×
Ad

ಲಂಚ ಪ್ರಕರಣ: ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

Update: 2022-10-01 16:55 IST

ಮಂಗಳೂರು, ಅ.1: ಲಂಚ ಸ್ವೀಕರಿಸಿದ ಆರೋಪದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಶುಕ್ರವಾರ ಬಂಧಿಸಲ್ಪಟ್ಟ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕನಿಗೆ ಮಂಗಳೂರು ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ದ.ಕ. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ನಡೆಸಿದ ಕಾರ್ಯಾಚಣೆಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕ ಶಿವಾನಂದ ನಾಟೇಕರ್‌ರನ್ನು ಬಂಧಿಸಿದ್ದರು.

ಮಂಗಳೂರಿನ ಮಿನಿ ವಿಧಾನ ಸೌಧದ ತಾಲೂಕು ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು.

ಮಿನಿ ವಿಧಾನಸೌಧದಲ್ಲಿ ಪ್ರಥಮ ದರ್ಜೆ ನೌಕರನಾಗಿದ್ದ ವಿಜಯಪುರ ನಿವಾಸಿ ಶಿವಾನಂದ ನಾಟೇಕರ್ ಎಂಬಾತ 73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕಾವೂರಿನಲ್ಲಿರುವ ತಮ್ಮ ಜಾಗವನ್ನು ಮಾರಾಟ ಮಾಡಲು ಎನ್‌ಒಸಿ ಪಡೆಯಲು ಬಂದಿದ್ದ ಸಂದರ್ಭ 2 ಸಾವಿರ ರೂ. ಲಂಚ ಪಡೆದು ಬಳಿಕ ಹೆಚ್ಚುವರಿ 10 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ. ಬಳಿಕ 5 ಸಾವಿರ ರೂ. ಕೊಡುವಂತೆ ತಿಳಿಸಿದ್ದ.

ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಶಿವಾನಂದ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದು, ಆತನ ನೀಡಿದ ಮಾಹಿತಿಯಂತೆ ತಹಶೀಲ್ದಾರನನ್ನೂ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News