ಯುಪಿಎ ಸರಕಾರವಿದ್ದಾಗ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು: ನಾರಾಯಣ ಮೂರ್ತಿ

Update: 2022-09-24 06:43 GMT

ಅಹಮದಾಬಾದ್: "ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಸರಕಾರವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಆಗ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು'' ಎಂದು ಐಟಿ ದೈತ್ಯ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ N R Narayana Murthy, co-founder of IT giant Infosys ಶುಕ್ರವಾರ ವಿಷಾದಿಸಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಅಹಮದಾಬಾದ್ (IIMA) ನಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ  ಮೂರ್ತಿ "ಯುವ ಮನಸ್ಸುಗಳು ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾದ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡಬಹುದು'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ನಾನು ಲಂಡನ್‌ನಲ್ಲಿ (2008 ಮತ್ತು 2012 ರ ನಡುವೆ) ಎಚ್‌ಎಸ್‌ಬಿಸಿಯ ಬೋರ್ಡ್‌ನಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ, ಬೋರ್ಡ್‌ರೂಮ್‌ನಲ್ಲಿ (ಸಭೆಗಳ ಸಮಯದಲ್ಲಿ)ಚೀನಾವನ್ನು ಎರಡರಿಂದ ಮೂರು ಬಾರಿ ಉಲ್ಲೇಖಿಸಿದಾಗ, ಭಾರತದ ಹೆಸರನ್ನು ಒಮ್ಮೆ ಉಲ್ಲೇಖಿಸಲಾಗುತ್ತಿತ್ತು" ಎಂದು ಹೇಳಿದರು.

"ಆದರೆ ದುರದೃಷ್ಟವಶಾತ್, ನಂತರ ಭಾರತಕ್ಕೆ ಏನಾಯಿತು ಎಂದು ನನಗೆ ತಿಳಿದಿಲ್ಲ. (ಮಾಜಿ ಪ್ರಧಾನಿ) ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿ ಹಾಗೂ  ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಯುಪಿಎ ಅವಧಿಯಲ್ಲಿ ಭಾರತವು ಸ್ಥಗಿತಗೊಂಡಿತು. ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಹಾಗೂ  ಎಲ್ಲವೂ ವಿಳಂಬವಾಯಿತು”ಎಂದು ಮೂರ್ತಿ ಹೇಳಿದರು.

ನಾನು  ಎಚ್‌ಎಸ್‌ಬಿಸಿಯನ್ನು ತೊರೆದಾಗ (2012 ರಲ್ಲಿ), ಸಭೆಗಳಲ್ಲಿ ಭಾರತದ ಹೆಸರನ್ನು ಅಷ್ಟೇನೂ ಉಲ್ಲೇಖಿಸಲಾಗಿಲ್ಲ, ಆದರೆ ಚೀನಾದ ಹೆಸರನ್ನು ಸುಮಾರು 30 ಬಾರಿ ಉಲ್ಲೇಖಿಸಲಾಗಿದೆ ಎಂದರು.

"ಆದ್ದರಿಂದ, ಜನರು ಇತರ ಯಾವುದೇ ದೇಶದ ಹೆಸರನ್ನು, ವಿಶೇಷವಾಗಿ ಚೀನಾವನ್ನು ಉಲ್ಲೇಖಿಸಿದಾಗ ಭಾರತದ ಹೆಸರನ್ನು ನಮೂದಿಸುವಂತೆ ಮಾಡುವುದು ನಿಮ್ಮ (ಯುವ ಪೀಳಿಗೆ) ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನೀವು ಅದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಮೂರ್ತಿ ಹೇಳಿದರು.

ಹೆಚ್ಚಿನ ಪಾಶ್ಚಿಮಾತ್ಯರು ಭಾರತವನ್ನು ಕೀಳಾಗಿ ಕಾಣುತ್ತಿದ್ದ ಕಾಲವಿತ್ತು, ಆದರೆ ಇಂದು, ದೇಶದ ಬಗ್ಗೆ ಒಂದು ನಿರ್ದಿಷ್ಟ ಮಟ್ಟದ ಗೌರವವಿದೆ.  ಅದು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಇನ್ಫೋಸಿಸ್ ಮಾಜಿ ಅಧ್ಯಕ್ಷರು ಹೇಳಿದರು.

 ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ 1991 ರಲ್ಲಿ ತಂದಿರುವ  ಆರ್ಥಿಕ ಸುಧಾರಣೆಗಳು ಹಾಗೂ  ಪ್ರಸ್ತುತ ಬಿಜೆಪಿ  ನೇತೃತ್ವದ ಎನ್‌ಡಿಎ ಸರಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟಪ್ ಇಂಡಿಯಾ' ಯೋಜನೆಗಳು ದೇಶವನ್ನು ಮುನ್ನಡೆಸಲು ಸಹಾಯ ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News