×
Ad

ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಡಿವೈಎಫ್‌ಐ ಒತ್ತಾಯ

Update: 2022-09-29 20:03 IST

ಮಂಗಳೂರು, ಸೆ.29: ಅಡ್ಯಾರ್ ಮತ್ತು ಹರೇಕಳ ಗ್ರಾಮವನ್ನು ಸಂಪರ್ಕಿಸುವ ನೇತ್ರಾವತಿ ನದಿಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಆಣೆಕಟ್ಟು ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸೇತುವೆಯನ್ನು ಸಂಪರ್ಕಿಸುವಲ್ಲಿ ರಸ್ತೆ ಕಾಮಗಾರಿ ಸಮರ್ಪಕವಾಗಿ ಮಾಡದಿರುವುದರಿಂದ ನಾಗರಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಹಾಗಾಗಿ ಹರೇಕಳ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಡಿವೈಎಫ್‌ಐ ನಿಯೋಗವು ಜಲಸಂಪನ್ಮೂಲ ಇಲಾಖೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದೆ.

ಆಣೆಕಟ್ಟು ನಿರ್ಮಾಣದ ನಂತರ ದೋಣಿ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ದಿನನಿತ್ಯ ನಗರಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ನದಿಯಾಚೆಗಿನ ಪ್ರಯಾಣಕ್ಕೆ ಸಮಸ್ಯೆಯಾಗಿದೆ. ಸದ್ಯ ಸೇತುವೆ ಮೇಲೆ ನಾಗರಿಕರಿಗೆ ನಡೆದಾಡಲು ಸಂಜೆ 7ರ ನಂತರ ಮುಂಜಾನೆ 6ರವರೆಗೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಎರಡು ಬದಿಗಳಲ್ಲಿ ಗೇಟುಗಳನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಸಂಜೆ 7ರ ನಂತರ ಬರುವ ನಾಗರಿಕರು ಬೇಲಿ ಹಾರಿ ಬರುವ ಪರಿಸ್ಥಿತಿಯಿದೆ. ಇದರಿಂದ ನಾಗರಿಕರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಕೂಡಲೇ ಸಾರ್ವಜನಿಕರಿಗೆ 24 ಗಂಟೆ ಮುಕ್ತ ಓಡಾಟಕ್ಕೆ ಅವಕಾಶ ಕೊಡಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ. ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತೆ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದು ಆಗ್ರಹಿಸಿದೆ.

ಮುಂದಿನ 15 ದಿನದ ಒಳಗಾಗಿ ಸಾರ್ವಜನಿಕರಿಗೆ ಮುಕ್ತವಾಗಿ ನಡೆದಾಡಲು ಅವಕಾಶ ಮಾಡಿಕೊಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿವೆ.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಪಂ ಸದಸ್ಯರಾದ ಅಶ್ರಫ್ ಹರೇಕಳ, ಹರೇಕಳ ಗ್ರಾಮ ಸಮಿತಿಯ ಕಾರ್ಯದರ್ಶಿ ರಿಝ್ವಾನ್ ಖಂಡಿಗೆ ನಿಯೋಗದಲ್ಲಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News