ದ.ಕ.ಜಿಲ್ಲೆ : ‘108 ಆ್ಯಂಬುಲೆನ್ಸ್’ ಸೇವೆಯಲ್ಲಿ ವ್ಯತ್ಯಯ

Update: 2022-09-25 14:37 GMT
ಫೈಲ್‌ ಪೋಟೊ 

ಮಂಗಳೂರು, ಸೆ.25: 108 ಆ್ಯಂಬುಲೆನ್ಸ್ ಸೇವೆಗಳ ಸಹಾಯವಾಣಿಯಲ್ಲಿ ತಾಂತ್ರಿಕ ಸಮಸ್ಯೆಯಾದ ಕಾರಣ ದ.ಕ.ಜಿಲ್ಲಾದ್ಯಂತ ರವಿವಾರ 108 ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ತೊಂದರೆಗೊಳಗಾದರು.

ಆದಾಗ್ಯೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರತೀ ತಾಲೂಕು ಆರೋಗ್ಯ ಕೇಂದ್ರ ಮತ್ತು 108 ಆ್ಯಂಬುಲೆನ್ಸ್ ವ್ಯವಸ್ಥಾಪಕರ ದೂರವಾಣಿ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ, ವಾಟ್ಸಾಪ್‌ಗಳಲ್ಲಿ ಹಂಚಲಾಗಿತ್ತು. ಅವರಿಗೆ ಕರೆ ಮಾಡುವ ಮೂಲಕ 108 ಆ್ಯಂಬುಲೆನ್ಸ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಸರ್ವರ್ ಸಮಸ್ಯೆಯ ಸಂದರ್ಭ ಸುಮಾರು 20ಕ್ಕೂ ಹೆಚ್ಚಿನ ಕರೆಗಳು ಬಂದಿದೆ. ಎಲ್ಲಾ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಮಟ್ಟದ ಅಧಿಕಾರಿಗಳಿಂದ ಸಭೆ

ಸರ್ವರ್ ಸಮಸ್ಯೆ ಸೃಷ್ಟಿಯಾದ್ದರಿಂದ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಜಿಲ್ಲೆಗಳ ಡಿಎಚ್‌ಒಗಳ ಜೊತೆ ರವಿವಾರ ತುರ್ತು ಸಭೆ ನಡೆಸಿ ಆರೋಗ್ಯ ವ್ಯವಸ್ಥೆಯಲ್ಲಿ ಮತ್ತು ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದ್ದಾರೆ.

ಮಧ್ಯಾಹ್ನದ ಬಳಿಕ ತಾಂತ್ರಿಕ ಸಮಸ್ಯೆ ಸರಿಯಾಗಿದ್ದು, ಸದ್ಯ 108 ಆ್ಯಂಬುಲೆನ್ಸ್ ಸೇವೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ದೃಷ್ಟಿಯಿಂದ ದೂರವಾಣಿ ಸಂಖ್ಯೆ

108 ಆಂಬುಲೆನ್ಸ್ ಸೇವೆಯಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ ಕರೆ ಸ್ವೀಕಾರಕ್ಕೆ ಅಡಚಣೆಯಾಗಿತ್ತು. ಮಧ್ಯಾಹ್ನದ ಬಳಿಕ ಸಮಸ್ಯೆ ಬಗೆಹರಿದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ  ಈ ಸಂಖ್ಯೆಗಳನ್ನು ಕರೆಗಾಗಿ ಸಿದ್ಧಪಡಿಸಲಾಗಿದೆ, ಅಗತ್ಯವಿದ್ದಲ್ಲಿ ಸಂಪರ್ಕಿಸಬಹುದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಂಗಳೂರು 7483035127, ಬಂಟ್ವಾಳ 08255 -233332, ಬೆಳ್ತಂಗಡಿ 08256-232116, ಸುಳ್ಯ 08257- 230479, ಪುತ್ತೂರು 9880743008, ಬೆಳ್ತಂಗಡಿ 7259320686, ಮುನೀಶ್- 108 ದ.ಕ.ಜಿಲ್ಲಾ ವ್ಯವಸ್ಥಾಪಕರು: 9980463700ನ್ನು ಸಂಪರ್ಕ ಮಾಡಬಹುದು ಎಂದು ಡಿಎಚ್‌ಒ ಕಿಶೋರ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News