ಮಂಗಳೂರು: ನಂತೂರ್ ವೃತ್ತದ ಬಳಿ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಯುವಕನಿಂದ ಮತ್ತೆ ಏಕಾಂಗಿ ಪ್ರತಿಭಟನೆ

Update: 2022-09-28 08:37 GMT

ಮಂಗಳೂರು, ಸೆ.28: ಕೆಲ ಸಮಯದ ಹಿಂದೆ ನಗರದ ರಸ್ತೆಯ ಅವ್ಯವಸ್ಥೆಯಿಂದಾಗಿ ಅವಘಡಕ್ಕೀಡಾಗಿ ಮೃತಪಟ್ಟ ಯುವಕನ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ನಗರದಲ್ಲಿ ಏಕಾಂಗಿ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದ ಯುವಕ ಲಿಖಿತ್ ರೈ ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

‘ಮೋದಿ ಹೆ ತೋ ಮುಮ್ಕಿನ್ ಹೆ’ ಎಂಬ ಬ್ಯಾನರ್ ಹಿಡಿದು ನಗರದ ನಂತೂರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಲಿಖಿತ್‌ರೈ ಪ್ರಧಾನಿ ಮೋದಿಯವರು ಮತ್ತು ಮಂಗಳೂರಿಗೆ ಬನ್ನಿ ಆ ಮೂಲಕವಾದರೂ ರಸ್ತೆಗಳ ಹೊಂಡ ಮುಚ್ಚಲಿ ಎಂದು ಆಗ್ರಹಿಸಿದರು.

‘‘ರಾಷ್ಟ್ರೀಯ ಹೆದ್ದಾರಿಗಳು, ನಗರದ ರಸ್ತೆಗಳು ಮತ್ತೆ ಹೊಂಡಗಳಿಂದ ತುಂಬಿದ್ದರೂ ಯಾರೂ ಕೇಳುವವರಿಲ್ಲ. ಕೆಲ ಸಮಯದ ಹಿಂದೆ ನಾನು ರಸ್ತೆಗಿಳಿದು ಪ್ರತಿಭಟಿಸಿದ ಬಳಿಕ ಕೆಲವೆಡೆ ರಸ್ತೆ ದುರಸ್ತಿ ಕಾರ್ಯ, ಹೊಂಡ ತುಂಬಿಸುವ ಕಾರ್ಯ ಮಾಡಲಾಗಿತ್ತು. ಮತ್ತೆ ಅದೇ ಪರಿಸ್ಥಿತಿ. ಮಾಡಿರುವ ಪ್ಯಾಚ್‌ವರ್ಕ್ ಎದ್ದು ಹೋಗಿದೆ. ಪ್ರಧಾನಿ ಮೋದಿಯವರು ಮಂಗಳೂರಿಗೆ ಬರುವಾಗ ಎರಡು ದಿನದಲ್ಲಿ ಅವರು ಬರುವ ಕೂಳೂರು ರಸ್ತೆಯನ್ನು ಮೇಕಪ್ ಮಾಡಿ ಚಂದ ಮಾಡಲಾಗಿತ್ತು. ಅದರ ಹಿಂದೆ ಅದೆಷ್ಟು ಸಮಯ ಆ ರಸ್ತೆಯನ್ನು ಕೇಳುವವರಿರಲಿಲ್ಲ. ಬ್ಯಾಂಕ್ ಹಗರಣ ಇನ್ಯಾವುದೋ ರೀತಿಯ ಹಗರಣಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ದೇಶದ ಪ್ರಧಾನಿಯವರಿಗೆ ಮೋಸ ಮಾಡಿದ್ದಾರೆ. ಅವರು ಬರುವಾಗ ರಸ್ತೆ ಅಂದಗೊಳಿಸಿ ಮಂಗಳೂರು ಸ್ಮಾರ್ಟ್ ಸಿಟಿ ಆಗಿದೆ ಎಂಬುದನ್ನು ಬಿಂಬಿಸಲಾಗಿದೆ. ಆದರೆ ಇವರ ಹಣೆಬರಹ ನಮಗೆ ಗೊತ್ತು. ಪ್ರಧಾನಿಯವರು ಒಮ್ಮೆ ಸಕಲೇಶಪುರ ರಸ್ತೆಯಿಂದ ಮಂಗಳೂರಿಗೆ ಬರಲಿ’’ ಎಂದು ಪ್ರತಿಭಟನಾ ನಿರತ ಲಿಖಿತ್ ರೈ ಹೇಳಿದರು.

‘‘ನಮ್ಮ ದೇಶದ ಪ್ರಧಾನಿಗೆ ನಾವು ಗೌರವ ಕೊಡುತ್ತೇವೆ. ಅದರಿಂದಾಗಿಯೇ ಅಂದು ಅವರು ಬರುವ ಸಂದರ್ಭದಲ್ಲಿಯೂ ಅವರಿಗೆ ಗೌರವ ನೀಡಿ ಯಾವುದೇ ಪ್ರತಿಭಟನೆ ನಡೆಸಿಲ್ಲ. ಮೋದಿಯವರ ಮೇಲೆ ನಂಬಿಕೆ ಇನ್ನೂ ಇದೆ. ನನಗೆ ಯಾವುದೇ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಮೇಲೆ ಯಾವುದೇ ದ್ವೇಷ ಇಲ್ಲ. ನಾನು ಈ ಹಿಂದೆ ಬೀದಿಗಿಳಿದು ಪ್ರತಿಭಟಿಸಿದಾಗ ಮನಪಾ ಅಧಿಕಾರಿಗಳು ಬಂದು ಒಂದಷ್ಟು ದಿನಗಳು ಬೇಕು ಎಂದು ಹೇಳಿಕೊಂಡಿದ್ದರು. ಅದರಂತೆ ಸುಮ್ಮನಿದ್ದೆ. ಆದರೆ ಇಷ್ಟು ದಿನ ಆದರೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಮಾತ್ರ ಇನ್ನೂ ನಿದ್ದೆಯಿಂದ ಎದ್ದಂತಿಲ್ಲ’’ ಎಂದು ಲಿಖಿತ್ ರೈ ದೂರಿದರು.

ಅಪಘಾತ ಆಗಿ ಯುವಕ ಮೃತಪಟ್ಟ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಅದು ಆತ ವೇಗವಾಗಿ ಚಲಾಯಿಸಿದ ಕಾರಣ ಎಂದಿದ್ದಾರೆ. 2018ರಿಂದ 2020 ರವರೆಗೆ ಮಂಗಳೂರಿನಿಂದ ಬೆಂಗಳೂರು ರಸ್ತೆಯಲ್ಲಿ ಹೊಂಡಗಳಿಂದ ಸುಮಾರು ಐದು ಸಾವಿರದಷ್ಟು ಪ್ರಯಾಣಿಕರು ಈ ರಸ್ತೆಗಳ ಅವ್ಯವಸ್ತೆಯಿಂದ ಸಾವಿಗೀಡಾಗಿದ್ದಾರೆ. ಲಾಕ್‌ಡೌನ್ ಸಂದರ್ಬದಲ್ಲಿಯೂ ಅಪಘಾತಗಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಯಾರು ಹೊಣೆ. ಪ್ರಧಾನಿ ಮೋದಿ ಬರುವಾಗ ರಸ್ತೆ ದುರಸ್ತಿ ಮಾಡಲು ಆಗುತ್ತದೆ ಎಂದಾದರೆ ಅವರು ಮತ್ತೆ ಮಂಗಳೂರಿಗೆ ರಸ್ತೆ ಮಾರ್ಗವಾಗಿ ಬರಲಿ’’ ಎಂದು ಹೇಳಿದರು.

‘‘ ಇಂತಹ ರಸ್ತೆಗಳಿಗೆ ನಾವು ರಸ್ತೆ ತೆರಿಗೆ, ದಂಡ ಯಾಕೆ ಕಟ್ಟಬೇಕು. ನಾವು ಕಟ್ಟಿರುವ ತೆರಿಗೆ ಹಣವನ್ನು ನಮಗೆ ವಾಪಾಸು ಕೊಡಿಸಿ. ಮಂಗಳೂರು ದಸರಾ ಸಂಭ್ರಮಕ್ಕೆ ನಮ್ಮ ಸ್ನೇಹಿತರು, ಕುಟುಂಬದವರನ್ನು ಮಂಗಳೂರಿಗೆ ಕರೆಸುವುದಾದರೂ ಯಾವ ಧೈರ್ಯದಲ್ಲಿ. ಅವರು ಬರುವ ರಸ್ತೆಯಲ್ಲಿ ಜೀವಕ್ಕೆ ರಕ್ಷಣೆಯೇ ಇಲ್ಲ. ಗುಂಡಿಗಳ ನಡುವೆ ರಾತ್ರಿ ಹೊತ್ತು ಹೆದ್ದಾರಿ ರಸ್ತೆಗಳಲ್ಲಿ ಬೀದಿ ದೀಪಗಳೂ ಸಮರ್ಪಕವಾಗಿಲ್ಲ. ಆರು ವರ್ಷದಿಂದ ನಾನು ಬಿಜೆಪಿಗೆ ಮತ ಚಲಾಯಿಸಿದ್ದೇನೆ. ನನ್ನ ತೆರಿಗೆ ಹಣ, ನನ್ನ ಮತಕ್ಕಾಗಿ ನ್ಯಾಯ ಕೇಳುವ ಅಧಿಕಾರ ನನಗಿದೆ. ಅದಕ್ಕಾಗಿ ಬೀದಿಗಿಳಿದಿದ್ದೇನೆ’’ ಎಂದು ಲಿಖಿತ್ ರೈ ಆಕ್ರೋಶ ವ್ಯಕ್ತಪಡಿಸಿದರು.

‘‘ನಾನು ಕಾಂಗ್ರೆಸ್ಸಿಗ, ನಾನು ಕಮ್ಯುನಿಸ್ಟ್, ಪ್ರತಿಭಟನೆಗೆ ನನಗೆ ಹಣ ಬಂದಿದೆ ಎಂದೆಲ್ಲಾ ಆರೋಪ ಮಾಡಲಾಗಿದೆ. ನಾನು ಉದ್ಯೋಗ ಮಾಡುತ್ತೇನೆ. ನನ್ನ ಅಕೌಂಟ್ ಬಗ್ಗೆ ತನಿಖೆ ನಡೆಸಲಿ. ಈ ರೀತಿ ಆರೋಪ ಮಾಡಿ ಮೋಸ ಮಾಡುವುದು ಬೇಡ. ಮತ ಹಾಕಿ ಮನೆಯಲ್ಲಿ ಕುಳಿತರೆ ಮಾತ್ರವೇ ದೇಶಭಕ್ತರಾಗುವುದೇ? ಮತ ಚಲಾಯಿಸಿ, ನಮ್ಮ ಹಕ್ಕಗಾಗಿ ರಸ್ತೆಗಿಳಿದಿದರೆ ಅದು ಪ್ರಚಾರ, ದೇಶದ್ರೋಹ ಹೇಗಾಗುತ್ತದೆ. ಪ್ರಧಾನಿ ಮೋದಿಯವರಿಗೆ ಈವರೆಗೂ ಬೆಂಬಲ ನೀಡಿ ನಾನು ಇಲ್ಲಿ ಧೈರ್ಯವಾಗಿ ನಿಂತಿದ್ದೇನೆ. ಮತ ಚಲಾಯಿಸಿ ನಮಗೆ ಕೇಳುವ ಹಕ್ಕಿಲ್ಲ ಎಂದಾದರೆ ಇದಕ್ಕಿಂತ ದುರ್ಗತಿ ಬೇರೆ ಏನಿದೆ?’’ ಎಂದು ಲಿಖಿತ್ ರೈ ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News