ಗೋವಾ ಚುನಾವಣೆ: ಟಿಎಂಸಿಯಿಂದ 47.54 ಕೋ.ರೂ.,ಬಿಜೆಪಿಯಿಂದ 17.75 ಕೋ.ರೂ.ವೆಚ್ಚ:ಚು.ಆಯೋಗ

Update: 2022-09-25 18:15 GMT

ಹೊಸದಿಲ್ಲಿ,ಸೆ.25: ಟಿಎಂಸಿ ಮತ್ತು ಆಪ್ ಕಣಕ್ಕಿಳಿಯುವುದರೊಂದಿಗೆ ಗೋವಾ ವಿಧಾನಸಭಾ ಚುನಾವಣೆಯು ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಟಿಎಂಸಿ ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚು (47.54 ಕೋ.ರೂ.) ಹಣವನ್ನು ವ್ಯಯಿಸಿದೆ. ಅಧಿಕಾರಕ್ಕೆ ಮರಳಿರುವ ಬಿಜೆಪಿ 17.75 ಕೋ.ರೂ.ಮತ್ತು ಆಪ್ ಸುಮಾರು 3.5 ಕೋ.ರೂ.ಗಳನ್ನು ವೆಚ್ಚ ಮಾಡಿವೆ. ಆಪ್ ಸತತ ಎರಡನೇ ವಿಧಾನಸಭಾ ಚುನಾವಣೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದಿತ್ತು.

ಆಯಾ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.

ಗೋವಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಕನಸು ಕಂಡಿದ್ದ ಕಾಂಗ್ರೆಸ್ 12 ಕೋ.ರೂ.ಗಳನ್ನು ವ್ಯಯಿಸಿತ್ತು. ಕಣದಲ್ಲಿದ್ದ ತನ್ನ 11 ಅಭ್ಯರ್ಥಿಗಳಿಗೆ ತಲಾ 25 ಲ.ರೂ.ನೀಡಿದ್ದ ಎನ್‌ಸಿಪಿ ಪಕ್ಷದ ಕೇಂದ್ರೀಯ ನಿಧಿಯಿಂದ ಪ್ರಚಾರಕ್ಕಾಗಿ ವೆಚ್ಚವನ್ನು ಮಾಡಿತ್ತು. ತನ್ನ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಶಿವಸೇನೆ ಚುನಾವಣೆಗಾಗಿ ಸುಮಾರು 92 ಲ.ರೂ.ಗಳನ್ನು ವ್ಯಯಿಸಿತ್ತು.

ಟಿಎಂಸಿ ತನ್ನ 23 ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿತ್ತಾದರೂ ಒಬ್ಬರೂ ಗೆದ್ದಿಲ್ಲ. ಅದರ ಮಿತ್ರಪಕ್ಷ ಎಂಜಿಪಿ ತಾನು ಸ್ಪರ್ಧಿಸಿದ್ದ 13 ಸ್ಥಾನಗಳ ಪೈಕಿ ಎರಡನ್ನು ಗೆದ್ದುಕೊಂಡಿತ್ತು.

ತನ್ನ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಆಪ್ ಇಬ್ಬರ ಗೆಲುವಿನೊಂದಿಗೆ ಗೋವಾದಲ್ಲಿ ತನ್ನ ಖಾತೆಯನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ.

40 ಸದಸ್ಯಬಲದ ವಿಧಾನಸಭೆಯಲ್ಲಿ 20 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಎಂಜಿಪಿಯ ಇಬ್ಬರು ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರಕಾರವನ್ನು ರಚಿಸಿತ್ತು. ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್‌ನ 11 ಶಾಸಕರ ಪೈಕಿ ಎಂಟು ಜನರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News