ಲೋಕಾಯುಕ್ತ ದಾಳಿ: ಮಂಗಳೂರು ತಹಶೀಲ್ದಾರ್, ಸಹಾಯಕ ಬಂಧನ

Update: 2022-09-30 16:24 GMT

ಮಂಗಳೂರು: ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ದೊರೆತ ಬೆನ್ನಲ್ಲೇ ದ.ಕ. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಇಂದು ನಡೆಸಿದ ಕಾರ್ಯಾಚಣೆಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕ ವಾನಂದ ನಾಟೇಕರ್ ಎಂಬವರನ್ನು ಬಂಧಿಸಿದ್ದಾರೆ.

ಮಿನಿ ವಿಧಾನ ಸೌಧದ ತಾಲೂಕು ಕಚೇರಿಗೆ ಇಂದು ಮಧ್ಯಾಹ್ನ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಸಹಾಯಕ ಶಿವಾನಂದ ನಾಟೇಕರ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು.

ಲೋಕಾಯುಕ್ತ ಅಧಿಕಾರಿಗಳ ವಿಚಾರಣೆಯ ವೇಳೆ ಲಂಚದ ಹಣವನ್ನು ತಹಶೀಲ್ದಾರ್ ಪರವಾಗಿ ತಾನು ಪಡೆದಿದ್ದು ಎಂದು ಶಿವಾನಂದ ತಿಳಿಸಿದ್ದ ಕಾರಣ ಅವರನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಲಕ್ಷ್ಮಿ ಗಣೇಶ್ ತಿಳಿಸಿದ್ದಾರೆ.

ಮೂಲತಃ ವಿಜಯಪುರ ನಿವಾಸಿ ಶಿವಾನಂದ ನಾಟೇಕರ್ ಮಿನಿ ವಿಧಾನಸೌಧದಲ್ಲಿ ಪ್ರಥಮ ದರ್ಜೆ ನೌಕರನಾಗಿದ್ದ. 

73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕಾವೂರಿನಲ್ಲಿರುವ ತಮ್ಮ ಜಾಗವನ್ನು ಮಾರಾಟ ಮಾಡಲು ಎನ್‌ಒಸಿ ಪಡೆಯಲು ಬಂದಿದ್ದ ಸಂದರ್ಭ ಆರೋಪಿ ಶಿವಾನಂದ್ 2ಸಾವಿರ ರೂ. ಲಂಚ ಪಡೆದು ಬಳಿಕ ಹೆಚ್ಚುವರಿ 10ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಆದರೂ ಹಿರಿಯ ನಾಗರಿಕರು ವಿನಂತಿ ಮಾಡಿದಾಗ 5ಸಾವಿರ ರೂ.ಗೆ ಒಪ್ಪಿಗೆ ಸೂಚಿಸಿದ್ದ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದರು. ಅದರಂತೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಶಿವಾನಂದ 4700ರೂ. ಲಂಚ ಸ್ವೀಕರಿಸುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಂತೆ ಡಿವೈಎಸ್ಪಿ ಕಲಾವತಿ ಮತ್ತು ಚೆಲುವರಾಜ, ಇನ್‌ಸ್ಪೆಕ್ಟರ್ ಅಮಾನುಲ್ಲಾ ಎ. ಜಯರಾಮ ಡಿ. ಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News