ದಲಿತರ ಬೇಡಿಕೆ, ಅಹವಾಲಿಗೆ ಸಿಗದ ಸ್ಪಂದನೆ; ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ದಲಿತ ಮುಖಂಡರ ಅಸಮಾಧಾನ

Update: 2022-09-25 11:54 GMT

ಮಂಗಳೂರು, ಸೆ.25: ದಲಿತರು ತಮಗಾಗುವ ಅನ್ಯಾಯದ ವಿರುದ್ಧ ಇಂತಹ ಸಭೆಗಳಲ್ಲಿ ದ್ವನಿ ಎತ್ತುತ್ತಾರೆ. ವಿವಿಧ ಬೇಡಿಕೆಗಳನ್ನೂ ಮುಂದಿಡುತ್ತಿದ್ದಾರೆ. ಅಹವಾಲುಗಳನ್ನೂ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಅಧೀನ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಸ್ಪಷ್ಟ ಸೂಚನೆ ನೀಡಿದರೂ ಕೂಡ ನಿರೀಕ್ಷಿತ ಕ್ರಮ ವಹಿಸಲಾಗುತ್ತಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರು ನಗರ ಪೊಲೀಸ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ, ನ್ಯಾಯಕೋರಿದರು.

ಕಾವೂರು ಠಾಣಾ ವ್ಯಾಪ್ತಿಯ ಶಾಂತಿನಗರದ ನಿವಾಸಿ, ಬಿಲ್ಲದ ಜಾತಿಗೆ ಸೇರಿದ ಮೋಹಿನಿ ಎಂಬವರು ಎಸ್ಟಿ ಪ್ರಮಾಣಪತ್ರ ಪಡೆದು ಕುದುರೆಮುಖದ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಬಗ್ಗೆ ಮೂರು ಬಾರಿ ‘ಸಿಆರ್‌ಇ ಸೆಲ್’ಗೆ ದೂರು ನೀಡಿರುವೆ. ಕಳೆದ ಸಭೆಯಲ್ಲೂ  ವಿಷಯ ಪ್ರಸ್ತಾಪಿಸಿದ್ದೆ. ಪೊಲೀಸರ ತನಿಖೆಯ ವೇಳೆ ಆ ಮಹಿಳೆಯು ತಪ್ಪೊಪ್ಪಿಕೊಂಡರೂ ಕೂಡ ‘ಸಿಆರ್‌ಇ ಸೆಲ್’ ಅಧಿಕಾರಿಗಳು ಇನ್ನೂ ಎಫ್‌ಐಆರ್ ಮಾಡಿಲ್ಲ. ಸೂಕ್ತ ಕಾನೂನು ಕ್ರಮವನ್ನು ಜರಗಿಸಿಲ್ಲ ಎಂದು ದಲಿತ ಸಂಘಟನೆಯ ಮುಖಂಡ ಸದಾಶಿವ ಉರ್ವಸ್ಟೋರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯೊಬ್ಬರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಲು ಹೋದಾಗ ಸಿಬ್ಬಂದಿಯೊಬ್ಬರು ಹಣ ಕೇಳಿದ್ದಾರೆ. ಅದನ್ನು ಎಎಸ್ಸೈಯೊಬ್ಬರ ಗಮನ ಸೆಳೆದಾಗ ಪೊಲೀಸ್ ಠಾಣೆಯಲ್ಲಿ ಅದೆಲ್ಲಾ ಮಾಮೂಲಿ ಎಂದು ಸಮಜಾಯಿಸಿಕೆ ನೀಡುತ್ತಾರೆ. ಹೀಗಾದರೆ ಹೇಗೆ? ಪೊಲೀಸ್ ಠಾಣೆಯಲ್ಲೇ ಹೀಗಾದರೆ ಬೇರೆ ಇಲಾಖೆಗಳಲ್ಲಿ ನ್ಯಾಯ ಸಿಗಬಹುದೇ? ಎಂದು ದಲಿತ ಮುಖಂಡರೊಬ್ಬರು ಪ್ರಶ್ನಿಸಿದರು.

ಮಂಗಳೂರಿನ ಜ್ಯೋತಿ ಬಳಿಯಲ್ಲಿದ್ದ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಯ ನೆಪದಲ್ಲಿ ತೆರವುಗೊಳಿಸಿ ಅನೇಕ ವರ್ಷಗಳಾಗಿವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ವೃತ್ತವನ್ನು ನಿರ್ಮಿಸಲು ವರ್ಷದ ಹಿಂದೆಯೇ 98 ಲಕ್ಷ ರೂ. ಮಂಜೂರಾಗಿದೆ. ಆದರೂ ಇನ್ನೂ ಅದನ್ನು ನಿರ್ಮಿಸಲು ಸಂಬಂಧಪಟ್ಟ ಇಲಾಖೆಯು ಮುಂದಾಗಿಲ್ಲ ಎಂದು ದಲಿತ ಸಂಘಟನೆಯ ಮುಖಂಡ ಎಸ್.ಪಿ. ಆನಂದ ಆರೋಪಿಸಿದರು.

ಡಿಸಿಪಿ ದಿನೇಶ್ ಕುಮಾರ್ ಪ್ರತಿಕ್ರಿಯಿಸಿ ‘ಈ ಬಗ್ಗೆ ಕಮಿಷನರೇಟ್ ಕಚೇರಿಯಿಂದ ಪಾಲಿಕೆಗೆ ಪತ್ರ ಬರೆಯಲಾಗುವುದು’ ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸ್ವ ಉದ್ಯೋಗಕ್ಕಾಗಿ ಹಲವಾರು ದಲಿತರು ಅರ್ಜಿ ಸಲ್ಲಿಸುತ್ತಾರೆ. ಆದರೆ ಫಲಾನುಭವಿಗಳ ಆಯ್ಕೆಯು ಪಾರದರ್ಶಕವಾಗಿಲ್ಲ. ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುವ ಬದಲು ಜಿಲ್ಲಾಧಿಕಾರಿಯೇ ಆಯ್ಕೆ ಮಾಡುವಂತಹ ಹಿಂದಿನ ವ್ಯವಸ್ಥೆಯು ಮರುಜಾರಿಯಾಗಬೇಕು ಎಂದು ಎಸ್‌ಪಿ ಆನಂದ ಆಗ್ರಹಿಸಿದರು.

ಗಂಜಿಮಠ ಗ್ರಾಮ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಭವನದ ಕಿಟಕಿ, ಬಾಗಿಲು ಮುರಿಯಲಾಗಿದೆ. ಕುರ್ಚಿ ಸಹಿತ ಪೀಠೋಪಕರಣಗಳನ್ನು ಕಳವು ಮಾಡಲಾಗಿದೆ. ಆದಾಗ್ಯೂ ಸಮಾಜ ಕಲ್ಯಾಣ ಇಲಾಖೆಯವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರಗಿಸಲಿಲ್ಲ ಎಂದು ಎಸ್‌ಪಿ ಆನಂದ ಆರೋಪಿಸಿದರು.

ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಬಳಿ ಸುಮಾರು 15 ಕ್ಕೂ ಅಧಿಕ ಪೌರಕಾರ್ಮಿಕರು ಕಳೆದ ಹಲವು ವರ್ಷದಿಂದ ನೆಲೆಸಿದ್ದಾರೆ. ಆ ಮನೆಗಳನ್ನು ತೆರವುಗೊಳಿಸಲು ಸ್ಥಳೀಯ ಕಾರ್ಪೊರೇಟರ್ ಪ್ರಯತ್ನಿಸುತ್ತಿದ್ದಾರೆ. ಖಾಲಿ ಕಾಗದಕ್ಕೆ ಸಹಿ ಹಾಕಲು ಒತ್ತಡ ಹಾಕುತ್ತಿದ್ದಾರೆ. ನಮ್ಮೀ ಸಮಸ್ಯೆಗೆ ನ್ಯಾಯ ಕೋರಿ ಸ್ಥಳೀಯ ಠಾಣೆಗೆ ತೆರಳಿದಾಗ ‘ನಿಮ್ಮದ್ದು ಯಾವಾಗಲೂ ಇದ್ದದ್ದೇ. ನೀವು ಕಾರ್ಪೊರೇಟರನ್ನು ಕಂಡು ಮಾತನಾಡಿ ಎನ್ನುತ್ತಾರೆ. ಅಲ್ಲದೆ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ‘ಠಾಣೆಗೆ ಯಾರೇ ಬಂದರೂ ಇಂತಹ ವರ್ತನೆ ಸರಿಯಲ್ಲ. ಎಲ್ಲರ ಜೊತೆಯೂ ಸೌಜನ್ಯದಿಂದ ವರ್ತಿಸಬೇಕು. ಇಲಾಖೆಯ ಮೇಲೆ ಜನಪ್ರತಿನಿಧಿಗಳಿಂದ ಒತ್ತಡ ಬಂದರೆ ಹಿರಿಯ ಅಧಿಕಾರಿಗಳ ಗಮನ ಸೆಳೆಯಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಗಿರೀಶ್ ಕುಮಾರ್, ಚಂದ್ರ ಕುಮಾರ್, ಮುಖೇಶ್ ಕುಮಾರ್, ಅಮಲ ಜ್ಯೋತಿ, ವಿಶ್ವನಾಥ ಚೆಂಡ್ತಿಮಾರು ಮತ್ತಿತರರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News