ದಬ್ಬಾಳಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ

Update: 2022-09-30 07:27 GMT

ಪಿಎಫ್‌ಐಯಂತಹ ನೂರಾರು ಸಂಘಟನೆಗಳು ಸೇರಿ ಸಮಾಜಕ್ಕೆ ಮಾಡಬಹುದಾದ ಹಾನಿಗಿಂತ ಹೆಚ್ಚಿನ ಹಾನಿಯನ್ನು ಮಾಡಿದವರು, ದೇಶದಲ್ಲಿ ಗೌರವಾನ್ವಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಸಮಾಜದಲ್ಲಿ ಸರಕಾರವು ಹಠಾತ್ತಾಗಿ ಕೇವಲ ಒಂದು ಸಂಘಟನೆಯನ್ನು ಗುರಿಯಾಗಿಸಿ ನಿಷೇಧ ಹೇರುವಂತಹ ಕ್ರಮ ಕೈಗೊಂಡಿರುವುದರ ವಿರುದ್ಧ ಶ್ರೀಸಾಮಾನ್ಯರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ಪಿಎಫ್‌ಐ ಎಂಬ ಸಂಘಟನೆ ಮತ್ತದರ ಸಹ ಸಂಸ್ಥೆಗಳ ಮೇಲೆ ಸರಕಾರವು ನಿಷೇಧ ಹೇರಿದೆ. ನಿಷೇಧದಂತಹ ಅತ್ಯುಗ್ರ ಕ್ರಮಕ್ಕೆ ಅರ್ಹವಾಗುವಂತಹ ಯಾವುದಾದರೂ ಅಪರಾಧವನ್ನು ಆ ಸಂಘಟನೆ ಮಾಡಿದೆ ಎಂಬುದಕ್ಕೆ ಯಾವುದೇ ನಂಬಲರ್ಹ ಪುರಾವೆಯನ್ನು ಸರಕಾರ ಕೂಡಾ ಈವರೆಗೆ ಒದಗಿಸಿಲ್ಲ. ವಿಶೇಷವಾಗಿ, ಕೊಚ್ಚಿರಿ ಕೊಲ್ಲಿರಿ ಎಂದೆಲ್ಲಾ ಬಹಿರಂಗವಾಗಿ ಕರೆನೀಡುವವರು, ಅಮಾಯಕರನ್ನು ಥಳಿಸಿ ಕೊಲ್ಲುವವರು ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಜನರನ್ನು ಹೆದರಿಸಲು ಶ್ರಮಿಸುತ್ತಿರುವವರು, ಸಾಮೂಹಿಕ ಹತ್ಯಾಕಾಂಡ ನಡೆಸುತ್ತೇವೆಂದು ಬೆದರಿಸುವವರು ಮತ್ತು ಹಾಡಹಗಲಲ್ಲೇ ಅಮಾನುಷ ಹಿಂಸಾಚಾರಗಳಲ್ಲಿ ನಿರತರಾಗುವವರು ನಮ್ಮ ಸಮಾಜದಲ್ಲಿ ಎಲ್ಲೆಂದರಲ್ಲಿ ನಿರಾತಂಕವಾಗಿ ಓಡಾಡುತ್ತಿದ್ದಾರೆ. ಭಯಾನಕ ಭಯೋತ್ಪಾದಕ ಕೃತ್ಯಗಳನ್ನು ಎಸಗಿ ಸಾಕ್ಷ್ಯಾಧಾರ ಸಮೇತ ಸಿಕ್ಕಿ ಬಿದ್ದ ಅನೇಕರು ಕೂಡಾ ಮುಕ್ತವಾಗಿ ಎಲ್ಲೆಡೆ ಮೆರೆಯುತ್ತಿದ್ದಾರೆ. ಪಿಎಫ್‌ಐಯಂತಹ ನೂರಾರು ಸಂಘಟನೆಗಳು ಸೇರಿ ಸಮಾಜಕ್ಕೆ ಮಾಡಬಹುದಾದ ಹಾನಿಗಿಂತ ಹೆಚ್ಚಿನ ಹಾನಿಯನ್ನು ಮಾಡಿದವರು, ದೇಶದಲ್ಲಿ ಗೌರವಾನ್ವಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಸಮಾಜದಲ್ಲಿ ಸರಕಾರವು ಹಠಾತ್ತಾಗಿ ಕೇವಲ ಒಂದು ಸಂಘಟನೆಯನ್ನು ಗುರಿಯಾಗಿಸಿ ನಿಷೇಧ ಹೇರುವಂತಹ ಕ್ರಮ ಕೈಗೊಂಡಿರುವುದರ ವಿರುದ್ಧ ಶ್ರೀಸಾಮಾನ್ಯರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಿಎಫ್‌ಐ ಮತ್ತದರ ಸದಸ್ಯರ ಮೇಲೆ ಕೆಲವು ಗಂಭೀರ ಆರೋಪಗಳಿರುವುದು ನಿಜ. ಆದರೆ ಈ ಪೈಕಿ ಹೆಚ್ಚಿನ ಆರೋಪಗಳು ವ್ಯಕ್ತಿಗತ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ್ದು, ಆ ಕೃತ್ಯಗಳಲ್ಲಿ ತನಗೆ ಯಾವುದೇ ಪಾತ್ರವಿಲ್ಲವೆಂದು ಸಂಘಟನೆಯು ವಾದಿಸಿದೆ.

ಈ ರೀತಿ ಕಾರ್ಯಕರ್ತರ ಮೇಲಿನ ಅಪರಾಧಕೃತ್ಯಗಳ ಆಧಾರದಲ್ಲಿ ಸಂಘಟನೆಗಳ ಮೇಲೆ ನಿಷೇಧ ಹೇರುವುದು ನ್ಯಾಯವೆಂದಾದರೆ ಸಂಘ ಪರಿವಾರ ಮತ್ತು ಅದಕ್ಕೆ ಸೇರಿದ ಎಲ್ಲ ಸಂಘಟನೆಗಳ ಮೇಲೆ ಎಂದೋ ಶಾಶ್ವತ ನಿಷೇಧ ಹೇರಬೇಕಿತ್ತು. ಏಕೆಂದರೆ, ಪ್ರಸ್ತುತ ಪರಿವಾರಕ್ಕೆ ಸೇರಿದವರು ಕಳೆದ ಕೆಲವು ದಶಕಗಳ ಅವಧಿಯಲ್ಲಿ ರಾಷ್ಟ್ರಪಿತನ ಹತ್ಯೆಯಿಂದಾರಂಭಿಸಿ, ಹಲವಾರು ವಿಧ್ವಂಸಕ ಕೃತ್ಯಗಳನ್ನು, ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತು ಸಾಮೂಹಿಕ ಹತ್ಯಾಕಾಂಡದಂತಹ ಮಹಾಪರಾಧಗಳನ್ನು ಎಸಗಿದ್ದಕ್ಕೆ ಧಾರಾಳವಾದ ಅಧಿಕೃತ ಪುರಾವೆಗಳಿವೆ. ಅಂಥವರನ್ನೆಲ್ಲ ಶಿಕ್ಷಿಸುವ ಬದಲು ಅವರನ್ನು ಬಹಿರಂಗವಾಗಿ ಮತ್ತು ಉದಾರವಾಗಿ ಸನ್ಮಾನಿಸಿ ಪುರಸ್ಕರಿಸುವ ಒಂದು ಸರಕಾರವು ಒಂದು ಪುಟ್ಟ ಸಂಘಟನೆಯನ್ನು ಗುರಿ ಮಾಡಿ ಅದರ ವಿರುದ್ಧ ಇಷ್ಟೊಂದು ಉಗ್ರ ಕ್ರಮಕೈಗೊಂಡಿರುವುದು ವಿರೋಧಾಭಾಸವಾಗಿದೆ. ಒಂದು ವೇಳೆ ಸರಕಾರವು ಆರೋಪಿಸಿರುವಂತೆ ಪಿಎಫ್‌ಐ ಸಂಘಟನೆಯು ನಿಜಕ್ಕೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿತ್ತು, ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಅದಕ್ಕೆ ನಂಟಿತ್ತು ಮತ್ತು ಅದು ಆರ್ಥಿಕ ಅಪರಾಧಗಳನ್ನು ಎಸಗಿತ್ತು ಎಂಬುದು ನಿಜವಾಗಿದ್ದರೆ ಸರಕಾರವು ಈ ಕುರಿತು ತನ್ನ ಬಳಿ ಇರುವ ಪುರಾವೆಗಳನ್ನು ನ್ಯಾಯಾಲಯದ ಮುಂದಿಟ್ಟು, ನ್ಯಾಯಾಲಯದಲ್ಲಿ ಈ ಆರೋಪಗಳು ಸಾಬೀತಾದ ಬಳಿಕ ಆ ಸಂಘಟನೆಯ ವಿರುದ್ಧ ಅತ್ಯುಗ್ರ ಕ್ರಮಗಳನ್ನು ಕೈಗೊಳ್ಳಬಹುದಿತ್ತು.

ಸರಕಾರವು ಆ ರೀತಿಯ ಸ್ವಾಭಾವಿಕ ನಿಯಮವನ್ನು ಅನುಸರಿಸಿದ್ದರೆ ಖಂಡಿತವಾಗಿಯೂ ಯಾರು ಕೂಡಾ ಅದನ್ನು ಆಕ್ಷೇಪಿಸುತ್ತಿರಲಿಲ್ಲ. ಹಾಗೆಯೇ, ಪಿಎಫ್‌ಐಗಿಂತ ಹಲವು ಪಾಲು ಹೆಚ್ಚು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮನುವಾದಿ ಉಗ್ರ ಸಂಘಟನೆಗಳ ವಿರುದ್ಧ ಕೂಡಾ ಸರಕಾರವು ಸೂಕ್ತ ಕ್ರಮ ಕೈಗೊಂಡಿದ್ದರೆ ಸರಕಾರದ ಇಂಗಿತವನ್ನು ಜನರು ಪ್ರಶ್ನಿಸುತ್ತಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಸರಕಾರ, ರಾಜಕೀಯ ಪಕ್ಷಗಳು ಮತ್ತು ಕೂಡಾ ಜನನಾಯಕರು ತಮ್ಮ ಇಂಗಿತ ಎಷ್ಟೇ ವಕ್ರವಾಗಿದ್ದರೂ, ಹೊರನೋಟಕ್ಕೆ ತಾವು ನಿಷ್ಪಕ್ಷ ಧೋರಣೆ ಪಾಲಿಸುವವರು, ಯಾವುದೇ ವರ್ಗದ ವಿರುದ್ಧ ಪಕ್ಷಪಾತ ತೋರದೆ ಎಲ್ಲರನ್ನೂ ಸಮಾನವಾಗಿ ನೋಡುವವರು, ರಾಜಧರ್ಮವನ್ನು ಪಾಲಿಸುವವರು ಎಂದೆಲ್ಲಾ ತೋರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಏಕೆಂದರೆ ಯಾವುದೇ ಸ್ವಸ್ಥ ಸಮಾಜವು ತನ್ನ ಆಡಳಿತಗಾರರಿಂದ ಅಂತಹ ನ್ಯಾಯ ಪರ ನಿಲುವನ್ನೇ ನಿರೀಕ್ಷಿಸುತ್ತದೆ. ಆದರೆ ನಮ್ಮ ಸಮಾಜದ ಸ್ವಾಸ್ಥ್ಯ ಎಷ್ಟು ಕೆಟ್ಟಿದೆ ಎಂದರೆ ಇಲ್ಲಿ ಆಡಳಿತಗಾರರು ತಮ್ಮ ಪಕ್ಷಪಾತಿ ನೀತಿಯ ಬಗ್ಗೆ ನಾಚಿಕೆ ಪಟ್ಟುಕೊಳ್ಳುವ ಬದಲು ಅದನ್ನೇ ತನ್ನ ವಿಶೇಷ ಪ್ರತಿಭೆ ಹಾಗೂ ಸಾಮರ್ಥ್ಯವೆಂಬಂತೆ ಪ್ರದರ್ಶಿಸುವ ಪ್ರಯತ್ನ ನಡೆಸುತ್ತಾರೆ.

ಇತ್ತೀಚೆಗಷ್ಟೇ ಅಪರಾಧಗಳಿಗೆ ಬಲಿಯಾದವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವ ವಿಷಯದಲ್ಲೂ, ಮೃತರ ಪರಿವಾರಗಳಿಗೆ ಪರಿಹಾರ ನೀಡುವ ವಿಷಯದಲ್ಲೂ ತೀರಾ ನೀಚ ಮಟ್ಟದ ಪಕ್ಷಪಾತ ತೋರಿದ ನಮ್ಮ ಆಡಳಿತಗಾರರು ಮತ್ತವರ ಪಾಳಯದ ನಾಯಕರು ಆ ತಮ್ಮ ಅಪರಾಧವನ್ನೇ ತಮ್ಮ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಆ ಬಗ್ಗೆ ಅಭಿಮಾನಪಡುತ್ತಿರುವುದು ಕಂಡು ಬಂದಿದೆ. ಪಿಎಫ್‌ಐ ಮೇಲಿನ ನಿಷೇಧವನ್ನು ಸಮರ್ಥಿಸುವುದಕ್ಕಾಗಿ ಸರಕಾರದ ಕಡೆಯಿಂದ ಹಲವು ಕಾರಣಗಳನ್ನು ಮುಂದಿಡಲಾಗಿದೆ. ದೇಶದ ಭದ್ರತೆಗೆ ಅಪಾಯವೊಡ್ಡುವ ಕೃತ್ಯಗಳು, ಪ್ರತ್ಯೇಕತಾವಾದಿ ವಿಚ್ಛಿದ್ರಕಾರಿ ಚಟುವಟಿಕೆಗಳು, ಐಸಿಸ್ ಜೊತೆ ಸಂಬಂಧ ಮುಂತಾದ ಘನ ಘೋರ ಆರೋಪಗಳ ಕುರಿತು ಹೇಳುವುದಾದರೆ ಆ ಪೈಕಿ ಯಾವುದು ಕೂಡಾ ಹೊಸ ಆರೋಪವಲ್ಲ ಮತ್ತು ಅವು ಕೇವಲ ಆ ಒಂದು ಸಂಘಟನೆಯ ಮೇಲಿರುವ ಆರೋಪಗಳೂ ಅಲ್ಲ. ಸಂಘ ಪರಿವಾರದವರು ಮತ್ತು ಮಾಧ್ಯಮರಂಗದಲ್ಲಿನ ಅವರ ತುತ್ತೂರಿಗಳು, ವ್ಯವಸ್ಥೆಯ ಭಟ್ಟಂಗಿಗಳಾಗಲು ಒಲ್ಲದ ಎಲ್ಲರ ಮೇಲೆ ಇಂತಹ ಆರೋಪಗಳನ್ನು ಹೊರಿಸಿದ್ದಾರೆ.

ವಿಶೇಷವಾಗಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಹಲವಾರು ಸಂಘಟನೆಗಳ ಮೇಲೆ, ನೂರಾರು ವ್ಯಕ್ತಿಗಳ ಮೇಲೆ ಮತ್ತು ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಮಸೀದಿ ಮದ್ರಸಾಗಳ ಮೇಲೆ ಪದೇ ಪದೇ ಇಂತಹ ಆರೋಪಗಳನ್ನು ಹೊರಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಂತೂ ಸರಕಾರದ ಹೊಣೆಗೇಡಿ ಧೋರಣೆಗಳನ್ನು ಪ್ರಶ್ನಿಸಿದ್ದಕ್ಕಾಗಿ, ಪ್ರಜಾಸತ್ತೆ, ಮೂಲಭೂತ ಹಕ್ಕುಗಳು, ಮಾನವಾಧಿಕಾರಗಳು ಮುಂತಾದ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕಾಗಿ ವಿವಿಧ ಜಾತಿ, ಧರ್ಮ ಮತ್ತು ಸೈದ್ಧಾಂತಿಕ ಹಿನ್ನೆಲೆಯ ಎಷ್ಟೋ ಮಂದಿ ಪತ್ರಕರ್ತರು, ಸಾಹಿತಿಗಳು, ವಿದ್ಯಾರ್ಥಿ ನಾಯಕರು, ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಕೂಡಾ ಇಂತಹದೇ ಹೀನ ಆರೋಪಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅದರಿಂದಾಗಿಯೇ ಪ್ರಸ್ತುತ ಆರೋಪಗಳೆಲ್ಲಾ ತಮ್ಮ ಗಾಂಭೀರ್ಯವನ್ನು ಕಳೆದುಕೊಂಡಿವೆ. ಮಾತೆತ್ತಿದರೆ ದೇಶದ್ರೋಹದ ಆರೋಪಹೊರಿಸುವವರ ಸಂಸ್ಕೃತಿಯಿಂದಾಗಿ ದೇಶದ್ರೋಹದಂತಹ ದೊಡ್ಡ ಆರೋಪ ಕೂಡಾ ತನ್ನ ಮೊನಚನ್ನು ಕಳೆದುಕೊಂಡು ತೀರಾ ಸಾಮಾನ್ಯ ಆರೋಪದ ಸ್ವರೂಪ ಪಡೆದುಕೊಂಡಿದೆ. ಪಿಎಫ್‌ಐ ಕುರಿತು ಪ್ರತಿಕೂಲ ನಿಲುವು ಹೊಂದಿರುವವರು, ಅದು ತತ್ವ ಸಿದ್ಧಾಂತಗಳ ಬದಲು ಭಾವುಕತೆಯನ್ನೇ ತನ್ನ ಪ್ರಧಾನ ಬಂಡವಾಳವಾಗಿಸಿ ಕೊಂಡಿರುವ ಸಂಘಟನೆ, ಜನಪ್ರಿಯತೆ ಪಡೆಯಲಿಕ್ಕಾಗಿ ಮುಗ್ಧ ಜನರ ಭಾವನೆಗಳನ್ನು ಕೆರಳಿಸುವುದು ಮತ್ತು ವಿಶೇಷವಾಗಿ ಅಮಾಯಕ ಯುವ ಜನರಲ್ಲಿರುವ ಅಭದ್ರತೆ, ಆತಂಕಗಳನ್ನು ಶೋಷಿಸುವುದೇ ಅದರ ಮುಖ್ಯ ಕಾಯಕವಾಗಿದೆ ಎಂದು ಆರೋಪಿಸುತ್ತಾರೆ.

ಒಂದು ಕೋಮುವಾದಕ್ಕೆ ಪರ್ಯಾಯವಾಗಿ ಇನ್ನೊಂದು ಕೋಮುವಾದವನ್ನು ಬೆಳೆಸಲು ಹೊರಟವರು ಎಂದು ದೂರುತ್ತಾರೆ. ಈ ಗುಂಪಿನ ನಾಯಕರು ಅಲ್ಲಲ್ಲಿ ಜೋರಾಗಿ ಚೀರಾಡಿ, ಭಾವುಕ ಮಾತುಗಳನ್ನಾಡಿ ತಮ್ಮ ಅಪ್ರಬುದ್ಧತೆಯನ್ನು ಮಾತ್ರ ಪ್ರದರ್ಶಿಸುತ್ತಾರೆೆ, ಧರ್ಮ ರಕ್ಷಣೆಯ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪದಾಧಿಕಾರಿಗಳನ್ನು ಮತ್ತು ಪೂರ್ಣಕಾಲಿಕ ಕಾರ್ಯಕರ್ತರನ್ನು ಸಾಕುತ್ತಾರೆ ಎಂದು ದೂಷಿಸುತ್ತಾರೆ. ಅದೆಷ್ಟೋ ಕಡೆ ಇವರು ಕಾಂಗ್ರೆಸ್ ಪಕ್ಷದ ವೋಟುಗಳನ್ನು ಕಡಿಮೆಗೊಳಿಸುವುದಕ್ಕಾಗಿ ಬಿಜೆಪಿಯವರಿಂದ ಸುಪಾರಿ ಪಡೆಯುತ್ತಾರೆ ಎಂಬ ಆರೋಪವನ್ನೂ ಇವರ ಮೇಲೆ ಮಾಡಲಾಗುತ್ತದೆ. ಆದರೆ ಈ ಸಂಘಟನೆಯ ಕಾರ್ಯಕರ್ತರು ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ, ಹಲವು ಸನ್ನಿವೇಶಗಳಲ್ಲಿ ಆಪದ್ಬಾಂಧವರಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಯಾರೂ ನಿರಾಕರಿಸುವಂತಿಲ್ಲ. ಮುಸ್ಲಿಮ್ ಸಮಾಜಕ್ಕೆ ಸಂಬಂಧಿಸಿ ಹೇಳುವುದಾದರೆ ಈ ಸಂಘಟನೆಯು ಆ ಸಮಾಜದ ಒಂದು ಪುಟ್ಟ ಭಾಗವಾಗಿತ್ತೇ ಹೊರತು ಎಂದೂ ಯಾವ ಮಟ್ಟದಲ್ಲೂ ಅದರ ಪ್ರತಿನಿಧಿಯಾಗಿರಲಿಲ್ಲ.

ತಾನೇ ಮುಸ್ಲಿಮ್ ಸಮುದಾಯದ ಅಧಿಕೃತ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾ ಈ ಸಂಘಟನೆಯು ಸ್ವತಃ ತನಗೆ ಬಹಳಷ್ಟು ಹಾನಿ ಮಾಡಿಕೊಂಡಿದೆ. ವಿಶೇಷವಾಗಿ, ತಾನೊಬ್ಬನೇ ಸಮುದಾಯದ ಪ್ರತಿನಿಧಿ ಎಂದು ತೋರಿಸಿಕೊಳ್ಳುವ ಆವೇಶದಲ್ಲಿ ಸಮುದಾಯದ ಹಲವು ಸಂಸ್ಥೆ, ಸಂಘಟನೆ ಮತ್ತು ನಾಯಕರುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದಲೇ ಈ ಸಂಘಟನೆಯ ಮೇಲೆ ಸರಕಾರವು ಹೇರಿದ ಅಕ್ರಮ ನಿಷೇಧವನ್ನು ಹೆಚ್ಚಿನೆಲ್ಲಾ ಸಂಘಟನೆಗಳು ಖಂಡಿಸಿದ್ದು, ಹಾಗೆ ಖಂಡಿಸುವ ವೇಳೆ, ಪ್ರಸ್ತುತ ಸಂಘಟನೆಯ ತತ್ವ ಸಿದ್ಧಾಂತ ಮತ್ತು ಕಾರ್ಯ ವಿಧಾನಗಳನ್ನೂ ತಾವು ಒಪ್ಪುವುದಿಲ್ಲ ಮತ್ತು ಅದರ ಜೊತೆ ತಮಗೆ ಗಂಭೀರ ಭಿನ್ನಾಭಿಪ್ರಾಯವಿದೆ ಎಂಬುದನ್ನು ಸ್ಪಷ್ಟಪಡಿಸಿವೆ. ಪಿಎಫ್‌ಐಯ ಒಳಸ್ವರೂಪ ಏನೇ ಇದ್ದರೂ ಸರಕಾರವು ಅದರ ವಿಷಯದಲ್ಲಿ ಅನುಸರಿಸಿರುವ ಆತುರದ, ವಿಪರೀತ ನೀತಿಗೆ ಯಾವ ಸಮರ್ಥನೆಯೂ ಇಲ್ಲ.

ಈ ನೀತಿಯು ಪ್ರಜಾಸತ್ತೆ ಮತ್ತು ಮೂಲಭೂತ ಮಾನವೀಯ ಹಕ್ಕುಗಳ ಬಗ್ಗೆ ಕಾಳಜಿ ಇರುವ ಎಲ್ಲರನ್ನೂ ಕಳವಳಕ್ಕೀಡು ಮಾಡಿದೆ. ಸದ್ಯ ನಮ್ಮನ್ನು ಆಳುತ್ತಿರುವ ಸಂಘ ನಿರ್ದೇಶಿತ ಸರಕಾರವು ತನ್ನ ವಿಶ್ವಾಸಾರ್ಹತೆಯನ್ನು ಎಂದೋ ಕಳೆದುಕೊಂಡಿದೆ. ಅದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ತನ್ನ ಹಲವಾರು ಜನದ್ರೋಹಿ ಧೋರಣೆಗಳು ಚರ್ಚೆಗೆ ಬರದಂತೆ ತಡೆಯಬಯಸುತ್ತದೆ, ಅದು ವಿವಿಧ ರಂಗಗಳಲ್ಲಿನ ತನ್ನ ಘೋರ ವೈಫಲ್ಯಗಳನ್ನು ಬಚ್ಚಿಡಲು ಬಯಸುತ್ತದೆ ಮತ್ತು ಅದು ಕ್ರಮೇಣ ದೇಶದಲ್ಲಿ ನಿರಂಕುಶ ಸರ್ವಾಧಿಕಾರಿ ವ್ಯವಸ್ಥೆಯ ಸ್ಥಾಪನೆಗಾಗಿ ಸಿದ್ಧತೆ ನಡೆಸುತ್ತಿದೆ ಎಂಬುದರ ಬಗ್ಗೆ ಸದ್ಯ ಯಾರಿಗೂ ಯಾವುದೇ ಸಂಶಯ ಉಳಿದಿಲ್ಲ. ಈ ಸರಕಾರ ತನ್ನ ಅಕ್ರಮ ಯೋಜನೆಗಳ ಸಾಕಾರಕ್ಕಾಗಿ ಯಾವ ಮಟ್ಟದ ಅನ್ಯಾಯಕ್ಕೆ ಇಳಿದರೂ ಅಚ್ಚರಿ ಇಲ್ಲ. ಇಂತಹ ಸರಕಾರ ಒಂದು ಸಂಘಟನೆಗೆ ಮಾಡಿದ ಅನ್ಯಾಯವನ್ನು ಸಹಿಸಿಕೊಳ್ಳುವುದೆಂದರೆ ದೇಶದ ಇತರೆಲ್ಲ ಪಕ್ಷಗಳು, ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ಅಕ್ರಮ, ಅನ್ಯಾಯಗಳನ್ನು ಸ್ವಾಗತಿಸುವುದೆಂದೇ ಅರ್ಥ. ಪಿಎಫ್‌ಐ ನಿಷೇಧದ ಮರುದಿನವೇ ರಾಜ್ಯದ ಬಿಜೆಪಿಯ ಮುಖಂಡರೊಬ್ಬರು ''ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಬೇಕು'' ಎಂಬಂತಹ ಹೇಳಿಕೆಯನ್ನು ನೀಡಿದ್ದಾರೆ. ಇದನ್ನು, ಬೇಜವಾಬ್ದಾರಿ, ಬೀಸು ಹೇಳಿಕೆಯೆಂದು ನಿರ್ಲಕ್ಷಿಸುವ ವಾತಾವರಣ ನಮ್ಮ ನಡುವೆ ಇಲ್ಲ. ನಾಡಿನ ಮೇಲೆ ದಬ್ಬಾಳಿಕೆಯನ್ನು ಹೇರಲು ಹೊರಟವರನ್ನು ಅವರ ಮೊದಲ ಹೆಜ್ಜೆಯಲ್ಲೇ ತಡೆಯದೆ ಮೌನ ವೀಕ್ಷಕರಾದವರು ಆ ದಬ್ಬಾಳಿಕೆ ಹೇರುವವರ ಎಲ್ಲ ಮುನ್ನಡೆಗಳಿಗೆ ಹೊಣೆಗಾರರಾಗುತ್ತಾರೆ.

Writer - ಮೃತ್ಯುಂಜಯ, ಬೆಂಗಳೂರು

contributor

Editor - ಮೃತ್ಯುಂಜಯ, ಬೆಂಗಳೂರು

contributor

Similar News