ಉಕ್ರೇನ್‍ನಲ್ಲಿ ನಡೆಸಿದ ಜನಮತ ಗಣನೆ 'ಕಾನೂನುಬಾಹಿರ' ಎಂಬ ನಿರ್ಣಯಕ್ಕೆ ರಷ್ಯಾ ವಿಟೊ

Update: 2022-10-01 02:19 GMT
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ವಿಶ್ವಸಂಸ್ಥೆ: ಉಕ್ರೇನ್‍ನ ನಾಲ್ಕು ಪ್ರಾಂತ್ಯಗಳಲ್ಲಿ ರಷ್ಯಾ ನಡೆಸಿದ ಜನಮತ ಗಣನೆ ಕಾನೂನು ಬಾಹಿರ ಹಾಗೂ ಇದಕ್ಕೆ ಮಾನ್ಯತೆ ಇಲ್ಲ ಎಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಕ್ಕೆ ರಷ್ಯಾ ವಿಟೊ ಅಧಿಕಾರ ಚಲಾಯಿಸಿದೆ. ಈ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ.

ಈ ಪ್ರಾಂತ್ಯಗಳನ್ನು ರಷ್ಯಾಗೆ ಸೇರ್ಪಡೆಗೊಳಿಸುವ ರಷ್ಯಾ ನಿರ್ಧಾರವನ್ನು ಮಾನ್ಯ ಮಾಡಬಾರದು ಎಂದೂ ನಿರ್ಣಯದಲ್ಲಿ ಇತರ ಎಲ್ಲ ದೇಶಗಳನ್ನು ಒತ್ತಾಯಿಸಲಾಗಿತ್ತು.

ರಷ್ಯಾದ ವಿಟೊ ಅಧಿಕಾರ ಚಲಾವಣೆ ನಿರೀಕ್ಷಿತವಾಗಿತ್ತು. ಅದರೆ ಭದ್ರತಾ ಮಂಡಳಿ ನಿರ್ಣಯದ ಮೂಲಕ ಪಾಶ್ಚಿಮಾತ್ಯ ದೇಶಗಳು ಈ ಯುದ್ಧ ವಿಚಾರದಲ್ಲಿ ರಷ್ಯಾ ಏಕಾಂಗಿ ಎನ್ನುವುದನ್ನು ತೋರಿಸಲು ಉದ್ದೇಶಿಸಿತ್ತು. ಇದೀಗ ಈ ಖಂಡನಾ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆಗೆ ಒಯ್ಯಲಾಗುತ್ತದೆ. ಇಲ್ಲಿ ಪ್ರತಿ ದೇಶಗಳು ಮತ ಚಲಾಯಿಸುವ ಹಕ್ಕು ಇದ್ದು, ನಿರ್ಣಯವನ್ನು ತಡೆಯಲು ಯಾರಿಗೂ ಅವಕಾಶ ಇರುವುದಿಲ್ಲ.

ಭಾರತ ಭದ್ರತಾ ಮಂಡಳಿಯಲ್ಲಿ ಮತದಾನದಿಂದ ದೂರ ಉಳಿದಿದ್ದರೂ, "ಉಕ್ರೇನ್ ಬೆಳವಣಿಗೆಗಳ ಬಗ್ಗೆ ಭಾರತಕ್ಕೆ ಅತೀವ ಬೇಸರ ಇದೆ. ಮನುಷ್ಯ ಜೀವಗಳನ್ನು ಬಲಿಕೊಟ್ಟು ಯಾವ ಪರಿಹಾರ ಸೂತ್ರಕ್ಕೆ ಬರಲೂ ಸಿದ್ಧವಿಲ್ಲ ಎನ್ನುವುದು ಸದಾ ನಮ್ಮ ಪ್ರತಿಪಾದನೆ. ಇದು ಯುದ್ಧದ ಯುಗವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿನಿಧಿಯಾಗಿರುವ ರುಚಿಕಾ ಕಾಂಬೋಜ್ ಸ್ಪಷ್ಟಪಡಿಸಿದರು.

ಚೀನಾ ಕೂಡಾ ಮತದಾನದಿಂದ ದೂರ ಉಳಿದಿದೆ. ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಉಕ್ರೇನ್ ಪ್ರಾಂತ್ಯಗಳನ್ನು ಸೇರ್ಪಡೆಗೊಳಿಸುವ ನಿರ್ಧಾರದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕ ಹಾಗೂ ನ್ಯಾಟೊಗೆ ಯಾವುದೇ ಮಾಹಿತಿ ನೀಡಿಲ್ಲ. ರಷ್ಯಾ ಒಂದು ವೇಳೆ ದಾಳಿ ನಡೆಸಿದರೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಪ್ರತಿ ಇಂಚನ್ನೂ ರಕ್ಷಿಸಿಕೊಳ್ಳಲಿವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News