಾಡಿರುವ ‘ಐಐಎಫ್‌ಎಲ್ ವೆಲ್ತ್ ಹರೂನ್ ಇಂಡಿಯಾ ರಿಚ್ ಲಿಸ್ಟ್’ ವರದಿಯ ಪ್ರಕಾರ ಗೌತಮ್ ಅದಾನಿಯವರು ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ಶ್ರೀಮಂತನೆಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಅದಾನಿ ಈಗ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಶ್ರೀಮಂತ. ಒಂದು ವಾರದ ಕೆಳಗೆ ಕೆಲವು ಗಂಟೆಗಳ ಕಾಲ ಅವರು ಜಗತ್ತಿನ ಎರಡನೇ ಶ್ರೀಮಂತರಾಗಿದ್ದರು. ಹರೂನ್ ವರದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅದಾನಿ ಸಮೂಹ ನಿಮಿಷಕ್ಕೆ ಒಂದು ಕೋಟಿ ರೂ. ರೀತಿ ದಿನಕ್ಕೆ 1,600 ಕೋಟಿ ರೂ. ಗಳಿಸುತ್ತಾ, ಒಂದು ವರ್ಷದಲ್ಲಿ ಹೆಚ್ಚು ಕಡಿಮೆ 6 ಲಕ್ಷ ಕೋಟಿ ರೂ. ಸಂಪತ್ತನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ 2018ರಿಂದ ಈಚೆಗೆ ಅದಾನಿ ಸಮೂಹದ ಆಸ್ತಿಪಾಸ್ತಿ 15 ಪಟ್ಟು ಹೆಚ್ಚಳವಾಗಿದೆ. 2018ರಲ್ಲಿ ಕೇವಲ ರೂ. 71,000 ಕೋಟಿಯಷ್ಟಿದ್ದ ಅದರ ಸಂಪತ್ತು 2022ರಲ್ಲಿ ರೂ. 11 ಲಕ್ಷ ಕೋಟಿಯಷ್ಟಾಗಿದೆ. ಈವರೆಗೆ ಭಾರತದ ಮೊದಲ ಶ್ರೀಮಂತನಾಗಿದ್ದ ಅಂಬಾನಿ ಈಗ ಎರಡನೇ ಸ್ಥಾನದಲ್ಲಿ 8 ಲಕ್ಷ ಕೋಟಿ ರೂ.ಯ ಒಡೆಯ. ಇದನ್ನು ಭಾರತದ ಸಾಧನೆಯ ಸಂಕೇತ ಎಂದು ಭಾವಿಸಬಹುದೇ? ಏಕೆಂದರೆ ಇದೇ ಅವಧಿಯಲ್ಲಿ ಭಾರತದ ಶೇ. 80ರಷ್ಟು ಜನರ ಸಂಪತ್ತು, ಗಳಿಕೆ ಮತ್ತು ಆದಾಯ ಕುಸಿಯುತ್ತಾ ಹೋಗಿದೆ.

ಸರಕಾರದ ವರದಿಗಳ ಪ್ರಕಾರವೇ ಈ ದೇಶದ ರೈತ ಕುಟುಂಬವೊಂದರ ಸರಾಸರಿ ವಾರ್ಷಿಕ ಆದಾಯ ಪಂಜಾಬಿನಲ್ಲಿ 2.5 ಲಕ್ಷ ರೂ.ಯಾಗಿದ್ದರೆ ಬಿಹಾರದಲ್ಲಿ ಕೇವಲ ರೂ. 23,000, ಕರ್ನಾಟಕದಲ್ಲಿ ರೈತ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ ಕೇವಲ ಒಂದು ಲಕ್ಷ ರೂ. ಅಂದರೆ ಈ ದೇಶದ ರೈತಾಪಿ ವರ್ಗ ವರ್ಷವೆಲ್ಲಾ ದುಡಿದರೂ ಕೇವಲ ಒಂದು ಲಕ್ಷ ರೂ. ಗಳಿಕೆ. ಆದರೆ ಅದಾನಿಗೆ ಒಂದು ನಿಮಿಷಕ್ಕೆ ನೂರು ಲಕ್ಷ ರೂ. ಗಳಿಕೆ. ಅಂದರೆ ಈ ದೇಶದ ರೈತರ ಆದಾಯಕ್ಕಿಂತ ಅದಾನಿಯ ಸಂಪತ್ತು ಲಕ್ಷ ಪಟ್ಟು ಹೆಚ್ಚು! ಈ ಅಗಾಧ ಅಸಮಾನತೆಗೆ ಕಾರಣವೇನು? ಇದರ ಪರಿಣಾಮವೇನು? ಅದಾನಿಯ ಆಸ್ತಿಯ ದಿಢೀರ್ ಹೆಚ್ಚಳಕ್ಕೆ ಪ್ರಧಾನ ಕಾರಣ ‘ಇಂಧನದಿಂದ ಬಂದರು’ ತನಕ ವಿಸ್ತರಿಸಿಕೊಂಡಿರುವ ಅದಾನಿ ಸಾಮ್ರಾಜ್ಯದ ಕಂಪೆನಿಗಳ ಶೇರು ಬೆಲೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದು. ಅದು ತಕ್ಷಣ ಕೈಗೆ ಹತ್ತದ ‘ಕಾಗದದ ಹಣ’ವೇ ಆಗಿದ್ದರೂ ಯಾವಾಗ ಬೇಕಿದ್ದರೂ ಅದನ್ನು ನಗದೀಕರಿಸಿಕೊಳ್ಳಬಹುದು. ಏನಿಲ್ಲವೆಂದರೂ ಈ ಮೂಲದ ಹಣಸಂಗ್ರಹಣೆ ಅದಾನಿ ಸಮೂಹಕ್ಕೆ ಬೇಕಿರುವ ಮಾರುಕಟ್ಟೆ ವಿಶ್ವಾಸ ಮತ್ತು ಅದರಿಂದ ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸುಲಭ ಕಂತಿನ ಹಾಗೂ ದೀರ್ಘಾವಧಿಯ ಸಾಲವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ನೋಡಿದರೆ ಇದೇ ಅವಧಿಯಲ್ಲಿ ಅದಾನಿಯ ಸಾಲವೂ ರೂ. 1.8 ಲಕ್ಷ ಕೋಟಿಯನ್ನು ಮುಟ್ಟಿದೆ.

ಹಣಕಾಸು ಮಾರುಕಟ್ಟೆ ಹಾಗೂ ಉದ್ಯಮ ವಿಶ್ಲೇಷಕರ ಪ್ರಕಾರ ಅದಾನಿ ಸಾಮ್ರಾಜ್ಯದ ಅಸಲಿ ಆರ್ಥಿಕ ಆರೋಗ್ಯ ಅಷ್ಟೇನೂ ಹಿತಕರವಾಗಿಲ್ಲ. ಅದಾನಿ ಸಮೂಹ ತನ್ನ ಹಣಕಾಸು ಸಾಮರ್ಥ್ಯಕ್ಕಿಂತ ಹಲವಾರು ಪಟ್ಟು ಹೆಚ್ಚು ವಹಿವಾಟಿನಲ್ಲಿ ತೊಡಗಿಕೊಂಡಿದೆ. ಒಂದು ಕಡೆ ಅದು ತಾನು ಹಾಲಿ ಇದ್ದ ಉದ್ಯಮಗಳ ಹಿಂದು-ಮುಂದಿನ ಎಲ್ಲಾ ವಹಿವಾಟುಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಮತ್ತೊಂದೆಡೆ ಈವರೆಗೆ ತನಗೆ ಪರಿಣತಿಯೇ ಇಲ್ಲದ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ 5ಜಿ ಟೆಲಿಕಾಂ ಮಾರುಕಟ್ಟೆಯಲ್ಲೂ ಅದಾನಿ ಪ್ರವೇಶಿಸಿರುವುದು ಮತ್ತು ಇತ್ತೀಚೆಗೆ ಎನ್‌ಡಿಟಿವಿ ಶೇರುಗಳನ್ನು ಖರೀದಿಸಿ ಮಾಧ್ಯಮ ಕ್ಷೇತ್ರಕ್ಕೂ ಪ್ರವೇಶಿಸಿರುವುದು. ಅಲ್ಲದೆ ಯುರೋಪಿನಲ್ಲಿ ಸಿಮೆಂಟ್ ಕಂಪೆನಿ ಖರೀದಿ. ಆಸ್ಟ್ರೇಲಿಯದ ಕಲ್ಲಿದ್ದಲು ಗಣಿಯಲ್ಲಿ ಹೂಡಿಕೆ ಹೀಗೆ ದೇಶ ವಿದೇಶಗಳಲ್ಲಿ ಹಲವಾರು ಉದ್ಯಮಗಳನ್ನು ಸತತವಾಗಿ ಅದಾನಿ ಸಮೂಹ ಕೊಂಡುಕೊಳ್ಳುತ್ತಾ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದೆ. ಆದರೆ ಇವೆಲ್ಲಕ್ಕೂ ಬೇಕಿರುವ ಹೂಡಿಕೆಯನ್ನು ಹೇಗೆ ಹೊಂದಿಕೆ ಮಾಡಿಕೊಳ್ಳುತ್ತಿದೆ? ಆರ್ಥಿಕ ವಿಶ್ಲೇಷಕರ ಪ್ರಕಾರ ಈ ಬಗೆಯಲ್ಲಿ ಪರಿಣತಿ ಇಲ್ಲದ ಕ್ಷೇತ್ರಗಳಲ್ಲಿ ಹಾಗೂ ಸದ್ಯಕ್ಕೆ ಲಾಭ ಖಾತರಿಯಿಲ್ಲದ ಕ್ಷೇತ್ರಗಳಲ್ಲಿ ಅಪಾರ ಹೂಡಿಕೆ ಮಾಡುತ್ತಾ ಕೈಗೊಂಡಿರುವ ‘ಅದಾನಿ ವಿಸ್ತರಣೆ’ ಅತ್ಯಂತ ಅಪಾಯಕಾರಿಯಾಗಿದ್ದು ಯಾವಾಗ ಬೇಕಾದರೂ ಕಂಪೆನಿಗಳು ದಿವಾಳಿ ಎದ್ದು ಹೂಡಿಕೆಗಳು ಮುಳುಗಬಹುದು. ಹೀಗಾಗಿ ಸಾಮಾನ್ಯವಾಗಿ ಇಂತಹ ದುಸ್ಸಾಹಸದ ವಿಸ್ತರಣೆಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಬಂಡವಾಳ ಸಾಲವನ್ನು ಕೊಡುವುದಿಲ್ಲ. ಆದರೆ ಅದಾನಿ ಸಮೂಹಕ್ಕೆ ಅಂತಹ ಸಮಸ್ಯೆಯೇ ಬಂದಿಲ್ಲ. ಏಕೆಂದರೆ ಪರಿಣಿತ ವಿಶ್ಲೇಷಕರ ಪ್ರಕಾರ ಎರಡು ವಿಷಯಗಳು ಅದಾನಿಗೆ ಸಹಾಯಕಾರಿಯಾಗಿವೆ.

ಮೊದಲನೆಯದು ದೇಶದ ರಾಜಕೀಯ ನಾಯಕರ ಹಾಗೂ ಆಡಳಿತಗಾರರ ಜೊತೆಗೆ ಅದಾನಿಗಿರುವ ಸ್ನೇಹ. ಹೀಗಾಗಿ ಅದಾನಿ ಕೇಳಿದಷ್ಟು ಬಂಡವಾಳ ಸಾಲವನ್ನು ಭಾರತೀಯ ಬ್ಯಾಂಕುಗಳು, ಎಷ್ಟೇ ರಿಸ್ಕ್ ಇದ್ದರೂ ಎಂದಿಗೂ ನಿರಾಕರಿಸಿಲ್ಲ. ಎರಡನೆಯದಾಗಿ ಭಾರತ ಸರಕಾರದ ಭಾವೀ ಆರ್ಥಿಕ ನೀತಿಗಳ ಸುಳಿವು ಅದಾನಿ ಸಮೂಹಕ್ಕೆ ಮುಂಚಿತವಾಗಿಯೇ ದೊರಕುವುದರಿಂದ ಸರಕಾರದ ನೀತಿ, ಸವಲತ್ತು, ಪ್ರೋತ್ಸಾಹಗಳನ್ನು ಪಡೆದುಕೊಳ್ಳುವುದರಲ್ಲಿ ಅದಾನಿಗೆ ಸ್ಪರ್ಧೆಯೇ ಇರುವುದಿಲ್ಲ. ಅಂದರೆ ಮೋದಿ ಸರಕಾರದ ಪಕ್ಷಪಾತಿ ಪ್ರೋತ್ಸಾಹ, ಬ್ಯಾಂಕುಗಳ ಬೇಜವಾಬ್ದಾರಿ ಸಾಲ ನೀತಿಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡೇ ಅದಾನಿ ಸಾಮ್ರಾಜ್ಯ ಬೆಳೆಯುತ್ತಿದೆ. ತೈಲ ಮಾರುಕಟ್ಟೆಯಲ್ಲಿ ಸರಕಾರ ತಂದ ನೀತಿಗಳಾಗಲಿ, ಖಾದ್ಯ ತೈಲ ಆಮದು ನೀತಿಯಲ್ಲಿ ತಂದ ತೆರಿಗೆ ಮಾರ್ಪಾಡಾಗಲಿ, ಭಾರತದ ವಿದ್ಯುತ್ ಉತ್ಪಾದನಾ ಕಂಪೆನಿಗಳು ಕಡ್ಡಾಯವಾಗಿ ಆಸ್ಟ್ರೇಲಿಯದಿಂದ ಆಮದು ಮಾಡಿದ ಕಲ್ಲಿದ್ದಲನ್ನು ಹೆಚ್ಚಿನ ದರ ಕೊಟ್ಟು ಮಿಶ್ರಣ ಮಾಡಲೇಬೇಕೆಂಬ ನೀತಿಯಾಗಲಿ, ಬಂದರುಗಳ ಖಾಸಗೀಕರಣ ನೀತಿ, ಮೊನ್ನೆ ಮೊನ್ನೆ ಸರಕಾರ ಘೋಷಿಸಿದ ಮೂಲಭೂತ ಸೌಕರ್ಯ ಸರಬರಾಜು ನೀತಿಗಳೆಲ್ಲದರ ಹಾಗೂ ಇತ್ತೀಚೆಗೆ ಸರಕಾರ ತರಬಯಸಿದ್ದ ಮೂರು ಕೃಷಿ ನೀತಿಗಳ ಪ್ರಧಾನ ಫಲಾನುಭವಿ ಅದಾನಿಯೇ ಆಗಿದ್ದಾರೆ. ಆದರೆ ಇಂತಹ ನೀತಿಗಳಿಂದ ಪ್ರಧಾನವಾಗಿ ನಷ್ಟ ಅನುಭವಿಸುತ್ತಿರುವವರು ಈ ದೇಶದ ರೈತಾಪಿ ವರ್ಗ ಮತ್ತು ಸಾಮಾನ್ಯ ಜನರೇ ಆಗಿದ್ದಾರೆ.

ಅದಾನಿ ಸಾಮ್ರಾಜ್ಯದ ಈ ಬಗೆಯ ಸರಕಾರಾವಲಂಬಿ ಅಭಿವೃದ್ಧಿಯನ್ನು ಆರ್ಥಿಕ ಪರಿಭಾಷೆಯಲ್ಲಿ ಕ್ರೋನಿ ಕ್ಯಾಪಿಟಲಿಸಂ- ಅಥವಾ ಕೆಲವೇ ಕಾರ್ಪೊರೇಟುಗಳಿಗೆ ಲಾಭ ಮಾಡಿಕೊಡುವ ಪಕ್ಷಪಾತಿ ಕ್ಯಾಪಿಟಲಿಸಂ ಎನ್ನುತ್ತಾರೆ. ಅಂತಹ ದೇಶಗಳಲ್ಲಿ ಸರಕಾರಗಳು ದೇಶದ ಸಂಪತ್ತನ್ನು ಹಾಡಹಗಲೇ ಜನರಿಂದ ಕಿತ್ತು ತನ್ನ ಪ್ರಿಯ ಕ್ರೋನಿ ಕಾರ್ಪೊರೇಟ್‌ಗಳ ವಶಕ್ಕೆ ಕೊಡುತ್ತದೆ. ಇದರಿಂದ ಅಂತಹ ದೇಶಗಳಲ್ಲಿ ಕೆಲವೇ ಶ್ರೀಮಂತರು ಅಪಾರ ಧನಿಕರಾಗಿಯೂ ಉಳಿದವರು ಇನ್ನಷ್ಟು ಬಡತನಕ್ಕೂ ದೂಡಲ್ಪಡುತ್ತಾರೆ ಹಾಗೂ ಆ ದೇಶದ ಪ್ರಜಾತಂತ್ರದ ವ್ಯವಸ್ಥೆಯು ನಾಮ್‌ಕಾವಸ್ಥೆಯಾಗುತ್ತದೆ. ಇವೆಲ್ಲವೂ ಭಾರತದಲ್ಲೂ ಸಂಭವಿಸುತ್ತಿದೆ. ಮೋದಿ ಸರಕಾರ ಅಧಿಕಾರಕ್ಕೆ ಬರುವಂತೆ ಅದಾನಿ-ಅಂಬಾನಿಗಳು ಶ್ರಮಿಸುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಅದಾನಿ-ಅಂಬಾನಿಗಳ ಲಾಭ ಹಲವಾರು ಪಟ್ಟು ಹೆಚ್ಚಾಗುವಂತೆ ಮೋದಿ ಸರಕಾರ ನೀತಿಗಳನ್ನು ಮಾಡುತ್ತದೆ. ಇದು ಪ್ರಜಾತಂತ್ರದ ಪ್ರಹಸನ. ಜನರ ದುರಂತ. ಅದಾನಿಯ ಶ್ರೀಮಂತಿಕೆ ಹೆಚ್ಚಿರುವುದು ಹೀಗೆ-‘ಅದಾನಿ ಕೆ ಸಾಥ್ ಅದಾನಿಕೆ ವಿಕಾಸ್’ ನೀತಿಯಿಂದ. ಇದು ಆತಂಕಕ್ಕೆ ಕಾರಣವಾಗಬೇಕೇ ವಿನಾ ಸಂಭ್ರಮಕ್ಕಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News