'ಒಗ್ಗಟ್ಟನ್ನು ಬಲಪಡಿಸೋಣ ಮಾನವೀಯತೆಯನ್ನು ಎತ್ತಿ ಹಿಡಿಯೋಣ' ಎಸ್ಐಒ ಅಭಿಯಾನ

Update: 2022-09-30 18:27 GMT

ಮಂಗಳೂರು: ವಿದ್ಯಾರ್ಥಿ ಸಂಘಟನೆ (ಎಸ್ಐಒ)ಯು ದೇಶಾದ್ಯಂತ ಶೈಕ್ಷಣಿಕ ಹೋರಾಟ, ಜಾಗೃತಿಯ ತನ್ನ 40 ವರ್ಷಗಳನ್ನು ಪೂರೈಸಿದ ಈ ಶುಭ ಸಂದರ್ಭದಲ್ಲಿ 'ಒಗ್ಗಟ್ಟನ್ನು ಬಲಪಡಿಸೋಣ, ಮಾನವೀಯತೆಯನ್ನು ಎತ್ತಿ ಹಿಡಿಯೋಣ' ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲಿಯೂ ಈ ಅಭಿಯಾನ ಆರಂಭಿಸಲಾಗಿದೆ ಎಂದು ಎಸ್ಐಒ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಫವಾಝ್ ಶಯೀನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿಂದು ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣವು ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಇದರಿಂದ ನಮ್ಮ ಸಂವಿಧಾನವು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಿಕೊಂಡಿರುವುದನ್ನು ಅಣಕಿಸುವಂತಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವು ಸಂವಿಧಾನದ ಆಶಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ, ಗುಣಮಟ್ಟ ಮತ್ತು ಎಲ್ಲರಿಗೂ ಲಭ್ಯವಾಗುವ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಈ ಎಲ್ಲ ಮೂಲಭೂತ ಅಗತ್ಯತೆಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ಖಾತರಿಪಡಿಸುವ ಹೊಣೆಗಾರಿಕೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳ ಅಥವಾ ಸರ್ಕಾರದ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ನಾವು ಒಪ್ಪಿಕೊಂಡ ಹಕ್ಕುಗಳು ಮತ್ತು ಸವಲತ್ತುಗಳನ್ನು ಪಡೆಯಲಿಕ್ಕಾಗಿ ಧ್ವನಿ ಎತ್ತುವುದು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟೂ ಗಟ್ಟಿಗೊಳಿಸುತ್ತದೆ ಎಂದರು.

ವಿದ್ಯಾರ್ಥಿ-ಯುವಜನರು ತಮ್ಮ ಶೈಕ್ಷಣಿಕ ದಿನಗಳಲ್ಲಿ ಉಂಟಾಗುವ ಕುಂದುಕೊರತೆಗಳ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಾದಷ್ಟು ಅವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ, ಆರ್ ಟಿಇ ಬಗ್ಗೆ ಸರಕಾರಕ್ಕೆ ಸಲಹೆಗಳನ್ನು ನೀಡಿದೆ ಎಂದು ಪವಾಝ್ ತಿಳಿಸಿದ್ದಾರೆ.

ಯಾವುದೇ ಸಂಘಟನೆ ತಪ್ಪು ಮಾಡಿದ್ದರೆ ಅದನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸುವ ಅವಕಾಶ ಪ್ರಜಾಪ್ರಭುತ್ವದಲ್ಲಿದೆ. ಇಡೀ ಸಂಘಟನೆಯನ್ನು ಮಟ್ಟ ಹಾಕುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ವಿದ್ಯಾರ್ಥಿಗಳ ಸಂಘಟನೆಗಳನ್ನು ಸರಕಾರ ನಿಷೇಧ ಮಾಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪವಾಝ್ ಉತ್ತರಿಸಿದರು.

ಎಸ್.ಐ.ಒ ವಿದ್ಯಾರ್ಥಿ ಸಂಘಟನೆಯು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿ-ಯುವಜನರಲ್ಲಿ ನೈತಿಕ ಮೌಲ್ಯಗಳನ್ನೊಳಗೊಂಡ ಉತ್ತಮ ಚಾರಿತ್ರ್ಯವನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮ ಆಸಕ್ತಿ ಮತ್ತು ಕೌಶಲ್ಯಗಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತೇಜಿಸುವ ಮತ್ತು ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ, ಹಾಗೂ ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳನ್ನು ನೀಡುವ ದೊಡ್ಡ ಉದ್ದೇಶವನ್ನು ಹೊಂದಿದೆ. ಎಸ್ಐಒ 40 ವರ್ಷಗಳ ತನ್ನ ಪ್ರಯಾಣದಲ್ಲಿ, 510 ಪ್ರತಿ ಬಾರಿಯೂ ಶೈಕ್ಷಣಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಇತ್ತೀಚೆಗೆ,  ಪ್ರಶ್ನೆ ಪತ್ರಿಕೆಯ ತಪ್ಪಾದ ಮುದ್ರಣಕ್ಕೆ ಸಂಬಂಧಿಸಿದಂತೆ  ಸಮಸ್ಯೆಯ ವಿರುದ್ಧ ಎಸ್‌ಐಒ ಹೋರಾಡಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೋಕ್ಸೋ ಮತ್ತು ಸೈಬರ್ ಅಪರಾಧದ ಕುರಿತು ಅಭಿಯಾನವನ್ನು ಪ್ರಾರಂಭಿಸಲಾಯಿತು ಮತ್ತು ಯಶಸ್ವಿಯಾಗಿ ನಡೆಸಲಾಯಿತು ಎಂದು ಎಸ್ಐಒ ರಾಜ್ಯಾಧ್ಯಕ್ಷ ಶೆಝಾದ್ ಶಕೀಬ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್ಐಒ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಝಾಕಿರ್, ಕಾರ್ಯದರ್ಶಿ ಇಬ್ರಾಹಿಂ, ರಮೀಝ್, ರಾಜ್ಯ ಕಾರ್ಯದರ್ಶಿ ನಝೀರ್, ರಾಜ್ಯ ಸಲಹಾ ಸಮಿತಿ ಸದಸ್ಯ ರಿಝ್ವಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News