BBMP ಮುಖ್ಯ ಆಯುಕ್ತ, ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2022-09-27 15:19 GMT

ಬೆಂಗಳೂರು, ಸೆ.27: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಿಬಿಎಂಪಿ ಯೋಜನೆಗಳಲ್ಲಿ ಜನಪ್ರತಿನಿಧಿ, ಸಚಿವರ ಭಾವಚಿತ್ರ ಮತ್ತು ಹೆಸರನ್ನು ಪ್ರದರ್ಶಿಸುವ ಮೂಲಕ ನಾಗರಿಕರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಲೋಕಾಯುಕ್ತರಿಗೆ ನೈಜ ಹೋರಾಟಗಾರರ ವೇದಿಕೆ ದೂರು ಸಲ್ಲಿಸಿದೆ.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಹೋರಾಟಗಾರ ಎಚ್.ಎಂ.ವೆಂಕಟೇಶ್, ಸರಕಾರದ ಯೋಜನೆಗಳಿಗೆ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಮಾತ್ರ ಹಾಕಲು ಅವಕಾಶ ಇದೆ. ಈ ಸಂಬಂಧ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದರು. 

ಆದರೂ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರಕಾರ ಯೋಜನೆಗಳಲ್ಲಿ ಜನಪ್ರತಿನಿಧಿ, ಸಚಿವರ ಭಾವಚಿತ್ರ ಮತ್ತು ಹೆಸರನ್ನು ಪ್ರದರ್ಶಿಸುತ್ತಿದ್ದಾರೆ. ಕಾರ್ಯಾಂಗದಲ್ಲಿರುವ ಅಧಿಕಾರಿ ತಮ್ಮ ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ತಮಗೆ ಅನುಕೂಲ ಮಾಡುವ ರಾಜಕಾರಣಿಗಳೊಂದಿಗೆ ಶಾಮೀಲಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪವೆಸಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ದೂರು:  ತುಷಾರ್ ಗಿರಿನಾಥ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿದರೂ, ಎಫ್‍ಐಆರ್ ದಾಖಲಿಸಲಿಲ್ಲ. ಅವರೂ ಸಹ ತಮ್ಮ ಸಹಪಾಠಿಯನ್ನು ರಕ್ಷಿಸುತ್ತಿರುವುದು ಬಹಿರಂಗವಾಗಿದೆ ಎಂದು ವೆಂಕಟೇಶ್ ದೂರಿದರು.

ಈ ಸಂಬಂಧ ಪ್ರತಾಪ್ ರೆಡ್ಡಿ ಹಾಗೂ ತುಷಾರ್ ಗಿರಿನಾಥ್ ವಿರುದ್ಧ ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವ ಕಾಯ್ದೆ 1981 ಅಡಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಅಧಿಕಾರ ದುರುಪಯೋಗ ಮತ್ತು ಕರ್ತವ್ಯಲೋಪವೆಸಗಿದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News