ಮಂಗಳೂರು: ಪೋಸ್ಟ್‌ಮ್ಯಾನ್‌ಗೆ ಹಲ್ಲೆ ಪ್ರಕರಣ; ಆರೋಪಿಗೆ ಶಿಕ್ಷೆ

Update: 2022-09-29 12:11 GMT

ಮಂಗಳೂರು, ಸೆ.29: ಎರಡು ವರ್ಷದ ಹಿಂದೆ ಪೋಸ್ಟ್‌ಮ್ಯಾನ್‌ಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಅರೋಪಿಗೆ ಮಂಗಳೂರಿನ  6ನೆ ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ನಗರದ ಮಠದಕಣಿ ರಸ್ತೆಯ ಮಣೀಶ್ (20) ಶಿಕ್ಷೆಗೊಳಗಾದ ಆರೋಪಿ.

2020ರ ಜೂನ್ 16ರಂದು ಬೆಳಗ್ಗೆ 10:15ಕ್ಕೆ ಪೋಸ್ಟ್‌ಮ್ಯಾನ್, ಮಠದಕಣಿ ನಿವಾಸಿ ದಿನೇಶ್ ಎಂಬವರು ಪೋಸ್ಟ್ ನೀಡಲು ಮಣೀಶ್‌ನ ಮನೆಗೆ ಹೋದ ವೇಳೆ ಅವಾಚ್ಯ ಶಬ್ದದಿಂದ ಬೈದು, ಕಬ್ಬಿಣದ ರಾಡ್‌ನಿಂದ ಹೊಡೆದು ಬೈಕ್‌ಗೆ ಹಾನಿಗೊಳಿಸಿ, ಜೀವಬೆದರಿಕೆ ಹಾಕಿದ್ದ ಎಂದು ಆರೋಪಿಸಿ ಬರ್ಕೆಗೆ ದೂರು ನೀಡಲಾಗಿತ್ತು. ಅಲ್ಲದೆ ಅಂದಿನ ಬರ್ಕೆ ಎಸ್ಸೈ ಹಾರೂನ್ ಅಖ್ತರ್ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಇತ್ತಂಡಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಪೂಜಾಶ್ರೀ ಎಚ್.ಎಸ್. ಅವರು ಸೆ. 427ರ ಪ್ರಕಾರ 2500 ರೂ. ದಂಡ ಮತ್ತು ದಂಡ ಪಾವತಿಸದಿದ್ದರೆ 10 ದಿನಗಳ ಸಾಮಾನ್ಯ ಶಿಕ್ಷೆ, ಸೆ.332ರ ಪ್ರಕಾರ 10 ತಿಂಗಳ ಶಿಕ್ಷೆ, ಸೆ.353ರ ಪ್ರಕಾರ 5 ತಿಂಗಳ ಶಿಕ್ಷೆ, ಸೆ.324ರ ಪ್ರಕಾರ 6 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಪ್ರಭಾರ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News