ಕುನೊ ಚೀತಾಗಳಿಗೆ ಮರುನಾಮಕರಣಕ್ಕೆ ಸಲಹೆಗಳನ್ನು ಕೋರಿದ ಪ್ರಧಾನಿ ಮೋದಿ

Update: 2022-09-25 17:40 GMT

ಹೊಸದಿಲ್ಲಿ,ಸೆ.25: ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ತಾನು ಬಿಡುಗಡೆಗೊಳಿಸಿರುವ ನಮೀಬಿಯಾದ ಎಂಟು ಚೀತಾಗಳಿಗೆ ಮರುನಾಮಕರಣಕ್ಕಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ವಿಜೇತರು ಚೀತಾಗಳನ್ನು ನೋಡುವ ಮೊದಲ ಅವಕಾಶವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಸೆ.17ರಂದು ಖಂಡಾಂತರ ಪುನರ್ವಸತಿ ಯೋಜನೆಗೆ ಚಾಲನೆ ನೀಡಿದ ಸಂದರ್ಭ ಮೋದಿ ಈ ಚೀತಾಗಳನ್ನು ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದ್ದರು.

ಸ್ಥಳಾಂತರಗೊಂಡಿರುವ ಈ ಚಿರತೆಗಳಿಗೆ ಸದ್ಯಕ್ಕೆ ಆಶಾ,ಸಿಯಾಯಾ, ಒಬಾನ್,ಸಿಬಿಲಿ,ಸಿಯಾಸಾ,ಸವನ್ನಾ,ಶಶಾ ಮತ್ತು ಫ್ರೆಡ್ಡಿ ಎಂದು ಹೆಸರಿಸಲಾಗಿದೆ. ಆಶಾ ಹೆಸರನ್ನು ಖುದ್ದು ಮೋದಿಯವರೇ ನೀಡಿದ್ದಾರೆ.

ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನ 93ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ,MyGov ಪ್ಲಾಟ್‌ಫಾರ್ಮ್‌ನಲ್ಲಿ ಸ್ಪರ್ಧೆಯೊಂದನ್ನು ಆಯೋಜಿಸಲಾಗುವುದು ಮತ್ತು ಕೆಲವು ವಿಷಯಗಳನ್ನು ಹಂಚಿಕೊಳ್ಳುವಂತೆ ತಾನು ಅದರಲ್ಲಿ ಜನತೆಯನ್ನು ಆಗ್ರಹಿಸುವುದಾಗಿ ತಿಳಿಸಿದರು.

‘ಚೀತಾಗಳ ಕುರಿತ ಅಭಿಯಾನಕ್ಕೆ ಯಾವ ಹೆಸರನ್ನಿಡಬೇಕು? ನಾವು ಈ ಎಲ್ಲ ಚೀತಾಗಳಿಗೆ ಹೆಸರಿಡುವ ಬಗ್ಗೆಯೂ ಯೋಚಿಸಬಹುದೇ? ವಿಜೇತರು ಕುನೋದೊಳಗೆ ಈ ಚೀತಾಗಳನ್ನು ನೋಡುವ ಮೊದಲ ಅವಕಾಶವನ್ನು ಪಡೆಯಬಹುದು ’ಎಂದು ಅವರು ಹೇಳಿದರು.

 ಚೀತಾಗಳ ಉಸ್ತುವಾರಿಗಾಗಿ ತಂಡವೊಂದನ್ನು ರಚಿಸಲಾಗಿದ್ದು,ಅವು ಇಲ್ಲಿಯ ವಾತಾವರಣಕ್ಕೆ ಎಷ್ಟು ಹೊಂದಿಕೊಂಡಿವೆ ಎನ್ನುವುದನ್ನು ನೋಡಬೇಕಿದೆ. ಇದರ ಆಧಾರದಲ್ಲಿ ಕೆಲವು ತಿಂಗಳುಗಳ ಬಳಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಮತ್ತು ನೀವು ಚೀತಾಗಳನ್ನು ನೋಡುವುದು ಸಾಧ್ಯವಾಗಲಿದೆ. ಭಾರತಕ್ಕೆ ಚೀತಾಗಳ ಪುನರಾಗಮನದ ಬಗ್ಗೆ ದೇಶದ ಎಲ್ಲ ಮೂಲೆಗಳಿಂದಲೂ ಜನರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. 130 ಕೋ.ಭಾರತೀಯರು ಹರ್ಷಚಿತ್ತರಾಗಿದ್ದಾರೆ,ಹೆಮ್ಮೆಯಿಂದ ಬೀಗುತ್ತಿದ್ದಾರೆ. ಇದು ಪ್ರಕೃತಿಯ ಮೇಲಿನ ಭಾರತದ ಪ್ರೀತಿಯಾಗಿದೆ ’ಎಂದು ಮೋದಿ ನುಡಿದರು.ಕುನೊ ಉದ್ಯಾನವನದಲ್ಲಿಯ ಚೀತಾಗಳ ಮೇಲೆ 24X7 ನಿಗಾಯಿರಿಸಲಾಗಿದೆ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News