ದ್ವೇಷ ಭಾಷಣದ ಬೆಳೆ: ಬೆಲೆ ತೆರಬೇಕಾದವರು ಯಾರು?

Update: 2022-09-26 05:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಿಂದೆಲ್ಲ ರಾಜಕೀಯ ನಾಯಕನಾಗಬೇಕಾದರೆ ಜನರನ್ನು ಸಂಘಟಿಸಬೇಕಾಗಿತ್ತು. ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಳುವವರ ವಿರುದ್ಧ ಎದೆಯೊಡ್ಡಿ ನಿಲ್ಲಬೇಕಾಗಿತ್ತು. ರೈತರು, ಕಾರ್ಮಿಕರು, ಶೋಷಿತ ಸಮುದಾಯದ ಜನರ ಜೊತೆಗೆ ಒಡನಾಟ ಅತ್ಯಗತ್ಯವಾಗಿತ್ತು. ಹಾಗೆಯೇ, ಜನರ ಅಭಿವೃದ್ಧಿಯ ಕುರಿತಂತೆ ನಾಯಕನಾದವನಿಗೆ ಕಾಳಜಿಯಿರಬೇಕಾಗಿತ್ತು. ಈ ಹಿಂದಿನ ಹತ್ತು ಹಲವು ರಾಜಕೀಯ ಮುತ್ಸದ್ದಿಗಳ ಬದುಕನ್ನು ನೋಡಿದರೆ, ಅವರು ಹಾದು ಬಂದ ಚಳವಳಿಯ ಸುದೀರ್ಘ ಹಾದಿಯೊಂದು ನಮಗೆ ಪರಿಚಯವಾಗುತ್ತದೆ. ಕರ್ನಾಟಕದಲ್ಲೂ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪರಂತಹ ನಾಯಕರಿಗೆ ಇಂತಹ ಸುದೀರ್ಘ ಹೋರಾಟಗಳ ಹಿನ್ನೆಲೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕನಾಗಿ ಕಂಗೊಳಿಸುವುದು ಬಹಳ ಸುಲಭ. ಸಾರ್ವಜನಿಕವಾಗಿ ದ್ವೇಷ ಭಾಷಣವೊಂದು ಮಾಡಿ, ಅದನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಿದರೆ ಆತ ರಾತ್ರೋರಾತ್ರಿ ನಾಯಕನಾಗಿ ಬಿಡುತ್ತಾನೆ. ಜನರ ಅಭಿವೃದ್ಧಿಯ ಬಗ್ಗೆ ಮಾತನಾಡುವವನು ಮೂಲೆಗುಂಪಾಗಿ, ಹೊಡಿ, ಕೊಲ್ಲು, ಬೆಂಕಿ ಹಚ್ಚು ಎಂದು ಕರೆ ನೀಡುವವನು ಮುನ್ನಲೆಗೆ ಬರುತ್ತಾನೆ. ಅಷ್ಟೇ ಏಕೆ, ದೇಶಕ್ಕೆ ಬಾಂಬಿಟ್ಟ ಆರೋಪದಲ್ಲಿ ಜೈಲು ಪಾಲಾಗಿದ್ದಾಕೆಯೊಬ್ಬಳು ಅಲ್ಲಿಂದ ಹೊರ ಬಂದು ಪಕ್ಷವೊಂದರಿಂದ ಟಿಕೆಟ್ ಪಡೆದು ಭಾರೀ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸುತ್ತಾಳೆ. ದ್ವೇಷದಿಂದಲೇ ಸುಲಭದಲ್ಲಿ ನಾಯಕನಾಗುವ ಅವಕಾಶವಿರುವಾಗ ಜನಸಾಮಾನ್ಯರ ಬದುಕಿಗಾಗಿ ಮಿಡಿದು ನಾಯಕನಾಗುವ ಕಷ್ಟದ ದಾರಿಯನ್ನು ರಾಜಕಾರಣಿಗಳು ಯಾಕಾದರೂ ಆರಿಸುತ್ತಾರೆ? ಆದುದರಿಂದಲೇ ನಿನ್ನೆ ಮೊನ್ನೆ ಚಿಗುರು ಮೀಸೆ ಮೂಡಿದವರೆಲ್ಲ ತಮ್ಮ ದ್ವೇಷ ಭಾಷಣದ ಬೆಂಕಿಯ ಜೊತೆಗೆ ದೇಶಾದ್ಯಂತ ನಾಯಕರಂತೆ ಮಿಂಚುತ್ತಿದ್ದಾರೆ. ಇತ್ತ ಮಾಧ್ಯಮಗಳೂ ಜನರನ್ನು ಸುಲಭದಲ್ಲಿ ತಲುಪುವ ದಾರಿಯನ್ನು ನೋಡುತ್ತಿವೆ. ಹಿಂದೆಲ್ಲ ಅಶ್ಲೀಲ ದೃಶ್ಯಗಳು, ಅಶ್ಲೀಲ ವರದಿ, ಅಪರಾಧ ಪ್ರಕರಣಗಳನ್ನು ವೈಭವೀಕರಿಸಿ ಮಾಧ್ಯಮ ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿತ್ತು. 

ಆದರೆ ಇಂದು ಸಮಾಜವನ್ನು ಒಡೆಯುವ, ಸಮಾಜಕ್ಕೆ ಬೆಂಕಿ ಹಚ್ಚುವ ದ್ವೇಷ ಭಾಷಣಗಳನ್ನು ಹಂಚಿ ಸುಲಭದಲ್ಲಿ ಜನರನ್ನು ತಲುಪುವ ದಾರಿಯನ್ನು ಬಹುತೇಕ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಕಂಡುಕೊಂಡಿವೆ. ಸಮಾಜವನ್ನು ಒಡೆಯುವ ಮಾತಿಗೆ ಮಾಧ್ಯಮಗಳು ಅತಿ ಪ್ರಾಶಸ್ತ್ಯವನ್ನು ನೀಡುವ ಮೂಲಕ, ಆ ಮಾತನ್ನಾಡಿದ ವ್ಯಕ್ತಿಯನ್ನು ಸಮಾಜದ ಮುನ್ನೆಲೆಗೆ ತಂದು ನಿಲ್ಲಿಸುತ್ತಿದೆ. ಪರಿಣಾಮ ಇಂದು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹಿನ್ನಡೆಯಾಗಿದೆ. ಇದೇ ಸಂದರ್ಭದಲ್ಲಿ ಕೋಮುಗಲಭೆ, ಹಿಂಸಾಚಾರಗಳು ಜನರ ಜೀವನಾವಶ್ಯಕ ವಿಷಯಗಳಾಗಿ ಕಂಗೊಳಿಸುತ್ತಿವೆ. ಸಮಾಜದಲ್ಲಿ ಅಳಿವಿನ ಅಂಚಿನಲ್ಲಿರುವ ಒಳಿತುಗಳು ಯಾರಿಗೂ ಬೇಡವಾಗಿದೆ. ಇಂತಹ ಸಂದರ್ಭದಲ್ಲಿ ದ್ವೇಷ ಭಾಷಣ ಪ್ರಸಾರಕ್ಕೆ ಸಂಬಂಧಿಸಿ ಹೊಣೆಗಾರಿಕೆಯನ್ನು ಮರೆತ ಮಾಧ್ಯಮಗಳನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಕೈಗೆತ್ತಿಕೊಂಡು ಮಾತನಾಡಿದ ಸುಪ್ರೀಂಕೋರ್ಟ್, ‘‘ದ್ವೇಷ ಭಾಷಣ ಇಡೀ ದೇಶವನ್ನೇ ವಿಷ ಪೂರಿತಗೊಳಿಸುತ್ತದೆ. ಅದಕ್ಕೆ ಆಸ್ಪದ ನೀಡಲಾಗದು. ರಾಜಕೀಯ ಪಕ್ಷಗಳು ಬಂದು ಹೋಗುತ್ತವೆ. ಆದರೆ, ರಾಷ್ಟ್ರ ಮತ್ತು ಪತ್ರಿಕಾ ಸಂಸ್ಥೆಗಳು ಮತ್ತೂ ಉಳಿಯುತ್ತವೆ. ದ್ವೇಷ ಭಾಷಣವನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳ ಜವಾಬ್ದಾರಿ ಮಹತ್ವ ಪೂರ್ಣವಾದುದು. ಪತ್ರಿಕಾ ಸ್ವಾತಂತ್ರದ ಹೆಸರಿನಲ್ಲಿ ದ್ವೇಷವನ್ನು ಹರಡುವುದು ಸಲ್ಲ. ಮಾಧ್ಯಮಗಳು ತಮಗೆ ತಾವೇ ಗೆರೆಯನ್ನು ಹಾಕಿಕೊಳ್ಳಬೇಕು’’ ಎಂದು ಹೇಳಿತು. ಸರಕಾರ ಇಂತಹ ದ್ವೇಷ ಭಾಷಣಗಳ ಬಗ್ಗೆ ಯಾಕೆ ಮೂಕವಾಗಿದೆ ಎಂದೂ ಕೇಳಿದೆ. ಸುಪ್ರೀಂಕೋರ್ಟ್‌ನ ಪ್ರಶ್ನೆ, ನೆಮ್ಮದಿಯ ನಾಳೆಯನ್ನು ಬಯಸುವ ಸರ್ವ ಭಾರತೀಯರ ಪ್ರಶ್ನೆಯೂ ಆಗಿದೆ. ಆದರೆ ಇಂದು ದ್ವೇಷ ಭಾಷಣಗಳ ತಳಹದಿಯಲ್ಲೇ ಸರಕಾರಗಳು ರಚನೆಯಾಗುತ್ತಿರುವಾಗ, ಸರಕಾರದ ನೇತೃತ್ವವನ್ನು ವಹಿಸುವ ನಾಯಕನ ಆಯ್ಕೆಯಾಗುತ್ತಿರುವಾಗ, ಇಂತಹ ಪ್ರಶ್ನೆಗಳಿಗೆ ಸರಕಾರದಿಂದ ಉತ್ತರವನ್ನು ನಿರೀಕ್ಷಿಸಲು ಸಾಧ್ಯವೆ?

ಸುಪ್ರೀಂಕೋರ್ಟ್ ಇಂತಹದೊಂದು ಪ್ರಶ್ನೆಯನ್ನು ಸರಕಾರಕ್ಕೆ ಕೇಳುತ್ತಿರುವ ಹೊತ್ತಿನಲ್ಲೇ, ನಮ್ಮದೇ ರಾಜ್ಯ ಸರಕಾರ ದ್ವೇಷ ಭಾಷಣಕ್ಕೆ ಸಂಬಂಧಿಸಿ ಸಂಘಪರಿವಾರದ ನಾಯಕರ ಮೇಲೆ ದಾಖಲಾಗಿರುವ 34 ಮೊಕದ್ದಮೆಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಸಮಾವೇಶ, ಪ್ರತಿಭಟನೆ ಮೊದಲಾದ ಸಂದರ್ಭಗಳಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಭಾಷಣಗಳನ್ನು ಇವರು ಮಾಡಿದ್ದರು. ಇವರ ಮೇಲಿರುವ ಮೊಕದ್ದಮೆಗಳನ್ನು ಹಿಂದೆಗೆಯಬಾರದು ಎಂದು ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರೂ, ಸರಕಾರ ಈ ದ್ವೇಷ ಭಾಷಣಕಾರರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯಲು ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ದ್ವೇಷ ಭಾಷಣ ಮಾತ್ರವಲ್ಲ, ಕೋಮುಗಲಭೆಗಳಲ್ಲಿ ಭಾಗವಹಿಸಿದವರ ಪ್ರಕರಣಗಳನ್ನೂ ಸರಕಾರ ವಜಾಗೊಳಿಸಿದೆ. ಅಷ್ಟೇ ಏಕೆ, ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳಲ್ಲಿ ಭಾಗವಹಿಸಿದ ಅಪರಾಧಿಗಳನ್ನೇ ಸರಕಾರ ಬಿಡುಗಡೆಗೊಳಿಸಿದೆ. ಆದರೆ ಇದರ ವಿರುದ್ಧ ನಮ್ಮ ನ್ಯಾಯಾಲಯ ಅಸಹಾಯಕವಾಗಿದೆ. ಹೀಗಿರುವಾಗ, ಕೇವಲ ಮಾಧ್ಯಮಗಳನ್ನಷ್ಟೇ ಹೊಣೆ ಮಾಡಿರುವುದರಿಂದ ದ್ವೇಷ ಭಾಷಣಗಳ ದುಷ್ಪರಿಣಾಮಗಳನ್ನು ತಡೆಯುವುದಕ್ಕೆ ಸಾಧ್ಯವೆ?

 ದ್ವೇಷ ಭಾಷಣಗಳನ್ನು ಮಾಡಿದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವೇ ಆರೋಪಿಗಳನ್ನು ಬಿಡುಗಡೆಗೊಳಿಸಿದ ಉದಾಹರಣೆಗಳಿವೆ. ಪ್ರವಾದಿ ನಿಂದನೆಗೆ ಸಂಬಂಧಿಸಿ ದ್ವೇಷ ಹೇಳಿಕೆಗಳನ್ನು ನೀಡಿದ ಬಿಜೆಪಿಯ ನಾಯಕಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಈ ವರೆಗೆ ಸಾಧ್ಯವಾಗಿಲ್ಲ. ಪೊಲೀಸ್ ಇಲಾಖೆಗಳು ದ್ವೇಷ ಭಾಷಣಗಳನ್ನು ಕೇಳಿಯೂ ಕಿವುಡಾಗಿವೆ. ವಿಪರ್ಯಾಸವೆಂದರೆ, ಇಂದು ದ್ವೇಷ ಭಾಷಣಗಳ ಪ್ರಭಾವ ನ್ಯಾಯಾಲಯದ ತೀರ್ಪುಗಳ ಮೇಲೂ ಬಿದ್ದಿದೆ. ನ್ಯಾಯಾಲಯದಂತಹ ಉನ್ನತ ಸ್ಥಾನಗಳಲ್ಲಿ ಕುಳಿತವರೂ ಸಾರ್ವಜನಿಕವಾಗಿ ದ್ವೇಷ ಭಾಷಣಕಾರರ ಜೊತೆಗೆ ಗುರುತಿಸಿಕೊಂಡು ಅವರ ಭಾಷಣಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ. ಹೀಗಿರುವಾಗ, ದ್ವೇಷ ಭಾಷಣದ ಕುರಿತಂತೆ ಮಾಧ್ಯಮಗಳನ್ನಷ್ಟೇ ಹೊಣೆ ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಸುಪ್ರೀಂಕೋರ್ಟ್ ಮಾಡಿದೆ ಎಂದು ನಾವು ಭಾವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News