ಬಜ್ಪೆ: ಎಸ್ಡಿಪಿಐ, ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ

Update: 2022-09-24 16:47 GMT

ಬಜ್ಪೆ, ಸೆ.24: ಬಿಜೆಪಿ ಸರಕಾರದ ದ್ವೇಷ ರಾಜಕೀಯದಿಂದ ಎನ್ಐಎ ಅಧಿಕಾರಿಗಳನ್ನು ಛೂಬಿಟ್ಟು ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ನಡೆಸಿದ ಅತಿಕ್ರಮ ದಾಳಿ ಮತ್ತು  ದಬ್ಬಾಳಿಕೆಯ ನೀತಿ ಅನುಸರಿಸಿ ಎಸ್ಡಿಪಿಐ ಮತ್ತು ಪಿಎಫ್ಐ ನಾಯಕರನ್ನು ಅಕ್ರಮ ಬಂಧನ ಮಾಡಲಾಗಿದೆ‌ ಎಂದು ಆರೋಪಿಸಿ ಎಸ್ಡಿಪಿಐ, ಪಿಎಫ್ಐ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬಜ್ಪೆ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ  ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ,  ಕೇರಳದಲ್ಲಿ ನೆರೆ ಬಂದ ಸಂದರ್ಭದಲ್ಲಿ ದೇವಸ್ಥಾನಕ್ಕೆ ನೀರು ಬಂದಾಗ ಅದನ್ನು ಸ್ವಚ್ಛಗೊಳಿಸಿದವರು, ಮಾತ್ರವಲ್ಲದೆ ಕೊರೋನ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಆಗಿ ದುಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ಮೇಲೆ ಎನ್ಐಎ ದಾಳಿ ಹಾಗೂ ಬಂಧನವನ್ನು ತೀರ್ವವಾಗಿ ಖಂಡಿಸಿದರು.

ನಾವು ಸತ್ಯವನ್ನೇ ಹೇಳುವವರು ಇದನ್ನು ಸಹಿಸಲಾಗದವರು ಪೋಲೀಸ್ ಇಲಾಖೆಯ ಬಗ್ಗೆ ನಂಬಿಕೆ ಇಲ್ಲದವರು ಎನ್ಐಎಯವರನ್ನು ಛೂ ಬಿಟ್ಟಿದ್ದಾರೆ. ಎಸ್ಡಿಪಿಐ ಯಾರಿಗೆ ಅನ್ಯಾಯ ಆದರೂ ಅವರು ಯಾವುದೇ ಜಾತಿ ಧರ್ಮದವರು ಆಗಿರಲಿ ಅವರ ನ್ಯಾಯಕ್ಕಾಗಿ ಹೋರಾಡಲಿದೆ ಎಂದರು.

ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅಬೂಬಕರ್ ಕುಳಾಯಿ, ಎಸ್ಡಿಪಿಐ ಮುಲ್ಕಿ ಮೂಡಬಿದಿರೆ ಅಧ್ಯಕ್ಷ ಆಸೀಫ್ ಕೋಟೆಬಾಗಿಲು ಮಾತನಾಡಿದರು.

ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷರಾದ ಯಾಸೀನ್ ಅರ್ಕುಳ, ಬಜಪೆ ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್‌ ಸೇರಿದಂತೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News