ಸೋನಿಯಾರನ್ನು ಭೇಟಿಯಾದ ನಿತೀಶ್-ಲಾಲು: 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಏಕತೆಗೆ ಕರೆ

Update: 2022-09-25 17:59 GMT

ಹೊಸದಿಲ್ಲಿ, ಸೆ.25: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ರವಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಬೇಕಾದ ಅಗತ್ಯವನ್ನು  ಪ್ರತಿಪಾದಿಸಿದರು.

ಸೋನಿಯಾಗಾಂಧಿ ನಿವಾಸವಾದ 10 ಜನಪಥದಲ್ಲಿ  ನಡೆದ ಮಾತುಕತೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಿತೀಶ್ ಕುಮಾರ್ ಅವರು, ‘‘ ಬಿಜೆಪಿಯನ್ನು ಪರಾಭವಗೊಳಿಸಲು ನಾವು ಎಲ್ಲ ಪ್ರತಿಪಕ್ಷಗಳನ್ನು  ಒಂದುಗೂಡಿಸಬೇಕಾಗಿದೆ. ಕಾಂಗ್ರೆಸ್ ಪಕ್ಷವೀಗ ಅದರ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಚುನಾವಣೆ ಮುಗಿದ ಬಳಿಕ ನಾವು ಮತ್ತೊಮ್ಮೆ ಭೇಟಿಯಾಗೋಣವೆಂದು ಸೋನಿಯಾ ಹೇಳಿದ್ದಾರೆ’’ ಎಂದರು..

ಸೋನಿಯಾ ಭೇಟಿಗೆ ಮುನ್ನ ನಿತೀಶ್ ಕಮಾರ್ ಅವರು ಇಂದು ಬೆಳಗ್ಗೆ ಹರ್ಯಾಣದಲ್ಲಿ  ನಡೆದ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ)ದ  ರ್ಯಾಲಿಯಲ್ಲಿ ಭಾಗವಹಿಸಿದ್ದರು. ಮಾಜಿ ಉಪಪ್ರಧಾನಿ ದಿವಂಗತ ದೇವಿಲಾಲ್ ಅವರ ಜನ್ಮದಿನಾಚರಣೆಯ ಅಂಗವಾಗಿ  ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು.

 ಸಭೆಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು  ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಬೇಕೆಂದು ಕರೆ ನೀಡಿದ್ದರು. ಪ್ರತಿಪಕ್ಷಗಳ ಏಕತೆಯಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಘೋರ ಸೋಲನ್ನು ಅನುಭವಿಸಲಿದೆಯೆಂದು ಅವರು ಹೇಳಿದರು.

ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ್ ಚೌಟಾಲಾ, ಶಿರೋಮಣಿ ಅಕಾಲಿ ದಳದ ಸುಖಬೀರ್‌ಸಿಂಗಂ ಬಾದಲ್, ಎನ್‌ಸಿಪಿ ನಾಯಕ ಶರದ್ ಪವಾರ್, ಸಿಪಿಎಂ ನಾಯಕ ಸೀತಾರಾಮ ಯಚೂರಿ ಹಾಗೂ ಸಿವಸೇನಾದ ಅರವಿಂದ ಸಾವಂತ್ ವೇದಿಕೆಯಲ್ಲಿ ಉಪ್ಥಿತರಿದ್ದರು. ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡಾ ವೇದಿಕೆಯಲ್ಲಿದ್ದರು. ಬಿಜೆಪಿಯೇತರ ಪಕ್ಷಗಳ ನಡುವೆ ಏಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಇರಿಸಲಾದ  ಹೆಜ್ಜೆಯೆಂದು  ಪರಿಗಣಿಸಲಾದ ಈ ಸಭೆಯಲ್ಲಿ ಕಾಂಗ್ರೆಸ್‌ನಿಂದ ಯಾರೂ ಭಾಗವಹಿಸದಿರುವುದು ಗಮನಾರ್ಹವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News