ಪ್ರಕರಣದ ವಿಚಾರಣೆ ವರ್ಗಾವಣೆ ಸತ್ಯೇಂದ್ರ ಜೈನ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

Update: 2022-10-01 16:02 GMT
Photo:PTI

ಹೊಸದಿಲ್ಲಿ, ಅ. 9: ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ನೂತನ ನ್ಯಾಯಾಧೀಶರಿಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷ (ಆಪ್)ನಾಯಕ ಸತ್ಯೇಂದ್ರ ಜೈನ್ ಅವರು ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

ಜಾರಿ ನಿರ್ದೇಶನಾಲಯದ ಮನವಿಯ ಹಿನ್ನೆಲೆಯಲ್ಲಿ ದಿಲ್ಲಿ ನ್ಯಾಯಾಲಯ ಈ ಪ್ರಕರಣವನ್ನು ಸೆಪ್ಟಂಬರ್ ೨೩ರಂದು ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್ ಅವರಿಂದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರಿಗೆ ವರ್ಗಾಯಿಸಿತ್ತು. ಇದನ್ನು ಜೈನ್ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.ಪ್ರಕರಣವನ್ನು ವರ್ಗಾಯಿಸುವ ಸಂದರ್ಭ ಪ್ರಾಥಮಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಎಲ್ಲ ಅಂಶಗಳನ್ನು ಪರಿಗಣಿಸಿದ್ದಾರೆ. ಆದುದರಿಂದ ಆದೇಶಕ್ಕೆ ಯಾವುದೇ ಹಸ್ತಕ್ಷೇಪ ಅಗತ್ಯ ಇಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಖನ್ನ ಶನಿವಾರ ಹೇಳಿದ್ದಾರೆ.

‘‘ಇಲ್ಲಿರುವುದು ನ್ಯಾಯಾಧೀಶರ ಪ್ರಾಮಾಣಿಕತೆಯ ಪ್ರಶ್ನೆ ಅಲ್ಲ. ಬದಲಾಗಿ ಕಕ್ಷಿದಾರನ ಮನಸ್ಸಿನಲ್ಲಿ ಉಂಟಾದ ಆತಂಕದ ಪ್ರಶ್ನೆ’’ ಎಂದು ಉಚ್ಚ ನ್ಯಾಯಾಲಯ ಹೇಳಿದೆ. ಸತ್ಯೇಂದ್ರ ಜೈನ್ ಹಾಗೂ ಅವರ ಇಬ್ಬರು ಸಹವರ್ತಿಗಳಾದ ವೈಭವ್ ಜೈನ್ ಹಾಗೂ ಅಂಕುಶ್ ಜೈನ್ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಜಾರಿ ನಿರ್ದೇಶನಾಲಯದ ತನಿಖೆ ಕುರಿತಂತೆ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್ ಛಿಮಾರಿ ಹಾಕಿದರು. ಆದುದರಿಂದ ಗೋಯಲ್ ಅವರು ಪಕ್ಷಪಾತಿ ಎಂದು ಆರೋಪಿಸಿ ಪ್ರಕರಣವನ್ನು ಇನ್ನೊಬ್ಬರು ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಜಾರಿ ನಿರ್ದೇಶನಾಲಯ ಸೆಪ್ಟಂಬರ್ ೧೫ರಂದು ಕೋರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News