ಬಿಲ್ಕಿಸ್ ಬಾನು ಪ್ರಕರಣ: ಜೈಲು ಶಿಕ್ಷೆ ರದ್ದತಿ ಪ್ರಶ್ನಿಸಿದ ಅರ್ಜಿಗಳ ಸಿಂಧುತ್ವವನ್ನು ಪ್ರಶ್ನಿಸಿದ ಅಪರಾಧಿ

Update: 2022-09-25 18:04 GMT

ಹೊಸದಿಲ್ಲಿ, ಸೆ.25:  ತನ್ನ ಹಾಗೂ ಇತರ 10 ಮಂದಿಯ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ಕ್ರಮದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿರುವುದನ್ನು ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಯೊಬ್ಬ ಪ್ರಶ್ನಿಸಿದ್ದಾನೆ. ಈ ಪ್ರಕರಣದೊಂದಿಗೆ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲದೆ ಇರುವುದರಿಂದ ಅವರಿಗೆ ದಾವೆ ಹೂಡುವ ಹಕ್ಕಿಲ್ಲವೆಂದು ಆತ ಪ್ರತಿಪಾದಿಸಿದ್ದಾನೆ.

ಗುಜರಾತ್ ಸರಕಾರದಿಂದ ಜೈಲು ಶಿಕ್ಷೆ ರದ್ದುಗೊಳಿಸಲ್ಪಟ್ಟ ರಾಧೆ ಶ್ಯಾಮ್  ಸಲ್ಲಿಸಿದ ಪ್ರತಿ ಅಫಿಡವಿಟ್‌ನಲ್ಲಿ, ಅರ್ಜಿದಾರರ್ಯಾರೂ ಪ್ರಕರಣದ ಜೊತೆ ಯಾವುದೇ ನಂಟನ್ನು ಹೊಂದಿಲ್ಲ ಹಾಗೂ ಅವರು ರಾಜಕೀಯ ಕಾರ್ಯಕರ್ತರು ಅಥವಾ ಈ ಪ್ರಕರಣಕ್ಕೆ ‘ಅರಿಚಿತರು’  ಎಂದು ಹೇಳಿದ್ದಾನೆ.

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ಯ ಸಿಂಧುತ್ವವನ್ನೇ ಪ್ರಶ್ನಿಸಿರುವ ರಾಧೆಶ್ಯಾಮ್, ಒಂದು ವೇಳೆ ನ್ಯಾಯಾಲಯವು ಇಂತಹ ಅರ್ಜಿಗಳನ್ನು  ಪುರಸ್ಕರಿಸಿದಲ್ಲಿ, ಸಾರ್ವಜನಿಕರಲ್ಲಿ ಯಾರೂ ಬೇಕಾದರೂ ಕೂಡಾ, ಯಾವುದೇ ಕ್ರಿಮಿನಲ್ ವಿಷಯದ ಬಗ್ಗೆ ಯಾವುದೇ ನ್ಯಾಯಾಲಯದ ಮೆಟ್ಟಲೇರುವುದಕ್ಕೆ  ಮುಕ್ತ ಆಹ್ವಾನವನ್ನು ನೀಡಿದಂತಾಗುತ್ತದೆ ಎಂದು ಆತ ಹೇಳಿದ್ದಾನೆ.

ತನ್ನ ಬಿಡುಗಡೆಯನ್ನು  ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವವರ ಪೈಕಿ,   ಒಂದನೇ ಅರ್ಜಿದಾರೆ, ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ಮಾಜಿ ಸಂಸದೆ  ಹಾಗೂ  ಅಖಿಲ ಭಾರತ ಪ್ರಜಾತಾಂತ್ರಿಕ ಮಹಿಳಾ ಸಂಘದ ಉಪಾಧ್ಯಕ್ಷೆಯಾಗಿದ್ದಾರೆ. ಎರಡನೆ ಅರ್ಜಿದಾರೆ ರೇವತಿ ಲಾಲ್ ಅವರು ಸ್ವತಂತ್ರ ಪತ್ರಕರ್ತೆಯೆಂದು ಹೇಳಿಕೊಂಡಿದ್ದಾರೆಯ ಮೂರನೆ ಅರ್ಜಿದಾರೆ ರೂಪ್ ರೇಖಾ ವರ್ಮಾ ಅವರು ಲಕ್ನೋ ವಿವಿಯ ಮಾಜಿ ಉಪಕುಲಪತಿಯೆಂಬ ಅಂಶಗಳನ್ನು ರಾಧೆಶ್ಯಾಮ್ ತನ್ನ ಪ್ರತಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ.

ಕ್ರಿಮಿನಲ್ ಪ್ರಕರಣಗಳಲ್ಲಿ, ಆಯಾ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದವರಿಗೆ ನ್ಯಾಯಾಲಯದ ಹಿಂದಿನ ನಿರ್ಧಾರವನ್ನು ಪ್ರಶ್ನಿಸಲು ಅನುಮತಿಯಿಲ್ಲವೆಂದು ಸುಪ್ರೀಂಕೋರ್ಟ್ ಈ ಮೊದಲಿನ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿತ್ತು ಎಂಬುದಾಗಿಯೂ  ರಾಧೆ ಶ್ಯಾಮ್  ಅಫಿಡವಿಟ್‌ನಲ್ಲಿ ಹೇಳಿದ್ದಾನೆ.

2002ರ ಗುಜರಾತ್‌ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ 11 ಮಂದಿಗೆ  ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು 2008ರ ಜನವರಿ 21ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ವರ್ಷದ ಆಗಸ್ಟ್‌ನಲ್ಲಿ ಗುಜರಾತ್ ಸರಕಾರವು ಈ ಎಲ್ಲಾ 11 ಮಂದಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿ ಬಿಡುಗಡೆಗೊಳಿಸಿತ್ತು. ಈ ಬಗ್ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News