×
Ad

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಉಚಿತ ಎಂಬಿಬಿಎಸ್ ಪದವಿಗೆ ತುಂಬೆ ಕಾಲೇಜಿನ ವಿದ್ಯಾರ್ಥಿನಿ ಖತೀಜಾ ರಾಫಿದ ಆಯ್ಕೆ

Update: 2022-09-29 10:46 IST

ಬಂಟ್ವಾಳ, ಸೆ.29: ಯು.ಎ.ಇ. ಅಜ್ಮಾನ್ ನಲ್ಲಿರುವ ತುಂಬೆ ಗ್ರೂಪ್ ಇದರ ಗಲ್ಫ್ ಮೆಡಿಕಲ್ ಯುನಿವರ್ಸಿಟಿ(Gulf Medical University)ಯಲ್ಲಿ ಉಚಿತ ಎಂ.ಬಿ.ಬಿ.ಎಸ್. ಪದವಿಗೆ ತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖತೀಜಾ ರಾಫಿದ ಆಯ್ಕೆಯಾಗಿದ್ದಾರೆ.

ತುಂಬೆ ಪದವಿ ಪೂರ್ವ ಕಾಲೇಜು ಮತ್ತು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ನಡುವಿನ ಒಪ್ಪಂದದಂತೆ ಮುಂದಿನ 5 ವರ್ಷಗಳಲ್ಲಿ ಪ್ರತೀ ವರ್ಷ ಒಂದು ಎಂ.ಬಿ.ಬಿ.ಎಸ್. ಸೀಟನ್ನು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಈ ಸ್ಕಾಲರ್ ಶಿಪ್ ಯೋಜನೆಯು ಸಂಪೂರ್ಣ ಶೈಕ್ಷಣಿಕ ವೆಚ್ಚ, ಉಚಿತ ಹಾಸ್ಟೆಲ್ ಮತ್ತು ಉಚಿತ ಮೆಸ್ ವ್ಯವಸ್ಥೆಯನ್ನು ಒಳಗೊಂಡಿದೆ.

ಈ ಸ್ಕಾಲರ್ ಶಿಪ್ ಯೋಜನೆಯಡಿಯಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗೆ ಉಚಿತ ಮೆಡಿಕಲ್ ಸೀಟನ್ನು ನೀಡಿದ್ದಕ್ಕಾಗಿ ತುಂಬೆ ಗ್ರೂಪ್ ಅಜ್ಮಾನ್ ಯುಎಇ ಇದರ ಸಂಸ್ಥಾಪಕ ತುಂಬೆ ಮೊಯ್ದಿನ್ ಅವರಿಗೆ ತುಂಬೆ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಹಾಗೂ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಮೆಡಿಕಲ್ ಸೀಟಿನ ಆಯ್ಕೆ ಪ್ರಕ್ರಿಯೆಯಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನಿಂದ ಒಟ್ಟು ನಾಲ್ವರು ವಿದ್ಯಾರ್ಥಿಗಳು ಭಾಗವಹಿಸಿದ್ದು ಅಂತಿಮವಾಗಿ ಖತೀಜಾ ರಾಫಿದ ಆಯ್ಕೆಯಾಗಿದ್ದಾರೆ. ಇವರು ತುಂಬೆ ವಳವೂರಿನ ದಿವಂಗತ ಅಹ್ಮದ್ ಹಾಗೂ ಝುಬೈದ ಫರ್ಹಾನ ದಂಪತಿಯ ಪುತ್ರಿಯಾಗಿದ್ದು ಎಲ್.ಕೆ.ಜಿ.ಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ತುಂಬೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News