ನಮ್ಮ ಬೆಂಬಲ ಕಾಂಗ್ರೆಸ್‌ಗಲ್ಲ ಭಾರತ್ ಜೋಡೊ ಯಾತ್ರೆಗೆ: ಯೋಗೇಂದ್ರ ಯಾದವ್

Update: 2022-09-29 04:02 GMT

ರಾಹುಲ್ ಗಾಂಧಿ ಪ್ರಾರಂಭಿಸಿರುವ ‘ಭಾರತ್ ಜೋಡೊ’ ಯಾತ್ರೆ ಈ ತಿಂಗಳ 30ಕ್ಕೆ ಕರ್ನಾಟಕ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಯಾತ್ರೆಯನ್ನು ಬೆಂಬಲಿಸುತ್ತಿರುವ ಪ್ರಗತಿಪರ ಸಂಘಟನೆಗಳು, ಬುದ್ಧಿಜೀವಿಗಳ ಪರವಾಗಿ ಖ್ಯಾತ ಲೇಖಕ, ಚಿಂತಕ ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ಅವರು ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ಈ ಕ್ಷಣ ನಮ್ಮ ಎದುರಿಗಿರುವ ಸವಾಲು ಒಂದೆ. ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವಾಗ ನಮ್ಮ ಕಣ್ಣಿಗೆ ಕೇವಲ ಇಬ್ಬರು ಮಾತ್ರ ಕಾಣುತ್ತಿದ್ದಾರೆ. ಒಬ್ಬರು ಬೆಂಕಿ ಆರಿಸಲು ಕೈಯಲ್ಲಿ ನೀರಿನ ಬಕೆಟ್ ಹಿಡಿದು ಬರುತ್ತಿರುವವರು ಮತ್ತೊಬ್ಬರು ಬೆಂಕಿ ಹಚ್ಚಲು ಪೆಟ್ರೋಲ್ ಬಾಟಲು ಹಿಡಿದು ಬರುತ್ತಿರುವವರು. ನಾವು ಕೈಯಲ್ಲಿ ನೀರು ಹಿಡಿದವರ ಪರವಾಗಿ ನಿಲ್ಲಬೇಕಿದೆ. ಮೊದಲು ಬೆಂಕಿ ಬಿದ್ದ ಮನೆಯನ್ನು ಉಳಿಸಿಕೊಳ್ಳಬೇಕಿದೆ. ಮಿಕ್ಕದ್ದೆಲ್ಲಾ ಬಳಿಕ ನೋಡಿಕೊಂಡರಾಯಿತು. ನಮ್ಮ ಮನೆಗೆ ಬೆಂಕಿ ಬಿದ್ದಾಗ ಹಿಂದಿನ ದಿನ ಜಗಳ ಆಡಿದ್ದವನು ನೀರಿನ ಪಾತ್ರೆ ಹಿಡಿದು ಬಂದರೆ ಬೇಡ ಎನ್ನಲಾಗುತ್ತದೆಯೇ? ಈಗಿನ ದೇಶದ ಸಂದರ್ಭವೂ ಇದೇ ಆಗಿದೆ. ಮೊದಲು ಬೆಂಕಿ ಆರಿಸಬೇಕು. ದೇಶವನ್ನು ಕಾಪಾಡಿಕೊಳ್ಳಬೇಕು.

ವಾರ್ತಾಭಾರತಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ‘ಭಾರತ್ ಜೋಡೊ’ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ ಯಾತ್ರೆ ನಡೆಯುವ ರಾಜ್ಯದಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಆಗುತ್ತಿದೆ. ರಾಷ್ಟ್ರಮಟ್ಟದ ಚರ್ಚೆ ಆಗುತ್ತಿಲ್ಲ. ಹೀಗಾಗಿ ಯಾತೆ್ರಯ ಉದ್ದೇಶ ಜನರಿಗೆ ತಲುಪಿಲ್ಲವಾ?

ಯೋಗೇಂದ್ರ ಯಾದವ್: ದೇಶದಲ್ಲಿ ಸಾರ್ವಜನಿಕ ಚರ್ಚೆಯನ್ನು ಕೃತಕವಾಗಿ ಹೇಗೆ ಸೃಷ್ಟಿಸಲಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಖಿಲ ಭಾರತ ಮಟ್ಟದ ಚರ್ಚೆಯೇ ಆಗದಂತೆ ತಡೆಯಲಾಗುತ್ತಿದೆ. ನಿರುದ್ಯೋಗ, ದ್ವೇಷ ರಾಜಕಾರಣ, ಹಣದುಬ್ಬರ, ರೈತರ ಸಮಸ್ಯೆ, ರೂಪಾಯಿ ಮೌಲ್ಯ ನೆಲಕಚ್ಚಿರುವುದು, ಬಡವ-ಶ್ರೀಮಂತರ ನಡುವಿನ ಅಂತರ ವಿಪರೀತ ಹೆಚ್ಚಾಗುತ್ತಿರುವುದೆಲ್ಲಾ ಅಖಿಲ ಭಾರತ ಮಟ್ಟದ ಸಮಸ್ಯೆಗಳು ತಾನೆ? ಭಾರತ್ ಜೋಡೊ ಯಾತ್ರೆ ಈ ಎಲ್ಲಾ ಸಮಸ್ಯೆಗಳು ಮತ್ತು ಇವುಗಳ ಭೀಕರ ಪರಿಣಾಮಗಳನ್ನು ಜನರ ಮುಂದಿಡುತ್ತಿದೆ. ನಮ್ಮ ಮಕ್ಕಳ ಭವಿಷ್ಯದ ಕುತ್ತಿಗೆ ಹಿಚುಕಲಾಗುತ್ತಿದೆ ಎನ್ನುವ ಆತಂಕ ದೇಶದ ಜನರ ಅನುಭವಕ್ಕೆ ಬಂದಿದೆ. ಆದರೆ, ಈ ಸಮಸ್ಯೆಗಳು ಅಖಿಲ ಭಾರತ ಮಟ್ಟದಲ್ಲಿ ಚರ್ಚೆ ಆಗದೆ ಕೇವಲ ಲೋಕಲ್ ಸುದ್ದಿಯಾಗುವಂತೆ ಬಿಜೆಪಿ-ಆರೆಸ್ಸೆಸ್ ಹಾಗೂ ಬಿಸಿನೆಸ್‌ಮೆನ್‌ಗಳ ಹಿಡಿತದಲ್ಲಿರುವ ಮಾಧ್ಯಮಗಳು ನೋಡಿಕೊಳ್ಳುತ್ತಿವೆ. ಆದರೆ, ದೇಶದ ಜನ ಭಾರತ್ ಜೋಡೊ ಯಾತ್ರೆಗೆ ಬೆಂಬಲಿಸುತ್ತಿರುವುದನ್ನು ನೋಡಿದರೆ ಮುಖ್ಯವಾಹಿನಿ ಮಾಧ್ಯಮಗಳೂ ಇದನ್ನು ಕೈಗೆತ್ತಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾುತ್ತದೆ. ಸ್ವಲ್ಪದಿನ ಕಾದು ನೋಡಿ.

ವಾಭಾ: ದ್ವೇಷವನ್ನು ದೇಶದ ಸಂಸ್ಕಾರ ಮಾಡಲು ಕಾರ್ಪೊರೇಟ್ ಬಂಡವಾಳಶಾಹಿ ಸಾವಿರಾರು ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಈ ಬಂಡವಾಳ ಶಾಹಿ ಹುನ್ನಾರವನ್ನು ಭಾರತ್ ಜೋಡೋ ಯಾತ್ರೆ ಜನರ ಮುಂದಿಡಬೇಕಿತ್ತಲ್ಲವೇ?

ಯಾದವ್: ಮುಂದಿಡುತ್ತಲೇ ಇದ್ದೇವೆ. ರಾಹುಲ್ ಗಾಂಧಿ ಅವರು ಪ್ರತಿ ದಿನ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ದ್ವೇಷದ ಮೂಲಕ ದೇಶವನ್ನು ಒಡೆದು ಆಳಲು ಇಂಡಸ್ಟ್ರಿ ಸಾವಿರಾರು ಕೋಟಿ ರೂ. ಚೆಲ್ಲುತ್ತಿರುವುದರ ಬಗ್ಗೆ ನಾವು ಧ್ವನಿ ಎತ್ತುತ್ತಲೇ ಇದ್ದೇವೆ. ಒಂದಂತೂ ಸತ್ಯ ದೇಶದ ಜನ ಸಾಮಾನ್ಯರು ದ್ವೇಷದ ಆರಾಧಕರಾಗಿಲ್ಲ. ಸರಕಾರದ ಬಳಿ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ, ಹಣದುಬ್ಬರಕ್ಕೆ ಪರಿಹಾರ ಇಲ್ಲ, ರೂಪಾಯಿ ಮೌಲ್ಯ ಈ ಮಟ್ಟಕ್ಕೆ ಕುಸಿಯುತ್ತಿರುವುದರ ಬಗ್ಗೆ ಸರಕಾರಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಜನರ ನಿತ್ಯ ಸಮಸ್ಯೆಗಳನ್ನು ಮರೆ ಮಾಚಲು ಜನರಿಗೆ ಬೇಕಿಲ್ಲದ ದ್ವೇಷ ರಾಜಕಾರಣವನ್ನು ವ್ಯಾಪಕವಾಗಿ ಹರಡಲು ಸಾವಿರಾರು ಕೋಟಿ ರೂ.ಯನ್ನು ಚೆಲ್ಲುತ್ತಿದ್ದಾರೆ. ಮಾರ್ಚ್ 2020ರಲ್ಲಿ ಕೇವಲ 66 ಸಾವಿರ ಕೋಟಿ ರೂ. ಹೊಂದಿದ್ದ ಅದಾನಿ ಈಗ ಕೇವಲ ಎರಡೂವರೆ ವರ್ಷದಲ್ಲಿ 12 ಲಕ್ಷ ಕೋಟಿ ರೂ. ಗಳಿಸಿದ್ದು ಹೇಗೆ? 12 ಲಕ್ಷ ಕೋಟಿ ರೂ. ಆಗಿದ್ದು ಹೇಗೆ? ಮ್ಯಾಜಿಕ್ ಆಗಿ ಬಿಡ್ತಾ? ಈ 12 ಲಕ್ಷ ಕೋಟಿ ರೂ. ಗಳಿಕೆ ಹಿಂದೆ ಕಾಣದ ಕೈಗಳು ಇವೆಯೇ? ಮಾರಿಷಸ್‌ನ ಕಂಪೆನಿಗಳು ಇದರ ಹಿಂದಿವೆಯೇ? ಅದಾನಿ ಮತ್ತು ಅಂಬಾನಿಯ ಆಸ್ತಿ ಲಕ್ಷ ಲಕ್ಷ ಕೋಟಿ ಬೆಳೆಯುತ್ತಿರುವುದು ಹೇಗೆ ಎನ್ನುವುದನ್ನು ದೇಶದ ಜನ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರ ಕೊಡಲಾಗದ ಸರಕಾರ ಮತ್ತು ಈ ಪ್ರಶ್ನೆಗಳು ದೇಶದಾದ್ಯಂತ ಚರ್ಚೆಯೇ ಆಗದಂತೆ ತಡೆಯಲು ದ್ವೇಷದ ಉದ್ದಿಮೆ ಮೇಲೆ ಹಣ ಚೆಲ್ಲುತ್ತಿದೆೆ. ಭಾರತ್ ಜೋಡೊ ಯಾತ್ರೆಯ ವೇದಿಕೆ ಮೂಲಕ ಇದನ್ನೆಲ್ಲಾ ನಾವು ಜನರ ಜತೆ ಚರ್ಚಿಸುತ್ತಿದ್ದೇವೆ. ನಾನು ಭಾರತ್ ಜೋಡೊ ಯಾತ್ರೆಗೆ ಕೈಜೋಡಿಸಿದ್ದಕ್ಕೆ ಇದೇ ಮುಖ್ಯ ಕಾರಣ. ರಾಹುಲ್ ಗಾಂಧಿ ಅವರು ಪ್ರತಿ ದಿನ ಜನರಿಗೆ ಇದನ್ನೇ ಅರ್ಥ ಮಾಡಿಸುತ್ತಿದ್ದಾರೆ. ರಾಹುಲ್ ಅವರ ಮಾತುಗಳು ಜನರಿಗೆ ತಲುಪದಂತೆ ನೋಡಿಕೊಳ್ಳಲು ನಿರಂತರ ಹುನ್ನಾರ ನಡೆಸಲಾಗುತ್ತಿದೆ.

ವಾಭಾ: ದಲಿತರ ಬಳಿಕ ದೇಶದಲ್ಲಿ ಶೂದ್ರ ವಿರೋಧಿ ರಾಜಕಾರಣ, ಶೂದ್ರ ವಿರೋಧಿ ಆರ್ಥಿಕತೆ, ಶೂದ್ರ ವಿರೋಧಿ ಕ್ರೌರ್ಯವನ್ನು ಅತ್ಯಂತ ರಭಸವಾಗಿ ಆಚರಿಸಲಾಗುತ್ತಿದೆ ಎನ್ನುವ ಆಕ್ರೋಶ ರಾಜ್ಯದಲ್ಲಿ ನಡೆದ ಪಠ್ಯ ಪುಸ್ತಕ ಪರಿಷ್ಕರಣೆ ಬಳಿಕ ಹೆಚ್ಚಾಗಿದೆ. ಶೂದ್ರ ಸಮುದಾಯಗಳ ಆಕ್ರೋಶವನ್ನು ಭಾರತ್ ಜೋಡೊ ಯಾತ್ರೆ ಗಮನಿಸಿದೆಯೇ?

ಯಾದವ್: ಇದೇನು ಹೊಸದಲ್ಲ ಮತ್ತು ನನಗೇನೂ ಆಶ್ಚರ್ಯವಾಗಿಲ್ಲ. ಸಂಘ ಪರಿವಾರದ ಗುಪ್ತ ಅಜೆಂಡಾ ಇದು. ಈ ನೆಲದ ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ‘ಆರೆಸ್ಸೆಸ್: ಆಳ-ಅಗಲ’ ಕೃತಿಯಲ್ಲಿ ಇದನ್ನು ವಿವರಿಸಿದ್ದಾರೆ. ಚಾತುರ್ವರ್ಣ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಷಡ್ಯಂತ್ರ ನಡೆಯುತ್ತಿದೆ. ಸಂಘಪರಿವಾರದ ಪೂರ್ವಜರು ಹೇಳಿದಂತೆ ಬ್ರಾಹ್ಮಣ ತಲೆ-ಕ್ಷತ್ರಿಯರು ತೋಳುಗಳು-ಶೂದ್ರರು ಕೇವಲ ಕಾಲುಗಳು ಎನ್ನುವುದನ್ನು ಹೇಳಿದ್ದಾರೆ. ಶೂದ್ರರನ್ನು ಕೇವಲ ಕಾಲಾಳುಗಳನ್ನಾಗಿ ಉಳಿಸಲು ಆಧುನಿಕ ಮನುಸ್ಮತಿ ಅವರಿಗೆ ಜಾರಿ ಆಗಬೇಕಿದೆ. ಶೂದ್ರರಿಗೆ ಸಮಾನ ಅವಕಾಶ ನೀಡಿದ್ದಕ್ಕೆ ಅವರಿಗೆ ಸಂವಿಧಾನದ ಬಗ್ಗೆ ಅಸಹನೆ ಇದೆ. ದೇಶದ ಶೇ. 85ರಷ್ಟು ಭಾರತೀಯರು ಬಹುಜನರು. ಇವರ ಮೇಲೆ ನೇರವಾಗಿ ಮನುಸ್ಮತಿಯನ್ನು ಹೇರಲು ಸಾಧ್ಯ ವಿಲ್ಲ. ಈ ಕಾರಣಕ್ಕೇ ಹಿಂದುತ್ವದ ಹೆಸರಿನಲ್ಲಿ ಅವರು ಮನುಸ್ಮತಿಯನ್ನು ಜಾರಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಭಾರತ್ ಜೋಡೊ ಯಾತ್ರೆಯ ವೇದಿಕೆಗಳಲ್ಲಿ, ಯಾತ್ರೆಯಲ್ಲಿ ಭಾಗವಹಿಸುವ ಸಾರ್ವಜನಿಕರು, ವ್ಯಕ್ತಿಗಳು ಈ ಹುನ್ನಾರಗಳ ಬಗ್ಗೆ ಬೇರೆ ಬೇರೆ ಹಂತಗಳಲ್ಲಿ, ಬೇರೆ ಬೇರೆ ಮಾತುಗಳಲ್ಲಿ ಚರ್ಚಿಸುತ್ತಲೇ ಇದ್ದಾರೆ. ಒಮ್ಮೆ ದ್ವೇಷ ರಾಜಕಾರಣದ ಶಾಪ ಅಳಿಸಿದರೆ ಆಗ ಈ ಎಲ್ಲಾ ಹುನ್ನಾರಗಳೂ ದೇಶದ ಶೇ. 85ರಷ್ಟಿರುವ ಬಹುಜನರಿಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತದೆ.

ವಾಭಾ: ಸರಕಾರದ ದೃಷ್ಟಿಯಲ್ಲಿ ನಾವು ಕೇವಲ ಗಿರಾಕಿಗಳು ಎನ್ನುವ ಸಿಟ್ಟು ದೇಶದ ತೆರಿಗೆದಾರರಲ್ಲಿದೆ ಎನ್ನುವುದು ನಾನಾ ಚರ್ಚೆಗಳಲ್ಲಿ ಕಾಣಿಸಿದೆ. ಭಾರತ್ ಜೋಡೊ ಯಾತ್ರೆಯಲ್ಲಿ ತೆರಿಗೆದಾರ ಸಮುದಾಯದ ಪ್ರತಿಕ್ರಿಯೆ ಹೇಗಿದೆ?

ಯಾದವ್: ದೇಶದಲ್ಲಿ ನೇರ ತೆರಿಗೆ ಕಟ್ಟುವವರ ಪ್ರಮಾಣ ಪರೋಕ್ಷ ತೆರಿಗೆ ಪಾವತಿಸುವವರಿಗಿಂತ ಅತ್ಯಂತ ಕಡಿಮೆ ಇದೆ. ಬೀದಿ ಬದಿ ಮಲಗುವವನು ಚಪ್ಪಲಿ ಖರೀದಿಸಿದರೂ ಅದಕ್ಕೆ ತೆರಿಗೆ ಕಟ್ಟುತ್ತಾನೆ, ಬಾಳೆಹಣ್ಣು ಖರೀದಿಸಿದರೂ ತೆರಿಗೆ ಕಟ್ಟುತ್ತಾನೆ. ಹೀಗಾಗಿ ತೆರಿಗೆ ಕಟ್ಟುವವರು, ಕಟ್ಟದವರು ಎಂದು ವಿಭಜಿಸಿ ನೋಡುವುದು ಮತ್ತು ಉಚಿತ ಸವಲತ್ತುಗಳನ್ನು ವಿರೋಧಿಸುವುದು ಮೂರ್ಖತನ. ಇಲ್ಲಿ ಯಾವುದೂ ಉಚಿತ ಅಲ್ಲ. ದೇಶದ ಯಾರೊಬ್ಬರೂ ಮೂಲಭೂತ ಸವಲತ್ತುಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಕಲ್ಯಾಣ ರಾಜ್ಯದ, ಸರಕಾರದ ಕರ್ತವ್ಯ. ಶಿಕ್ಷಣ, ಆರೋಗ್ಯದಂತೆ ಎರಡು ಹೊತ್ತಿನ ಊಟ ಪ್ರತಿಯೊಬ್ಬರಿಗೂ ದಕ್ಕುವುದು ನೋಡಿಕೊಳ್ಳುವುದು ಪ್ರಪಂಚದ ಎಲ್ಲಾ ನಾಗರಿಕ ಸರಕಾರಗಳ ಮೂಲಭೂತ ಕರ್ತವ್ಯ.

ವಾಭಾ: ಕಾಂಗ್ರೆಸ್ ಅಳಿಯಬೇಕು ಎಂದು ಹೇಳಿದ್ದ ನೀವೇ ಮತ್ತೆ ಭಾರತ್ ಜೋಡೊ ಯಾತ್ರೆಗೆ ಬೆಂಬಲ ಸೂಚಿಸಿದ್ದೀರಿ. ಈ ಬದಲಾವಣೆಗೆ ಏನು ಪ್ರೇರಣೆ?

ಯಾದವ್: ನಾನು ಕಾಂಗ್ರೆಸ್ ಅಳಿಯಬೇಕು ಎಂದಷ್ಟೇ ಹೇಳಿರಲಿಲ್ಲ. ಈ ಹೆಡ್‌ಲೈನ್ ಕೆಳಗಿನ ಪೂರ್ತಿ ಓದದೆ ಕೆಲವರು ಮಾತಾಡುತ್ತಾರೆ. 2019ರಲ್ಲಿ ಇದನ್ನು ನಾನು ಹೇಳಿದ್ದು. ಬಿಜೆಪಿಯ ಗೆಲುವು ಈ ದೇಶದ ನೇಯ್ಗೆಯನ್ನು ಹಾಳು ಮಾಡುತ್ತದೆ. ದೇಶದ ಸಂರಚನೆಯನ್ನು ನಾಶ ಮಾಡುತ್ತದೆ. ಈ ಬಗ್ಗೆ ಕಾಂಗ್ರೆಸ್ ಪ್ರತಿರೋಧಿಸಬೇಕಾದಷ್ಟು ಪ್ರಮಾಣದಲ್ಲಿ ಪ್ರತಿರೋಧಿಸಲಿಲ್ಲ. ಹೋರಾಡಬೇಕಾದಷ್ಟು ತೀವ್ರತೆಯಲ್ಲಿ ಹೋರಾಡಲಿಲ್ಲ. ಈ ಕಾರಣಕ್ಕೆ ನಾನು ಆ ಮಾತನ್ನು ಹೇಳಿದ್ದು. ಬಿಜೆಪಿಯನ್ನು ತೀವ್ರವಾಗಿ ವಿರೋಧಿಸಬೇಕಾದ ಹೊಣೆಗಾರಿಕೆ ಮೊದಲು ಕಾಂಗ್ರೆಸ್‌ನ ಮೇಲಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅಧಿಕಾರರೂಢ ಪಕ್ಷವನ್ನು ನಾನು ಟೀಕಿಸಿದ್ದೆ. ಕಾಂಗ್ರೆಸ್‌ನ ಬಗ್ಗೆ ನನ್ನ ಭಿನ್ನಾಭಿಪ್ರಾಯಗಳು ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಆದರೆ, ಈ ಕ್ಷಣ ನಮ್ಮ ಎದುರಿಗಿರುವ ಸವಾಲು ಒಂದೆ. ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವಾಗ ನಮ್ಮ ಕಣ್ಣಿಗೆ ಕೇವಲ ಇಬ್ಬರು ಮಾತ್ರ ಕಾಣುತ್ತಿದ್ದಾರೆ. ಒಬ್ಬರು ಬೆಂಕಿ ಆರಿಸಲು ಕೈಯಲ್ಲಿ ನೀರಿನ ಬಕೆಟ್ ಹಿಡಿದು ಬರುತ್ತಿರುವವರು ಮತ್ತೊಬ್ಬರು ಬೆಂಕಿ ಹಚ್ಚಲು ಪೆಟ್ರೋಲ್ ಬಾಟಲು ಹಿಡಿದು ಬರುತ್ತಿರುವವರು. ನಾವು ಕೈಯಲ್ಲಿ ನೀರು ಹಿಡಿದವರ ಪರವಾಗಿ ನಿಲ್ಲಬೇಕಿದೆ. ಮೊದಲು ಬೆಂಕಿ ಬಿದ್ದ ಮನೆಯನ್ನು ಉಳಿಸಿಕೊಳ್ಳಬೇಕಿದೆ. ಮಿಕ್ಕದ್ದೆಲ್ಲಾ ಬಳಿಕ ನೋಡಿಕೊಂಡರಾಯಿತು. ನಮ್ಮ ಮನೆಗೆ ಬೆಂಕಿ ಬಿದ್ದಾಗ ಹಿಂದಿನ ದಿನ ಜಗಳ ಆಡಿದ್ದವನು ನೀರಿನ ಪಾತ್ರೆ ಹಿಡಿದು ಬಂದರೆ ಬೇಡ ಎನ್ನಲಾಗುತ್ತದೆಯೇ? ಈಗಿನ ದೇಶದ ಸಂದರ್ಭವೂ ಇದೇ ಆಗಿದೆ. ಮೊದಲು ಬೆಂಕಿ ಆರಿಸಬೇಕು. ದೇಶವನ್ನು ಕಾಪಾಡಿಕೊಳ್ಳಬೇಕು.

ವಾಭಾ: ಮುಂದಿನ ದಿನಗಳಲ್ಲಿ ನೀವು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆಯೇ?

ಯಾದವ್: ಸಾಧ್ಯತೆಗಳಿಲ್ಲ. ವಾಸ್ತವದಲ್ಲಿ ನಾವು ಈಗ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿಲ್ಲ. ಕಾಂಗ್ರೆಸ್ ಪ್ರಾರಂಭಿಸಿರುವ ಭಾರತ್ ಜೋಡೊ ಯಾತ್ರೆಯನ್ನು ಬೆಂಬಲಿಸುತ್ತಿದ್ದೇವೆ. ದೇಶವನ್ನು ಬೆಸೆಯುವ, ಸಾವಿರಾರು ವರ್ಷಗಳಿಂದ ಬೆಸೆದ ಭಾರತದ ಬೆಸುಗೆಯನ್ನು ಕಾಪಾಡಲು, ಭಾರತೀಯರ ನಡುವಿನ ಮಾನವೀಯ ನೇಯ್ಗೆಯನ್ನು ಕಾಪಾಡಬೇಕು ಎಂದು ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ನೇತೃತ್ವ ವಹಿಸಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ. ಅಂದ ಮಾತ್ರಕ್ಕೆ ನಾವು ಕಾಂಗ್ರೆಸ್‌ಗೆ ಪೂತಿಯಾರ್ಗಿ ಸೇರಿದ್ದೀವಿ ಎನ್ನುವ ಅರ್ಥ ಅಲ್ಲ.

ವಾಭಾ: ಭಾರತ್ ಜೋಡೊ ಯಾತ್ರೆಯ ಉದ್ದೇಶ-ಆಶಯ ತಳಮಟ್ಟದ ಕಾರ್ಯಕರ್ತರು ಮತ್ತು ಗ್ರಾಮೀಣ ಭಾರತಕ್ಕೆ ತಲುಪದೆ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆಯೇ?

ಯಾದವ್: ಭಾರತ್ ಜೋಡೊ ಯಾತ್ರೆ ಮುಗಿದ ಬಳಿಕ ಮುಂದಿನ ಹಂತದಲ್ಲಿ ನಾನಾ ಸ್ವರೂಪದ, ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ದೇಶದ ಪ್ರತೀ ಹಳ್ಳಿಯನ್ನೂ ತಲುಪುತ್ತೇವೆ. ಈಗ ನಾವು ದೇಶವನ್ನು ಕಾಪಾಡಿಕೊಳ್ಳದಿದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ. ಹೀಗಾಗಿ ದೇಶದ ಪ್ರತಿಯೊಬ್ಬರೂ ಕೈಯಲ್ಲಿ ನೀರಿನ ಪಾತ್ರೆ ಹಿಡಿದು ಬಂದು ಬೆಂಕಿ ಆರಿಸಬೇಕು. ಬೆಂಕಿ ಆರಿದ ಬಳಿಕ ಮಾತ್ರ ಈ ಸರಕಾರ ತಮ್ಮ ಬದುಕಿಗೆ ಮಾಡಿರುವ ಗಾಯಗಳು ದೇಶದ ಜನರಿಗೆ ಕಾಣಿಸುತ್ತವೆ. ಬನ್ನಿ ಎಲ್ಲರೂ ನೀರಿನ ಪಾತ್ರೆ ಹಿಡಿದು ನಮ್ಮೆಂದಿಗೆ ಹೆಜ್ಜೆ ಹಾಕಿ.

Writer - ಸಂದರ್ಶನ : ಗಿರೀಶ್ ಕೋಟೆ

contributor

Editor - ಸಂದರ್ಶನ : ಗಿರೀಶ್ ಕೋಟೆ

contributor

Similar News