ಮತ್ತೆ ಬಾಗಿಲು ತಟ್ಟುತ್ತಿರುವ ಕ್ಷಯ ಮತ್ತು ಎಚ್‌ಐವಿ

Update: 2022-09-29 03:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಕೊರೋನ ಈಗಲೂ ಸುದ್ದಿಯಲ್ಲಿದೆ. ಕೊರೋನದ ಕುರಿತಂತೆ ಈಗಲೂ ಸರಕಾರ ಮಾಧ್ಯಮಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ.ಲಸಿಕೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ  ಕಂಡವರ ಪಾಲಾಗಿದೆ. ವಿಶೇಷವೆಂದರೆ, ಇಡೀ ದೇಶ ಕೊರೋನಕ್ಕೆ ಹೆದರಿ ಬಾಗಿಲು ಮುಚ್ಚಿ ಕೂತಿದ್ದಾಗಲೂ ಈ ದೇಶದ ಬಡವರು ಲಸಿಕೆಗಾಗಿ ಹಾಹಾಕಾರ ಮಾಡಲಿಲ್ಲ. ಅಷ್ಟೇ ಏಕೆ, ಅವರು ಕೊರೋನ ಎನ್ನುವ ಕಾಯಿಲೆಗೆ ಹೆದರಲೇ ಇಲ್ಲ. ಬದಲಿಗೆ, ಲಾಕ್‌ಡೌನ್‌ನಿಂದಾಗಿ ಎದುರಾದ ನಿರುದ್ಯೋಗಗಳಿಗೆ ಹೆದರಿದರು. ‘‘ನಮಗೆ ಲಸಿಕೆ ಬೇಡ, ಉದ್ಯೋಗ ಕೊಡಿ. ನಾವು ಕೊರೋನಗೆ ಹೆದರುವುದಿಲ್ಲ. ಹಸಿವಿಗೆ ಹೆದರುತ್ತೇವೆ’ ಎಂದು ಬಹಿರಂಗವಾಗಿ ಸರಕಾರವನ್ನು ಆಗ್ರಹಿಸಿದರು. ಇದೀಗ ಕೊರೋನ ತಣ್ಣಗಾಗಿದೆ. ಆದರೆ ಕಳೆದ ಆಗಸ್ಟ್ ತಿಂಗಳಿನಿಂದ ದೇಶಾದ್ಯಂತ ಎಚ್‌ಐವಿ ಪೀಡಿತ ರೋಗಿಗಳು ಜೀವರಕ್ಷಕ ಔಷಧಿಗಾಗಿ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ದಿಲ್ಲಿಯಲ್ಲಿ ಈ ಸಂಬಂಧ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರಕರಣವೀಗ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದು, ಎಚ್‌ಐವಿ ಔಷಧಿ ಕೊರತೆಯ ಕುರಿತಂತೆ ಕೇಂದ್ರದ ಸ್ಪಷ್ಟೀಕರಣವನ್ನು ಕೇಳಿದೆ.

ಕ್ಷಯ ಮತ್ತು ಎಚ್‌ಐವಿ ಪೀಡಿತರ ಸಂಖ್ಯೆಯನ್ನು ಇಳಿಸುವುದಕ್ಕಾಗಿ ಈ ದೇಶ ಹಲವು ದಶಕಗಳಿಂದ ಬಹುದೊಡ್ಡ ಹೋರಾಟವನ್ನೇ ನಡೆಸಿಕೊಂಡು ಬಂದಿದೆ. ಕ್ಷಯ ಅಪೌಷ್ಟಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿದ್ದರೆ, ಎಚ್‌ಐವಿಯೂ ಬಡತನದೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿದೆ. ಮುಖ್ಯವಾಗಿ ಎಚ್‌ಐವಿ ಹರಡುವುದಕ್ಕೆ ಲೈಂಗಿಕ ಸ್ವೇಚ್ಛೆಯೇ ಕಾರಣವೆಂದು ಗುರುತಿಸಲಾಗುತ್ತದೆಯಾದರೂ, ಭಾರತದಂತಹ ಬಡ ದೇಶದಲ್ಲಿ ವೇಶ್ಯಾವೃತ್ತಿಯು ಹಸಿವಿನೊಂದಿಗೆ ತಳಕು ಹಾಕಿಕೊಂಡಿದೆ. ಹೊಟ್ಟೆಪಾಡಿಗಾಗಿ ಈ ವೃತ್ತಿಗೆ ಇಳಿದವರ ಸಂಖ್ಯೆ ಬಹುದೊಡ್ಡದು. ಇವರ ಮೂಲಕ ಲೈಂಗಿಕ ರೋಗಗಳನ್ನು ಅಂಟಿಸಿಕೊಳ್ಳುವ ಪುರುಷರು ಅದನ್ನು ಇತರೆಲ್ಲರಿಗೂ ಹರಡುತ್ತಾ, ಮುಂದೆ ವೈದ್ಯಕೀಯ ಬೇಜವಾಬ್ದಾರಿಗಳಿಂದಾಗಿ ಅಮಾಯಕರೂ ಬಲಿಪಶುಗಳಾಗುವಂತಹ ಸನ್ನಿವೇಶ ನಿರ್ಮಾಣವಾಯಿತು. ಆಂದೋಲನ ರೂಪದಲ್ಲಿ ಕ್ಷಯ ಮತ್ತು ಎಚ್‌ಐವಿ ವಿರುದ್ಧ ಜಗತ್ತು ಹೋರಾಟ ನಡೆಸಿತು. ಶ್ರೀಮಂತ ರಾಷ್ಟ್ರಗಳು ಕ್ಷಯಕ್ಕಿಂತಲೂ ಎಚ್‌ಐವಿಗೆ ಹೆಚ್ಚು ಹೆದರಿಕೊಂಡಿತ್ತು. ಕ್ಷಯ ಬಡ ರಾಷ್ಟ್ರಗಳ ರೋಗವಾಗಿದ್ದರೆ, ಎಚ್‌ಐವಿ ಶ್ರೀಮಂತ ರಾಷ್ಟ್ರಗಳಿಗೂ ಬೆದರಿಕೆ ಒಡ್ಡುತ್ತಿರುವ ರೋಗವಾಗಿತ್ತು. ಶ್ರೀಮಂತ ರಾಷ್ಟ್ರಗಳ ಪ್ರವಾಸೋದ್ಯಮದೊಂದಿಗೆ ಮುಕ್ತ ಲೈಂಗಿಕತೆಯೂ ಜೋಡಿಸಲ್ಪಡುವುದರಿಂದ, ಎಚ್‌ಐವಿಗಾಗಿ ಅದು ಹೆಚ್ಚು ಹೆಚ್ಚು ವ್ಯಯ ಮಾಡುವುದು ಅನಿವಾರ್ಯವಾಗಿತ್ತು. ವಿಶ್ವದ ಶ್ರೀಮಂತ ಸಂಸ್ಥೆಗಳು ಎಚ್‌ಐವಿ ವಿರುದ್ಧ ಹೋರಾಡುವ ಸರಕಾರೇತರ ಸಂಸ್ಥೆಗಳ ಜೊತೆಗೆ ಕೈಜೋಡಿಸಿಕೊಂಡಿದ್ದವು. ವಿಶ್ವವನ್ನು ಬಲಿತೆಗೆದುಕೊಂಡು ಬಿಟ್ಟಿತು ಎನ್ನುವಷ್ಟರಲ್ಲಿ ಇದನ್ನು ನಿಯಂತ್ರಿಸುವಲ್ಲಿ ವೈದ್ಯಕೀಯ ಕ್ಷೇತ್ರ ಮತ್ತು ಸರಕಾರೇತರ ಸಂಸ್ಥೆಗಳು ಬಹುತೇಕ ಯಶಸ್ವಿಯಾಯಿತು. ಆದರೆ ಇದೀಗ ಕೊರೋನೋತ್ತರ ದಿನಗಳಲ್ಲಿ ಎಚ್‌ಐವಿ ಮತ್ತು ಕ್ಷಯ ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ’ ಎನ್ನುತ್ತಿವೆ. ಕೊರೋನದ ವೈಭವೀಕರಣದಿಂದಾಗಿ ಕ್ಷಯ, ಎಚ್‌ಐವಿಯಂತಹ ಮಾರಕ ರೋಗಗಳನ್ನು ಸರಕಾರ ನಿರ್ಲಕ್ಷಿಸಿದ ಪರಿಣಾಮದಿಂದಾಗಿ ಇಂದು ಕ್ಷಯ, ಎಚ್‌ಐವಿಯಂತಹ ರೋಗಿಗಳಿಗೆ ಪೂರೈಸಲ್ಪಡುವ ಔಷಧಿಗಳಲ್ಲಿ ಭಾರೀ ಕೊರತೆ ಕಾಣುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಭಾರತ ಮತ್ತೆ ಕ್ಷಯ, ಎಚ್‌ಐವಿಗಾಗಿ ವಿಶ್ವದಾದ್ಯಂತ ಸುದ್ದಿಯಾಗುವುದರಲ್ಲಿ ಆಶ್ಚರ್ಯವಿಲ್ಲ.

ಕೊರೋನ ಕಾಲದಲ್ಲಿ ಭಾರತದಂತಹ ಬಡದೇಶದಲ್ಲಿ ನಡೆದ ಬಹುದೊಡ್ಡ ಅಚಾತುರ್ಯವೆಂದರೆ, ಕೊರೋನ ಗದ್ದಲಗಳಿಗೆ ಬೆದರಿ ಕ್ಷಯ, ಎಚ್‌ಐವಿಯಂತಹ ಮಾರಕ ರೋಗಗಳನ್ನು ಮರೆತೇ ಬಿಟ್ಟದ್ದು. ಲಾಕ್‌ಡೌನ್ ಮತ್ತು ಆಸ್ಪತ್ರೆಗಳ ಅವ್ಯವಸ್ಥೆಯಿಂದಾಗಿ ಲಕ್ಷಾಂತರ ಕ್ಷಯ ರೋಗಿಗಳಿಗೆಸೂಕ್ತ ಔಷಧಿಯೇ ದೊರಕಲಿಲ್ಲ. ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಔಷಧಿಗಳು ಕಾಲಕಾಲಕ್ಕೆ ತೆಗೆದುಕೊಳ್ಳದೇ ಇದ್ದರೆ ಅವು ರೋಗಕ್ಕೆ ಪರಿಣಾಮಕಾರಿಯಾಗುವುದಿಲ್ಲ ಮಾತ್ರವಲ್ಲ, ಕೆಲವೊಮ್ಮೆ ರೋಗ ಬಿಗಡಾಯಿಸುವುದಕ್ಕೂ ಕಾರಣವಾಗುತ್ತದೆ. ಕೊರೋನ ಕಾಲದಲ್ಲಿ ಅದೆಷ್ಟೋ ರೋಗಿಗಳು ಸರಕಾರದಿಂದ ದೊರಕುವ ಔಷಧಿಗಳಿಗಾಗಿ ಪರಿತಪಿಸಬೇಕಾಯಿತು. ಎಚ್‌ಐವಿ ಕಾಯಿಲೆ ಪೀಡಿತರ ವಿಷಯದಲ್ಲೂ ಇದುವೇ ಸಂಭವಿಸಿತು. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಈ ಕಾಯಿಲೆಗಳಿಗಾಗಿ ಮೀಸಲಾಗಿಟ್ಟ ಅನುದಾನಗಳನ್ನು ಕೊರೋನ ವಿರುದ್ಧದ ಹೋರಾಟಕ್ಕಾಗಿ, ಕೊರೋನ ಲಸಿಕೆಗಳಿಗಾಗಿ ಬಳಸಲಾಯಿತು. ಭಾರತ ಕೊರೋನ ವಿರುದ್ಧದ ಹೋರಾಟದಲ್ಲಿ ಗೆದ್ದಿದೆಯೋ, ಸೋತಿದೆಯೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಮಲಗಿದ್ದ ಕ್ಷಯ, ಎಚ್‌ಐವಿಯಂತಹ ರೋಗಗಳನ್ನು ಅದು ತಟ್ಟಿ ಎಚ್ಚರಿಸಿದೆ ಮತ್ತು ಭವಿಷ್ಯದಲ್ಲಿ ಈರೋಗದ ನೇರ ಬಲಿಪಶುಗಳಾಗುವವರು ಈ ದೇಶದ ಬಡವರೇ ಆಗಿದ್ದಾರೆ.

ಮುಂದಿನ ದಿನಗಳಲ್ಲಿ ಕ್ಷಯ ಮತ್ತು ಎಚ್‌ಐವಿ ಇನ್ನಷ್ಟು ಉಲ್ಬಣಿಸುವ ಸಾಧ್ಯತೆಗಳ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸುತ್ತಾರೆ. ಮೊದಲ ಕಾರಣ, ಕೊರೋನ ಬಳಿಕ ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಹೆಚ್ಚಾಗಿವೆ. ಬಡತನದಿಂದಾಗಿ ಹಸಿವು, ಹಸಿವಿನಿಂದಾಗಿ ಜನರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತದೆ. ಬಡತನ, ಅಪೌಷ್ಟಿಕತೆಯೇ ಕ್ಷಯದ ತಾಯಿ. ನಿರುದ್ಯೋಗ ಹೆಚ್ಚಿದಂತೆಯೇ ಬಡತಾಯಂದಿರು ತಮ್ಮ ಕುಟುಂಬವನ್ನು ಸಾಕುವುದಕ್ಕಾಗಿ ಮತ್ತೆ ಅನೈತಿಕ ದಾರಿಯನ್ನು ಹುಡುಕುವ ಸಾಧ್ಯತೆಗಳಿವೆ. ದೇಶದಲ್ಲಿ ವೇಶ್ಯಾವಾಟಿಕೆಯಂತಹ ದಂಧೆಗಳಿಗೆ ಇದು ಪ್ರೋತ್ಸಾಹವನ್ನು ನೀಡಬಹುದು. ಅಸುರಕ್ಷಿತ ಲೈಂಗಿಕತೆ ಹೆಚ್ಚಾಗುವ ಸಾಧ್ಯತೆಗಳಿವೆ. ಸರಕಾರ ಜನ ಸಾಮಾನ್ಯರಿಗೆ ಉಚಿತವಾಗಿ ಕೊಡುವುದನ್ನು ಸ್ಥಗಿತಗೊಳಿಸುವುದಕ್ಕಾಗಿ ಸಾವಿರ ನೆಪಗಳನ್ನು ಹುಡುಕುತ್ತಿದೆ. ಈಗಾಗಲೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನೀಡಲಾಗುತ್ತಿರುವ ಅನುದಾನಗಳಲ್ಲಿ ಭಾರೀ ಕಡಿತಗಳಾಗಿವೆ. ಆರೋಗ್ಯದ ಹೆಸರಿನಲ್ಲಿ ಲಸಿಕೆಗಳಿಗಾಗಿ ಕೋಟ್ಯಂತರ ರೂಪಾಯಿಯನ್ನು ಸುರಿದು ಬೃಹತ್ ಕಂಪೆನಿಗಳ ಆರೋಗ್ಯ ಕ್ಷೇಮ ನೋಡಿಕೊಳ್ಳುವುದಕ್ಕೆ ಸರಕಾರ ಆದ್ಯತೆಯನ್ನು ನೀಡುತ್ತಿದೆ. ಇತ್ತ ಕ್ಷಯ ರೋಗಿಗಳಿಗೆ ನೀಡುವ ಪ್ರೋತ್ಸಾಹ ಧನ, ಉಚಿತ ಔಷಧಿಗಳಲ್ಲಿ ಕೊರತೆ ಕಂಡು ಬರುತ್ತಿದೆ. ಎಚ್‌ಐವಿ ರೋಗಿಗಳು ತಮ್ಮ ಉಚಿತ ಔಷಧಿಗಳಿಗಾಗಿ ಬೀದಿಯಲ್ಲಿ ಕುಳಿತು ಧರಣಿ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಭಾರತದ ಆರೋಗ್ಯ ಸ್ಥಿತಿ ಹೇಗಿರಬಹುದು ಎನ್ನುವುದರ ಸೂಚನೆಗಳನ್ನು ನೀಡುತ್ತಿದೆ. ಸರಕಾರ ಕೊರೋನದಿಂದ ಮತ್ತೆ ಕ್ಷಯ, ಎಚ್‌ಐವಿಯಂತಹ ರೋಗಗಳ ಕಡೆಗೆ  ದೃಷ್ಟಿ ಹೊರಳಿಸಬೇಕಾಗಿದೆ. ಗೋಶಾಲೆಗಳಂತಹ ಅನುಪಯುಕ್ತ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ನಿಲ್ಲಿಸಿ, ಅವುಗಳನ್ನು ಆರೋಗ್ಯ ಕ್ಷೇತ್ರದ ಕಡೆಗೆ ತಿರುಗಿಸಬೇಕು. ಗೋಮಾಂಸಾಹಾರವನ್ನು ಪ್ರೋತ್ಸಾಹಿಸುವ ಮೂಲಕ ಆಹಾರದ ಕೊರತೆಯನ್ನು ಇಲ್ಲವಾಗಿಸಬೇಕು. ಅಪೌಷ್ಟಿಕತೆಯನ್ನು ತೊಡೆದು ಹಾಕಬೇಕು. ಇದು ಕ್ಷಯ ಮತ್ತು ಎಚ್‌ಐವಿಯನ್ನು ಎದುರಿಸಲು ಸರಕಾರ ತೆಗೆದುಕೊಳ್ಳಬಹುದಾದ ತುರ್ತು ಕ್ರಮಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News