ʼಮೀಸಲಾತಿ ವಿರೋಧಿ ಈಶ್ವರಪ್ಪ, ಜಾತಿವಾದಿ ಸಚಿವ ನಾಗೇಶ್ʼ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2022-09-24 14:35 GMT

ಉಡುಪಿ, ಸೆ.24: ಪೂನಾ ಒಪ್ಪಂದದಿಂದ ದಲಿತರಿಗೆ ಆಗಿರುವ ಅನ್ಯಾಯ ವಿರೋಧಿಸಿ ಹಾಗೂ ಮೀಸಲಾತಿ ವಿರೋಧಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಜಾತಿವಾದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಡೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಜಾಥ ಹಾಗೂ ಪ್ರತಿಕೃತಿ ದಹನ ಕಾರ್ಯಕ್ರಮ ವನ್ನು ಶನಿವಾರ ಆಯೋಜಿಸಲಾಗಿತ್ತು.

ನಗರದ ಬೋರ್ಡ್ ಹೈಸ್ಕೂಲ್‌ನಿಂದ ಹೊರಟ ಪ್ರತಿಭಟನಾ ಜಾಥ ಹಾಗೂ ಈಶ್ವರಪ್ಪ ಹಾಗೂ ಬಿ.ಸಿ.ನಾಗೇಶ್ ಅವರ ಪ್ರತಿಕೃತಿಯ ಅಣಕು ಶವಯಾತ್ರೆಯು ಕೆ.ಎಂ.ರೋಡ್, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಮಾಪ್ತಿಗೊಂಡಿತು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಈಶ್ವರಪ್ಪ ಹಾಗೂ ಬಿ.ಸಿ.ನಾಗೇಶ್ ಅವರ ಪ್ರತಿಕೃತಿಯನ್ನು ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೊ. ಫಣಿರಾಜ್, ದಲಿತರಿಗೆ ನ್ಯಾಯ ಒದಗಿಸಿಕೊಡುವ ಅಂಬೇಡ್ಕರ್ ಪ್ರಸ್ತಾಪಿಸಿದ್ದ ಪೂನಾ ಒಪ್ಪಂದ ದಲಿತರಿಗೆ ಶಕ್ತಿ ತಂದು ಕೊಡುತ್ತಿತ್ತು. ಅಂತಹ ಅವಕಾಶವನ್ನು ಕಿತ್ತು ಕೊಂಡು ದ್ರೋಹ ಎಸಗಲಾಯಿತು. ಪೂನಾ ಒಪ್ಪಂದವನ್ನು ದಲಿತರು  ಎಲ್ಲ ರಾಜಕೀಯ ಪಕ್ಷಗಳಿಗೆ ಸವಾಲು ಆಗಿ ಕೊಡಬೇಕು. ಇದನ್ನು ಜಾರಿಗೆ ತರುವ ಪಕ್ಷಗಳಿಗೆ ಮಾತ್ರ ಮತ ಹಾಕಬೇಕು. ಆ ಮೂಲಕ ಇದನ್ನು ರಾಜಕೀಯ ಹೋರಾಟವನ್ನಾಗಿ ಮಾಡಬೇಕು ಎಂದು ತಿಳಿಸಿದರು.

ದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಜಾತಿವಾದಿ ಬ್ರಾಹ್ಮಣ ಸಚಿವ ಬಿ.ಸಿ.ನಾಗೇಶ್ ಮೂಢನಂಬಿಕೆ ಯನ್ನು ಒಳಗೊಂಡಿರುವ ವೇದಗಣಿತವನ್ನು ದಲಿತ ವಿದ್ಯಾರ್ಥಿಗಳಿಗೆ  ಕಲಿಸಿ ಕೊಡುವ ಹುನ್ನಾರ ಮಾಡುತ್ತಿದ್ದಾರೆ. ಇದರ ತರಬೇತಿಗಾಗಿ 60 ಕೋಟಿ ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಇದೆಲ್ಲವೂ ದಲಿತರ ಹಣವನ್ನು ಲಪಾಟಿಸುವ ಉದ್ದೇಶವಾಗಿದೆ ಎಂದು ದೂರಿದರು.

ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಈಶ್ವರಪ್ಪ ಅವರ ಮೀಸ ಲಾತಿ ವಿರೋಧಿ ಹೇಳಿಕೆಗಳು ಮತ್ತು ಬಿ.ಸಿ.ನಾಗೇಶ್ ದಲಿತ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುತ್ತಿರುವುದು ಬಿಜೆಪಿಯ ಧೋರಣೆಯ ಭಾಗಗಳಾಗಿವೆ. ಉತ್ಸವದಲ್ಲಿ ಪಲ್ಲಕ್ಕಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸುತ್ತಿರುವ ಮನಸ್ಥಿತಿಯವರು ಭಾರತವನ್ನು ಹಿಂದು ರಾಷ್ಟ್ರ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರು ಮೊದಲು ಜನರು ಬದುಕುವಂತಹ ರಾಷ್ಟ್ರವನ್ನು ನಿರ್ಮಾಣ ಮಾಡಬೇಕಾಗಿದೆ. ಅದು ಬಿಟ್ಟು ಮೋದಿ ಸ್ನೇಹಿತರಾದ ಅದಾನಿ, ಅಂಬಾನಿಯ ರಾಷ್ಟ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಟೀಕಿಸಿದರು.

ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಧರ್ಮ ಗುರು ಫಾ.ವಿಲಿಯಂ ಮಾರ್ಟಿಸ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಕ್ರೈಸ್ತ ಸಂಘಟಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಇದ್ರೀಸ್ ಹೂಡೆ, ಎಸ್‌ಐಓ ಮುಖಂಡ ಅಫ್ವಾನ್ ಹೂಡೆ, ಪ್ರೊ.ಸಿರಿಲ್ ಮಥಾಯಸ್, ಸಿಐಟಿಯು ಮುಖಂಡ ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News