ಪ್ರತಿಭಟನೆ ಸಂದರ್ಭ ಸಾರ್ವಜನಿಕ ಸೊತ್ತಿಗೆ ಹಾನಿ: 5.20 ಕೋ. ರೂ. ಠೇವಣಿ ಇರಿಸುವಂತೆ ಪಿಎಫ್‌ಐಗೆ ಕೇರಳ ಹೈಕೋರ್ಟ್ ಆದೇಶ

Update: 2022-09-29 16:49 GMT
Photo:PTI

ತಿರುವನಂತಪುರ, ಸೆ. 29: ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ದಾಳಿಯನ್ನು ಖಂಡಿಸಿ ನಡೆದ ಮುಷ್ಕರದ ಸಂದರ್ಭ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಉಂಟು ಮಾಡಿದ ಹಾನಿಯ ವೆಚ್ಚವನ್ನು ಭರಿಸಲು 5.20 ಕೋಟಿ ರೂಪಾಯಿ ಠೇವಣಿ ಇರಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ನಿರ್ದೇಶಿಸಿದೆ. 

ಭಯೋತ್ಪಾದನೆ ಚಟುವಟಿಕೆಯ ಆರೋಪದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು 5 ವರ್ಷಗಳಿಗೆ ನಿಷೇಧ ವಿಧಿಸಿದ ದಿನದ ಬಳಿಕ ಕೇರಳ ಹೈಕೋರ್ಟ್‌ನ ಈ ಆದೇಶ ಹೊರ ಬಿದ್ದಿದೆ. 

ಕಳೆದ ವಾರ ಕರೆ ನೀಡಲಾಗಿದ್ದ ಮುಷ್ಕರದ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೆಂಬಲಿಸಿದ ಪ್ರತಿಭಟನಕಾರರು ಕೋಝಿಕ್ಕೋಡ್, ವಯನಾಡ್, ತಿರುವನಂತಪುರ, ಆಲಪ್ಪುಳ, ಪಂದಳಂ, ಕೊಲ್ಲಂ, ತ್ರಿಶೂರು ಹಾಗೂ ಕಣ್ಣೂರಿನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಬಸ್‌ಗಳ  ಕಿಟಕಿಗಳಿಗೆ ಹಾನಿ ಉಂಟು ಮಾಡಿದ್ದರು. ಕೋಝಿಕ್ಕೋಡ್‌ನಲ್ಲಿ ಬಸ್ ಚಾಲಕನಿಗೆ ಗಾಯವಾಗಿತ್ತು. 

ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ವಿರುದ್ಧ ಕೇರಳ ಉಚ್ಚ ನ್ಯಾಯಾಲಯ ಸೆಪ್ಟಂಬರ್ 23ರಂದು ನ್ಯಾಯಾಂಗ ನಿಂದನೆ ಕಲಾಪವನ್ನು ಆರಂಭಿಸಿದೆ. 

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳವಾರ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿ ಪ್ರತಿಭಟನೆ ಸಂದರ್ಭ ಸಂಸ್ಥೆಗೆ ಉಂಟಾದ ಹಾನಿಗೆ ಪರಿಹಾರವಾಗಿ 5.06 ಕೋಟಿ ರೂಪಾಯಿ ನೀಡುವಂತೆ ಕೋರಿತ್ತು. ಈ ಮನವಿಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಹಾಗೂ ಮುಹಮ್ಮದ್ ನಿಯಾಸ್ ಸಿ.ಪಿ. ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಬಲಿಗರಿಂದ ಪ್ರಜೆಗಳಿಗೆ ಗಾಯಗಳಾಗಲು ಹಾಗೂ ಸಾರ್ವಜನಿಕ, ಖಾಸಗಿ ಸೊತ್ತುಗಳಿಗೆ ಹಾನಿ ಉಂಟಾಗಲು ಪಿಎಫ್‌ಐ ಹಾಗೂ ಅದರ ಪ್ರಧಾನ ಕಾರ್ಯದರ್ಶಿ ಸಂಪೂರ್ಣವಾಗಿ ಹಾಗೂ ನೇರ ಹೊಣೆ ಎಂದು ಅಭಿಪ್ರಾಯಿಸಿತು.‌

ಪಿಎಫ್‌ಐ ಖಾತೆ ತಡೆ ಹಿಡಿದ ಟ್ವಿಟರ್

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಅಧಿಕೃತ ಖಾತೆಯನ್ನು ಟ್ವಿಟರ್ ಗುರುವಾರ ತಡೆ ಹಿಡಿದಿದೆ. ಕಾನೂನಿನ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಪಿಎಫ್‌ಐಯ ಖಾತೆಯನ್ನು ತಡೆ ಹಿಡಿಯಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಇನ್ನು ಮುಂದೆ ಪಿಎಫ್‌ಐಯ ಪೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಕೂಡ ಲಭ್ಯವಾಗದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News