ಅಟಾರ್ನಿ ಜನರಲ್ ಹುದ್ದೆ ನಿರಾಕರಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ

Update: 2022-09-25 18:33 GMT
ಮುಕುಲ್ ರೋಹಟಗಿ (File Photo: PTI)

ಹೊಸದಿಲ್ಲಿ: ಮತ್ತೊಮ್ಮೆ ಭಾರತ ಸರ್ಕಾರದ ಅಟಾರ್ನಿ ಜನರಲ್ (Attorney General) ಆಗುವ ಕೇಂದ್ರದ ಪ್ರಸ್ತಾಪವನ್ನು ಹಿರಿಯ ವಕೀಲ ಮುಕುಲ್ ರೋಹಟಗಿ (Mukul Rohatgi) ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

67 ವರ್ಷದ ಮುಕುಲ್ ರೋಹಟಗಿ ಅವರು ಜೂನ್ 2017 ರಲ್ಲಿ ಅಟಾರ್ನಿ ಜನರಲ್ ಹುದ್ದೆಯಿಂದ ಕೆಳಗಿಳಿದಿದ್ದರು. ಅವರ ಬಳಿಕ ಕೆಕೆ ವೇಣುಗೋಪಾಲ್ ಅಟಾರ್ನಿ ಜನರಲ್ ಹುದ್ದೆಯನ್ನು ಅಲಂಕರಿಸಿದ್ದರು.

ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ರೋಹಟಗಿ ಅವರನ್ನು ಮತ್ತೊಮ್ಮೆ ಅಟಾರ್ನಿ ಜನರಲ್‌ ಆಗುವಂತೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು.

ಅಟಾರ್ನಿ ಜನರಲ್ ಆಗಿ ವೇಣುಗೋಪಾಲ್ ಅವರ ಮೊದಲ ಅವಧಿಯು 2020 ರಲ್ಲಿ ಕೊನೆಗೊಳ್ಳಲಿರುವಾಗ, ಇನ್ನೊಂದು ಅವಧಿಗೆ ಮುಂದುವರಿಯುವಂತೆ ಸರ್ಕಾರ ಕೇಳಿಕೊಂಡಿತ್ತು. ಹಾಗಾಗಿ ವೇಣುಗೋಪಾಲ್‌ 2.5 ವರ್ಷ ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.

ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರು ಗುಜರಾತ್ ಗಲಭೆ ಪ್ರಕರಣದಲ್ಲಿ ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ. ಮಾತ್ರವಲ್ಲದೆ ದೇಶಾದ್ಯಂತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಅವರು ವಾದಿಸಿದರು. ತೀರಾ ಇತ್ತೀಚೆಗೆ, ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಪರವಾದ ವಕೀಲರ ತಂಡಕ್ಕೆ ರೋಹಟಗಿ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: ಗೋವು ಭಾರತದ ಆರ್ಥಿಕತೆಯ ಅಡಿಪಾಯ: ಆದಿತ್ಯನಾಥ್‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News