ಒಡಿಶಾ: ಸಿಗಡಿ ಸಂಸ್ಕರಣೆ ಘಟಕದಲ್ಲಿ ಅನಿಲ ಸೋರಿಕೆ; 28 ಕಾರ್ಮಿಕರು ಅಸ್ವಸ್ಥ

Update: 2022-09-29 17:26 GMT

ಬಾಲಸೋರ್, ಸೆ. 29: ಒಡಿಶಾದ ಬಾಲಸೋರ್ ಜಿಲ್ಲೆಯ ಸಿಗಡಿ ಸಂಸ್ಕರಣೆ ಘಟಕದಲ್ಲಿ ಬುಧವಾರ ಸೋರಿಕೆಯಾದ ಅಮೋನಿಯಾ ಸೇವಿಸಿ 28ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. 

ಘಟನೆ ಬಗ್ಗೆ ಮಾಹಿತಿ ಸ್ವೀಕರಿಸಿದ ಕೂಡಲೇ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ರಕ್ಷಣಾ ತಂಡ ಸಿಗಡಿ ಸಂಸ್ಕರಣಾ ಫ್ಯಾಕ್ಟರಿ ಹೈಲ್ಯಾಂಡ್ ಅಗ್ರೋ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ಧಾವಿಸಿತು. 28 ಕಾರ್ಮಿಕರನ್ನು ರಕ್ಷಿಸಿ, ಅವರನ್ನು ಖಂಟಪಾಡ ಆಸ್ಪತ್ರೆಗೆ ಕಳುಹಿಸಿತು. ಅವರಲ್ಲಿ 15 ಮಂದಿಯನ್ನು ಬಾಲಸೋರ್ ಹಾಗೂ ಇತರ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಜಿಲ್ಲೆಯ ಖಂಟಪಾಡ ಪ್ರದೇಶದಲ್ಲಿರುವ ಗದಬಹಾಂಗ ಗ್ರಾಮದಲ್ಲಿ ಸಂಜೆ ಸುಮಾರು 7 ಗಂಟೆಗೆ ಸಂಭವಿಸಿದೆ. 

‘‘ಖಂಟಪಾಡ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 28 ಕಾರ್ಮಿಕರನ್ನು ದಾಖಲಿಸಲಾಗಿದೆ. ಇದುವರೆಗೆ ಕೇವಲ 7 ಕಾರ್ಮಿಕರನ್ನು ಬಾಲಸೋರ್ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿರುವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಹಾಗೂ ಮೂವರನ್ನು ಬಿಡುಗಡೆ ಮಾಡಲಾಗಿದೆ’’ ಎಂದು ಬಾಲಸೋರ್ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಜುಲಾಲ್‌ಸೇನ್ ಜಗದೇವ್ ಅವರು ಹೇಳಿದ್ದಾರೆ. 

ಅಮೋನಿಯಾ ಅನಿಲ ಸೇವಿಸಿದ ಪರಿಣಾಮ ತಮ್ಮ ಗಂಟಲು, ಮೂಗು ಹಾಗೂ ಉಸಿರಾಟದ ಪಥದಲ್ಲಿ ಉರಿಯುತ್ತಿರುವುದಾಗಿ  ಕಾರ್ಮಿಕರು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘‘ಅಮೋನಿಯಾ ಅನಿಲ ಸೇವನೆ ಕೆಮ್ಮು, ಮೂಗು ಹಾಗೂ ಗಂಟಲು ಕಿರಿಕಿರಿಗೆ ಕಾರಣವಾಗುತ್ತದೆ. ಹಲವರು ಉಸಿರಾಟದಲ್ಲಿ ತೊಂದರೆ ಹಾಗೂ ಕಣ್ಣು ಉರಿಯುತ್ತಿರುವ ಕುರಿತು ದೂರಿದ್ದಾರೆ. ನಾವು ಅವರಿಗೆ ಉಸಿರಾಟಕ್ಕೆ ಆಮ್ಲಜನಕ ಒದಗಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News