ಕಾಬೂಲ್: ಶಿಕ್ಷಣ ಸಂಸ್ಥೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ

Update: 2022-09-30 16:55 GMT
Photo : twitter 

ಕಾಬೂಲ್, ಸೆ.30: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿನ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 19 ಮಂದಿ ಮೃತಪಟ್ಟಿದ್ದು ಇತರ 27 ಮಂದಿ ಗಾಯಗೊಂಡಿರುವುದಾಗಿ ಕಾಬೂಲ್ ಪೊಲೀಸ್ ಮುಖ್ಯಸ್ಥ ಖಾಲಿದ್ ಜರ್ದಾನ್ ಹೇಳಿದ್ದಾರೆ. 

ಶಿಕ್ಷಣ ಕೇಂದ್ರದಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾಗ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಪರೀಕ್ಷಾ ಹಾಲ್ನಲ್ಲಿ ಸುಮಾರು 600 ವಿದ್ಯಾರ್ಥಿಗಳಿದ್ದರು. ಮೃತಪಟ್ಟವರಲ್ಲಿ ಹಾಗೂ ಗಾಯಗೊಂಡವರಲ್ಲಿ ಹೆಚ್ಚಿನವರು ಹುಡುಗಿಯರು ಎಂದು ಗಾಯಗೊಂಡ ವಿದ್ಯಾರ್ಥಿಯೊಬ್ಬನನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಅಲ್ಪಸಂಖ್ಯಾತ ಹಜರಾ ಸಮುದಾಯದ ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ, ಕಾಬೂಲ್ನ ನೆರೆಯಲ್ಲಿರುವ ಗ್ರಾಮ ದಷ್ತ್-ಇ ಬರ್ಚ್ನ ಶೈಕ್ಷಣಿಕ ಕೇಂದ್ರದಲ್ಲಿ ಈ ದಾಳಿ ನಡೆದಿದೆ. ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಶಿಯಾ ಸಮುದಾಯವನ್ನು ಗುರಿಯಾಗಿಸಿದ ದಾಳಿಗಳು ಹೆಚ್ಚುತ್ತಿವೆ.

ದಾಳಿಯ ಬಗ್ಗೆ ತನಿಖೆ ನಡೆಸಲು ತಂಡವೊಂದನ್ನು ಸ್ಫೋಟ ನಡೆದ ಸ್ಥಳಕ್ಕೆ ರವಾನಿಸಲಾಗಿದೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಅಫ್ಘಾನ್ನ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News