ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ಸದಾ ಸನ್ನದ್ಧರಾಗಿರಬೇಕು: ಗಿರೀಶ್ ನಂದನ್

Update: 2022-09-28 13:45 GMT

ಪುತ್ತೂರು: ಪಾಕೃತಿಕ ವಿಪತ್ತು ಸೇರಿದಂತೆ ವಿಪತ್ತುಗಳು ಯಾವ ಸಮಯದಲ್ಲಿಯೂ ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಅದನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು.

ಅವರು ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಪುತ್ತೂರು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಅಗ್ನಿಶಾಮಕ ದಳ ಪುತ್ತೂರು ಇವರ ಸಹಭಾಗಿತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ "ಶೌರ್ಯ" ಇದರ ಪುತ್ತೂರು ತಾಲೂಕು ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಸುಳ್ಯ ತಾಲೂಕಿನ ಕೆಲವು ಕಡೆ ಕೇವಲ 4 ಗಂಟೆಯಲ್ಲಿ 23 ಸೆಂ.ಮೀ. ಮಳೆ ಸುರಿದು ಜಲಸ್ಫೋಟ ದಿಂದ ಅಪಾರ ಹಾನಿ ಉಂಟಾಯಿತು. ಆಗ ಎಸ್‍ಡಿಆರ್‍ಎಫ್ ತಂಡ ನಿಯೋಜಿಸ ಬೇಕಾಯಿತು. ಈ ಶೌರ್ಯ ತಂಡದಲ್ಲಿ ನೀವೆಲ್ಲ ಸ್ವ ಇಚ್ಛೆಯಿಂದ ಬಂದಿದ್ದೀರಿ. ಹೀಗಾಗಿ ನಿಮ್ಮಿಂದ ವಿಪತ್ತು ನಿರ್ವಹಣೆ ಕೆಲಸ ವೈಜ್ಞಾನಿಕವಾಗಿ ನಡೆಯಲಿದೆ ಎಂದರು.

ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮಠ್ ಮಾತನಾಡಿ, ದುರಂತದಲ್ಲಿ ಪ್ರಾಕೃತಿಕ ವಿಪತ್ತಿನ ಜತೆ ಮಾನ ನಿರ್ಮಿತ ವಿಪತ್ತುಗಳೂ ಇರುತ್ತವೆ. ಅದನ್ನು ಎದುರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶೌರ್ಯ ಹೆಸರಿನಲ್ಲಿ ವಿಪತ್ತು ನಿರ್ವಹಣಾ ಘಟಕ ರಚಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ಪರಿಕಲ್ಪನೆಯೇ ಅದ್ಭುತವಾಗಿದೆ. ಈ ತಂಡದ ಸದಸ್ಯರು ಸಮವಸ್ತ್ರ ಇಲ್ಲದ ಪೊಲೀಸರಾಗಿದ್ದಾರೆ ಎಂದರು.

ತಹಶೀಲ್ದಾರ್ ನಿಸರ್ಗಪ್ರಿಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇದರ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ಪುತ್ತೂರು ತಾಲೂಕು ಘಟಕದ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಹಾಲಿ ಅಧ್ಯಕ್ಷ ಮಹಾಬಲ ರೈ, ಎಸ್‍ಕೆಡಿಆರ್‍ಡಿಪಿ ದ.ಕ. ಜಿಲ್ಲೆ-2 ಇದರ ನಿರ್ದೇಶಕರಾದ ಪ್ರವೀಣ್ ಕುಮಾರ್, ವಿವೇಕಾಂದ ಕನ್ನಡ ಮಾಧ್ಯಮ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಮೇಶ್ ಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ವಾಗ್ಲೆ, ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ. ಸುಂದರ್, ಜನಜಾಗೃತಿ ವೇದಿಕೆ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ಇದರ ಯೋಜನಾಧಿಕಾರಿ ತಿಮ್ಮಯ್ಯ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು  ಯೋಜನಾಧಿಕಾರಿ ಆನಂದ್ ಸ್ವಾಗತಿಸಿದರು. ವಿಪತ್ತು ನಿರ್ವಹಣಾ ವಿಭಾಗ ಬೆಳ್ತಂಗಡಿ ಇದರ ಯೋಜನಾಧಿಕಾರಿ ಜೈವಂತ್ ಪಟಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ ಕೃಷಿ ಯೋಜನಾಧಿಕಾರಿ ಉಮೇಶ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News