ಮಂಗಳೂರಿನ ನೆಹರೂ ಮೈದಾನದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ: ಆರೋಪ

Update: 2022-09-29 16:08 GMT

ಮಂಗಳೂರು, ಸೆ.29: ನಗರದ ನೆಹರೂ ಮೈದಾನದಲ್ಲಿ ಖಾಸಗಿ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ರಾಜ್ಯ ಹೈಕೋರ್ಟ್ ಆದೇಶಿಸಿದ್ದರೂ ಕೂಡ ಜಿಲ್ಲಾಡಳಿತ, ಮನಪಾ ಆಡಳಿತವು ಸಾರ್ವಜನಿಕ ಗಣೇಶೋತ್ಸವ, ಪಿಲಿಪರ್ಬ ಇತ್ಯಾದಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ನೀಡುವ ಮೂಲಕ ಹೈಕೋರ್ಟ್‌ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಆರೋಪ ಸಾರ್ವಜನಿಕರು ವಲಯದಿಂದ ವ್ಯಕ್ತವಾಗಿದೆ.

ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್‌ನಲ್ಲಿ ಕ್ರೀಡೆ ಹೊರತು ಬೇರೆ ಯಾವ ಖಾಸಗಿ ಕಾರ್ಯಕ್ರಮಕ್ಕೂ ಅವಕಾಶ ನೀಡಬಾರದು ಎಂದು 2020ರ ಮೇ 14ರಂದು 11 ಮಂದಿ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ರಾಜ್ಯ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅಲ್ಲದೆ ರಾಜ್ಯ ಸರಕಾರ, ದ.ಕ.ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆಯನ್ನು ಪ್ರತಿವಾದಿಯನ್ನಾಗಿಸಲಾಗಿತ್ತು.

ವಾದ-ಪ್ರತಿವಾದ ಆಲಿಸಿದ್ದ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಅಭಯ್ ಎಸ್. ಹಾಗೂ ನ್ಯಾಯಾಧೀಶ ಎಸ್.ವಿಶ್ವನಾಥ ಶೆಟ್ಟಿ ಅವರು ನೆಹರೂ ಮೈದಾನ-ಫುಟ್ಬಾಲ್ ಗ್ರೌಂಡ್‌ನಲ್ಲಿ ಕ್ರೀಡೆ ಹೊರತು ಬೇರೆ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು 2020ರ ಡಿಸೆಂಬರ್ 16ರಂದು ಆದೇಶ ಹೊರಡಿಸಿದ್ದರು.

ಆ ಬಳಿಕ ಸರಕಾರಿ ಕಾರ್ಯಕ್ರಮ ಹೊರತುಪಡಿಸಿ ಖಾಸಗಿ ಕಾರ್ಯಕ್ರಮ ನಡೆದಿಲ್ಲ. ಇತ್ತೀಚೆಗೆ ನೆಹರೂ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಸಲಾಗಿದೆ. ಅಲ್ಲದೆ ಸಂಸದರು, ಶಾಸಕರು ಹಾಗೂ ಸ್ಥಳೀಯ ಶಾಸಕರ ಒತ್ತಾಸೆಯ ಮೇರೆಗೆ ಅಕ್ಟೋಬರ್ 2ರಂದು ಬೆಳಗ್ಗಿನಿಂದ ರಾತ್ರಿವರೆಗೆ ಪಿಲಿಪರ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ರಾಜ್ಯ ಹೈಕೋರ್ಟ್‌ನ ಆದೇಶಕ್ಕೆ ಸ್ಪಷ್ಟ ಉಲ್ಲಂಘನೆಯ ಕ್ರಮವಾಗಿದೆ ಎಂಬ ಆಕ್ಷೇಪ ಕೇಳಿ ಬಂದಿದೆ.

ದ.ಕ.ಜಿಲ್ಲಾಧಿಕಾರಿ, ಮಂಗಳೂರು ನಗರ ಪಾಲಿಕೆಯ ಆಯುಕ್ತರು ಸಂಸದರು, ಶಾಸಕರು, ಕಾರ್ಪೊರೇಟರ್‌ರ ಒತ್ತಡಕ್ಕೆ ಮಣಿದರೇ? ಹೈಕೋರ್ಟ್‌ನ ಆದೇಶವನ್ನು ಪಾಲಿಸಬೇಕಾದ ಅಧಿಕಾರಿಗಳು ಉಲ್ಲಂಘಿಸಿದ್ದು ಎಷ್ಟು ಸರಿ  ಎಂದು ಪ್ರಶ್ನಿಸತೊಡಗಿದ್ದಾರೆ.

ಈ ಹಿಂದೆ ಕೆಲವು ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ, ಮನಪಾ ಆಡಳಿತಕ್ಕೆ ಮನವಿ ಸಲ್ಲಿಸಿದಾಗ ಹೈಕೋರ್ಟ್ ಆದೇಶವನ್ನು ನೆನಪಿಸಿದ್ದ ಅಧಿಕಾರಿಗಳು ಇದೀಗ ಸಾರ್ವಜನಿಕ ಗಣೇಶೋತ್ಸವ, ಪಿಲಿಪರ್ಬ ಕಾರ್ಯಕ್ರಮ ನಡೆಸುವಾಗ ಹೈಕೋರ್ಟ್ ಆದೇಶವನ್ನು ಮರೆತರೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News