ಕ್ರೀಡಾ ಜಗತ್ತಿಗೆ ಸಂಬಂಧಿಸಿದ ಅತ್ಯಂತ ಸುಂದರ ಚಿತ್ರ: ಫೆಡರರ್‌-ನಡಾಲ್‌ ಭಾವುಕ ಚಿತ್ರಕ್ಕೆ ಕೊಹ್ಲಿ ಪ್ರತಿಕ್ರಿಯೆ

Update: 2022-09-24 12:07 GMT

ಹೊಸದಿಲ್ಲಿ: ತಮ್ಮ ಪ್ರತಿಸ್ಪರ್ಧಿ ರೋಜರ್ ಫೆಡರರ್ ಜೊತೆಗೆ ಅಳುತ್ತಿರುವ ರಫೆಲ್ ನಡಾಲ್ ಚಿತ್ರವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, "ತಾನು ನೋಡಿದ ಅತ್ಯಂತ ಸುಂದರವಾದ ಕ್ರೀಡಾ ಚಿತ್ರ" ಎಂದು ಹೇಳಿದ್ದಾರೆ. ಲಂಡನ್‌ನಲ್ಲಿನ ಲೇವರ್ ಕಪ್‌ನಲ್ಲಿ ತನ್ನ ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ಫೆಡರರ್ ತನ್ನ ಪ್ರತಿಸ್ಪರ್ಧಿ ನಡಾಲ್ ರೊಂದಿಗೆ ಆಡಿದ್ದಾರೆ. 

ಸಾರ್ವಕಾಲಿಕ ಶ್ರೇಷ್ಠ ಟೆನಿಸ್‌ ಕ್ರೀಡಾಪಟುಗಳಲ್ಲಿ ಒಬ್ಬರಾದ ರೋಜರ್ ಫೆಡರರ್ ಶುಕ್ರವಾರ ತಮ್ಮ ಟೆನಿಸ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದು, ಲೇವರ್ ಕಪ್ ಡಬಲ್ಸ್ ಈವೆಂಟ್‌ನಲ್ಲಿ ದೀರ್ಘಾವಧಿಯ ಪ್ರತಿಸ್ಪರ್ಧಿ ರಫೆಲ್ ನಡಾಲ್ ಅವರೊಂದಿಗೆ ಜೋಡಿಯಾಗಿ ವಿಶಿಷ್ಟವಾದ ರೀತಿಯಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಆಟವನ್ನು ಆಡಿದ್ದಾರೆ.

ಈ ಸಂದರ್ಭದಲ್ಲಿ ಫೆಡರರ್ ಅವರು ಆಟಕ್ಕೆ ವಿದಾಯ ಹೇಳುವಾಗ ಭಾವುಕರಾಗಿದ್ದರು, ಲೇವರ್ ಕಪ್ ಪಂದ್ಯದ ನಂತರ ಫೆಡರರ್‌ ಜೊತೆಗೆ ರಫೆಲ್ ನಡಾಲ್ ಕೂಡ ಅತ್ತಿದ್ದಾರೆ. ದೀರ್ಘಕಾಲದಿಂದ ಪ್ರತಿಸ್ಪರ್ಧಿಗಳಾದ ಇವರಿಬ್ಬರ ಈ ಕ್ರೀಡಾ ಸ್ಪೂರ್ತಿ ಕಂಡು ಕ್ರೀಡಾಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸದ್ದಾರೆ. ಕ್ರಿಕೆಟರ್‌ ವಿರಾಟ್‌ ಕೂಡಾ ಇದಕ್ಕೆ ಹೊರತಲ್ಲ. ಇಬ್ಬರೂ ಒಟ್ಟಿಗೆ ಅಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೊಹ್ಲಿ, 'ಇದು ತನಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರ' ಎಂದು ವಿವರಿಸಿದ್ದಾರೆ.

"ಪ್ರತಿಸ್ಪರ್ಧಿಗಳು ಒಬ್ಬರಿಗೊಬ್ಬರು ಈ ರೀತಿ ಇರಬಹುದು ಎಂದು ಯಾರು ಭಾವಿಸಿದ್ದರು(?). ಇದು ಕ್ರೀಡೆಯ ಸೌಂದರ್ಯ. ನನಗೆ ಇದು ಕ್ರೀಡಾ ಜಗತ್ತಿಗೆ ಸಂಬಂಧಿಸಿದ ಅತ್ಯಂತ ಸುಂದರವಾದ ಚಿತ್ರವಾಗಿದೆ. ನಿಮ್ಮ ಸಂಗಾತಿಗಳು ನಿಮಗಾಗಿ ಕಣ್ಣೀರು ಸುರಿಸಿದಾಗ, ನಿಮಗೆ ದೇವರು ನೀಡಿದ ಪ್ರತಿಭೆಯಿಂದ ನೀವು ಏನು ಮಾಡಲು ಸಾಧ್ಯವಾಯಿತು ಎಂದು ನಿಮಗೆ ತಿಳಿಯತ್ತದೆ. ಈ ಇಬ್ಬರಿಗೆ ಗೌರವ ಹೊರತು ಬೇರೇನೂ ಇಲ್ಲ" ಎಂದು ಕೊಹ್ಲಿ ಬರೆದಿದ್ದಾರೆ. ಕೊಹ್ಲಿ ಪೋಸ್ಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಇಬ್ಬರು ಕ್ರೀಡಾ ಪಟುಗಳ ನಡುವಿನ ಅದ್ಭುತ ಬಾಂಧವ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 

ನಡಾಲ್ ಮತ್ತು ಫೆಡರರ್ ಇಬ್ಬರೇ 42 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೆಡರರ್ 20ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ನಂತರ ತನ್ನ ಅದ್ಭುತ ವೃತ್ತಿಜೀವನಕ್ಕೆ ತೆರೆ ಎಳೆದರೆ, ನಡಾಲ್ ಪುರುಷರ ಟೆನಿಸ್ ಇತಿಹಾಸದಲ್ಲಿ 22 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹೊಂದಿರುವ ಅತ್ಯಂತ ಯಶಸ್ವಿ ಆಟಗಾರರಾಗಿ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News