ಕೇಂದ್ರ ಸರಕಾರ ವೀಡಿಯೊಗಳಿಗೆ ನಿರ್ಬಂಧ ವಿಧಿಸಿದ ಯೂಟ್ಯೂಬ್ ಚಾನೆಲ್‌ ಗಳು ಯಾವುವು? ಏಕೆ ?: ಇಲ್ಲಿದೆ ಪೂರ್ಣ ವಿವರ

Update: 2022-09-27 18:07 GMT

ಹೊಸದಿಲ್ಲಿ: ಐಟಿ ನಿಯಮ-2021ರ ಅಡಿಯಲ್ಲಿ 10 ಯೂಟ್ಯೂಬ್ ಚಾನೆಲ್‌ಗಳಿಂದ 45 ಯೂಟ್ಯೂಬ್(YouTube) ವೀಡಿಯೊಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ(Ministry of Information and Broadcasting) ನಿರ್ಧರಿಸಿದ್ದು, ಆ ವಿಡಿಯೋಗಳನ್ನು ಯೂಟ್ಯೂಬಿನಿಂದ ತೆಗೆದು ಹಾಕಲು ನಿರ್ದೇಶಿಸಿದೆ. ಆಂತರಿಕ ಭದ್ರತೆ, ಅಥವಾ ರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಈ ನಿಯಮವು ದೇಶದ ಸಾರ್ವಭೌಮ ಸಮಗ್ರತೆಗೆ ಬೆದರಿಕೆಯಾಗಿ ಕಂಡುಬರುವ ಡಿಜಿಟಲ್(Digital) ವಿಷಯವನ್ನು ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. 

ಕಳೆದ ಒಂದು ವರ್ಷದಿಂದ ಇಂತಹ ಹಲವು ಡಿಜಿಟಲ್ ವಿಷಯವನ್ನು ನಿರ್ಬಂಧಿಸುವುದನ್ನು ಸರ್ಕಾರ ಮಾಡಿಕೊಂಡು ಬಂದಿದೆ. ಕೇವಲ ರಾಜಕೀಯ ವಿಷಯ ಟ್ವೀಟ್‌ ಮಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರ ಕೆಲವೊಂದು ಟ್ವಿಟರ್‌ ಖಾತೆಗಳನ್ನು ಅಮಾನತುಗೊಳಿಸಲು ಸೂಚಿಸಿದೆ ಎಂದು ಟ್ವಿಟರ್‌ ಕರ್ನಾಟಕ ಹೈಕೋರ್ಟಿನಲ್ಲಿ ಹೇಳಿರುವ ನಡುವೆಯೇ ಮತ್ತೆ ಡಿಜಿಟಲ್‌ ಕಂಟೆಂಟ್‌ಗಳ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. 

“ಗುಪ್ತಚರ ಏಜೆನ್ಸಿಗಳ ಮಾಹಿತಿಯ ಆಧಾರದ ಮೇಲೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು 10 ಯೂಟ್ಯೂಬ್ ಚಾನೆಲ್‌ಗಳಿಂದ 45 ಯೂಟ್ಯೂಬ್ ವೀಡಿಯೊಗಳನ್ನು ನಿರ್ಬಂಧಿಸಲು ಯೂಟ್ಯೂಬಿಗೆ ನಿರ್ದೇಶಿಸಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021 ರ ನಿಬಂಧನೆಗಳ ಅಡಿಯಲ್ಲಿ ಸಂಬಂಧಿಸಿದ ವೀಡಿಯೊಗಳನ್ನು ನಿರ್ಬಂಧಿಸಲು 23.09.2022 ರಂದು ಆದೇಶಗಳನ್ನು ನೀಡಲಾಯಿತು. ನಿರ್ಬಂಧಿಸಲಾದ ವೀಡಿಯೊಗಳು 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದವು.

ನಿರ್ಬಂಧಿಸಿದ ಯೂಟ್ಯೂಬ್ ವೀಡಿಯೊಗಳ ವಿಷಯವು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಉದ್ದೇಶದಿಂದ ಹರಡಿದ ನಕಲಿ ಸುದ್ದಿ ಮತ್ತು ಮಾರ್ಫ್ ಮಾಡಿದ ವೀಡಿಯೊಗಳನ್ನು ಒಳಗೊಂಡಿತ್ತು. ಉದಾಹರಣೆಗೆ ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ ಎಂಬ ಸುಳ್ಳು ಮಾಹಿತಿಗಳು, ಧಾರ್ಮಿಕ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಬೆದರಿಕೆಗಳು, ಭಾರತದಲ್ಲಿ ಅಂತರ್ಯುದ್ಧದ ಘೋಷಣೆ ಇತ್ಯಾದಿಗಳನ್ನು ಒಳಗೊಂಡಿವೆ. ಅಂತಹ ವೀಡಿಯೊಗಳು ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವ ವಸ್ತುವನ್ನು‌ ಹೊಂದಿರುವುದು ಕಂಡುಬಂದಿದೆ” ಎಂದು ಕೇಂದ್ರ ಸಚಿವಾಲಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. 

“ಸಚಿವಾಲಯವು ನಿರ್ಬಂಧಿಸಿದ ಕೆಲವು ವೀಡಿಯೊಗಳನ್ನು ಅಗ್ನಿಪಥ್ ಯೋಜನೆ, ಭಾರತೀಯ ಸಶಸ್ತ್ರ ಪಡೆಗಳು, ಭಾರತದ ರಾಷ್ಟ್ರೀಯ ಭದ್ರತೆ, ಕಾಶ್ಮೀರ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ತಪ್ಪು ಮಾಹಿತಿಯನ್ನು ಹರಡಲು ಬಳಸಲಾಗುತ್ತಿದೆ. ಈ ವಿಷಯವನ್ನು ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸುಳ್ಳು ಮತ್ತು ಸೂಕ್ಷ್ಮವೆಂದು ಗಮನಿಸಲಾಗಿದೆ. ಕೆಲವು ವೀಡಿಯೊಗಳು ಭಾರತದ ಭೂಪ್ರದೇಶದ ಹೊರಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಭಾಗಗಳು ಹೊರಗೆ ಇರುವಂತೆ ಭಾರತದ ತಪ್ಪಾದ ಗಡಿಯನ್ನು ಚಿತ್ರಿಸಲಾಗಿದೆ.  ಇಂತಹ ಕಾರ್ಟೊಗ್ರಾಫಿಕ್ ತಪ್ಪು ನಿರೂಪಣೆಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಎಂದು ವರದಿಯಾಗಿದೆ.

ಸಚಿವಾಲಯವು ನಿರ್ಬಂಧಿಸಿದ ವಿಷಯವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಅದರಂತೆ, ಇಂತಹ ವಿಷಯಗಳು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ರ ವ್ಯಾಪ್ತಿಯಲ್ಲಿ ಒಳಪಡುತ್ತವೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ಭಾರತ ಸರ್ಕಾರವು ಬದ್ಧವಾಗಿದೆ.” ಎಂದು ಸಚಿವಾಲಯ ಹೇಳಿಕೊಂಡಿದೆ. 

ಭವಿಷ್ಯದಲ್ಲಿ ಇಂತಹ ವಿಷಯವನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಮಾಡಲು ತಿರುಚಿದ ವೀಡಿಯೊಗಳು ಮತ್ತು ಚಿತ್ರಗಳನ್ನು ಬಳಸಲಾಗುತ್ತಿದೆ ಎಂಬ ಆರೋಪವನ್ನು ಈ ವಿಡಿಯೋಗಳ ವಿರುದ್ಧ ಸಚಿವಾಲಯ ಮಾಡಿದ್ದು, ನಿರ್ಬಂಧಿಸಲಾದ ವೀಡಿಯೊಗಳಲ್ಲಿ ಜನಪ್ರಿಯ ಯೂಟ್ಯೂಬರ್ ಧ್ರುವ ರಾಥಿ ಅವರ ಒಂದು ವೀಡಿಯೊ ಕೂಡಾ ಸೇರಿದೆ. 

'ದ ಲೈವ್ ಟಿವಿ' (The Live TV) ಎಂಬ ಯೂಟ್ಯೂಬ್ ಚಾನೆಲ್‌ನಿಂದ 13, 'ಹಿಂದ್ ವಾಯ್ಸ್‌' (Hind Voice) ಎಂಬ ಚಾನೆಲ್‌ ನಿಂದ 9, 'ಇಂಕಿಲಾಬ್ ಲೈವ್' (Inqilab Live) ಮತ್ತು 'ದೇಶ್ ಇಂಡಿಯಾ ಲೈವ್‌' (Desh India Live ) ನಿಂದ ತಲಾ 6, 'ಮಿಸ್ಟರ್ ರಿಯಾಕ್ಷನ್ ವಾಲಾ' (Mr Reaction Wala)ದಿಂದ 4, 'ಗೆಟ್‌ಸೆಟ್‌ಫ್ಲೈಫ್ಯಾಕ್ಟ್' (GetsetflyFACT) ಮತ್ತು '4 ಪಿಎಂ'ನಿಂದ (4PM) ತಲಾ ಎರಡು ಮತ್ತು 'ವಿನಯ್ ಪ್ರತಾಪ್ ಸಿಂಗ್ ಭೋಪರ್'(Vinay Pratap Singh Bhopar), 'ನ್ಯಾಷನಲ್ ಅಡ್ಡಾ' (National Adda) ಮತ್ತು 'ಧ್ರುವ್ ರಾಠಿ' (Dhruv Rathee) ಅವರ ಚಾನಲ್‌ಗಳಿಂದ ತಲಾ ಒಂದು ವೀಡಿಯೊಗಳನ್ನು ತೆಗೆದುಹಾಕಲಾಗಿದೆ ಎಂದು TheNewIndianExpress.com ವರದಿ ಮಾಡಿದೆ. 

ಧ್ರುವ ರಾಠಿ ಅವರ ಚಾನೆಲ್‌ನಿಂದ ತೆಗೆದು ಹಾಕಲಾದ ವೀಡಿಯೊವನ್ನು 2022 ರ ಏಪ್ರಿಲ್ 11 ರಂದು ಅಪ್‌ಲೋಡ್ ಮಾಡಲಾಗಿತ್ತು. “Why Imran Khan lost? Political crisis in Pakistan,” (ಇಮ್ರಾನ್‌ ಖಾನ್‌ ಯಾಕೆ ಸೋತರು? ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು) ಎಂಬ ಶೀರ್ಷಿಕೆಯ ಈ ವಿಡಿಯೋ ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಅಧಿಕಾರ ಕಳೆದುಕೊಂಡಿರುವ ಬಗ್ಗೆ ಧ್ರುವ್‌ ರಾಠಿ ನೀಡಿದ ವಿಶ್ಲೇಷಣೆಯಾಗಿತ್ತು.   

ಈ ವೀಡಿಯೊದ 4.41 ನಿಮಿಷಗಳ ಅವಧಿ ವೇಳೆ ತನ್ನ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನದ ಒಂದು ಭೂಪಟವನ್ನು ತೋರಿಸಿದ್ದರು. ಆ ಭೂಪಟದಲ್ಲಿ ಭಾರತದ ಕೆಲವು ಭೂಭಾಗಗಳು ಪಾಕಿಸ್ತಾನಕ್ಕೆ ಸೇರಿದಂತೆ ತೋರಿಸಲಾಗಿತ್ತು, ಹಾಗಾಗಿ ಅದನ್ನು ನಿರ್ಬಂಧಿಸುವಂತೆ ಕೇಂದ್ರ ಸಚಿವಾಲಯ ನಿರ್ದೇಶಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News