ಭಾರತ್ ಜೋಡೊ ಕಾರ್ಯಕ್ರಮಕ್ಕೆ ಪುತ್ತೂರುನಿಂದ 700 ಮಂದಿ ಭಾಗಿ: ಎಂ.ಬಿ.ವಿಶ್ವನಾಥ ರೈ

Update: 2022-09-28 13:52 GMT

ಪುತ್ತೂರು : ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸೆ.8ರಂದು ಕನ್ಯಾಕುಮಾರಿಯಿಂದ ಆರಂಭಗೊಂಡಿರುವ `ಭಾರತ್ ಜೋಡೊ' ಕಾಲ್ನಡಿಗೆ ಪಾದಯಾತ್ರೆ ಸೆ.30ರಂದು ರಾಜ್ಯದ ಗುಂಡ್ಲುಪೇಟೆಗೆ ತಲುಪಲಿದ್ದು, ಈ ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಿಂದ 700 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ತಿಳಿಸಿದ್ದಾರೆ.

ಅವರು ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗುಂಡ್ಲು ಪೇಟೆಯಲ್ಲಿ ನಡೆಯುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕು ಸೇರಿದಂತೆ ರಾಜ್ಯದ 9 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಕಾರ್ಯಕರ್ತರು ಭಾಗವಹಿಸುವರು. ಪುತ್ತೂರು ಬ್ಲಾಕ್ ವ್ಯಾಪ್ತಿಯಿಂದ ಹೋಗಲಿರುವ 700 ಮಂದಿ ಕಾರ್ಯಕರ್ತರಿಗಾಗಿ 15 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸೆ.30ರಂದು ದಿನಪೂರ್ತಿ ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News