ಜಲ ಜೀವನ್ ಮಿಷನ್; ಶೀರ್ಘವೇ ಬಂಟ್ವಾಳ ಕ್ಷೇತ್ರದಲ್ಲಿ 100ರಷ್ಟು ಸಾಧನೆ: ಶಾಸಕ ರಾಜೇಶ್ ನಾಯ್ಕ್

Update: 2022-10-01 16:40 GMT

ಬಂಟ್ವಾಳ, ಅ.1: ಕ್ಷೇತ್ರದಲ್ಲಿ ಇನ್ನು ಬಾಕಿ ಉಳಿದಿರುವ ಐದು ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡರೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತೀಯೊಂದು ಮನೆಗೂ ಒಂದೆರಡು ವರ್ಷದಲ್ಲಿ ಶುದ್ಧ ಕುಡಿಯುವ ನಳ್ಳಿ ನೀರು ಲಭ್ಯವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು. 

ಬಂಟ್ವಾಳ ಕ್ಷೇತ್ರದ ಕಳ್ಳಿಗೆ, ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಸಂಪರ್ಕ ಕಲ್ಪಿಸುವ 26.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಶುದ್ದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಬೆಂಜನಪದವು ಮೇಲಿನ ಸೈಟ್ ಎಂಬಲ್ಲಿ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. 

ಬಂಟ್ವಾಳ ಕ್ಷೇತ್ರದ 39 ಗ್ರಾಮ ಪಂಚಾಯತ್ ಗಳ ಪೈಕಿ 34 ಗ್ರಾಮ ಪಂಚಾಯತ್ ಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಈಗಾಗಲೇ ಅನುದಾನ ಬಿಡುಗಡೆಗೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಜೀಪ ಮುನ್ನೂರು, ಸಜೀಪ ಮೂಡ, ವೀರಕಂಭ, ಮಂಚಿ, ಬೋಳಂತ್ತೂರು ಗ್ರಾಮಗಳು ಬಾಕಿ ಉಳಿದಿದ್ದು ಯೋಜನೆಯಡಿ ಇಲ್ಲಿಗೆ ಬೇಕಾದ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿದ್ದು, ಕೂಡಲೇ ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು. 

2024ರ ವೇಳೆಗೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಸೂರು, ಪ್ರತಿ ಮನೆಗೂ ನಳ್ಳಿ ನೀರು ನೀಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಶೀರ್ಘದಲ್ಲೇ ಈ ಯೋಜನೆ 100ರಷ್ಟು ಗುರಿ ಸಾಧಿಸಲಿದೆ. ಶಾಸಕನಾಗಿ ಕ್ಷೇತ್ರದ ಜನತೆಗೆ ಅತ್ಯಗತ್ಯವಾಗಿ ಬೇಕಾದ ರಸ್ತೆ, ಕುಡಿಯುವ ನೀರನ್ನು ಒದಗಿಸಿದ ತೃಪ್ತಿ ನನಗೆ ಇದೆ ಎಂದರು ಅವರು ಹೇಳಿದರು. 

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ನಾಲ್ಕೂವರೆ ವರ್ಷಗಳಲ್ಲಿ 1,800 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ 1,400ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಗೆ ಇದೆ. ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯನ್ನು ಅತೀ ವೇಗವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದು ಒಂದೆರಡು ವರ್ಷದಲ್ಲಿ ಕ್ಷೇತ್ರದ ಪ್ರತೀ ಮನೆಗೆ ಕುಡಿಯುವ ನಳ್ಳಿ ನೀರು ಸಿಗುವಂತೆ ಮಾಡಿದ್ದಾರೆ. ಇದು ಶಾಸಕರಿಗೆ ಜನತೆಯ ಮೇಲಿರುವ ಕಾಳಜಿ ಮತ್ತು ಅವರಲ್ಲಿರುವ ಬದ್ಧತೆಗೆ ಸಾಕ್ಷ್ಯಿಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಳ್ಳಿಗೆ ಗ್ರಾಪಂ ಅಧ್ಯಕ್ಷೆ ಯಶೋಧ ದಯಾನಂದ, ಅಮ್ಮುಂಜೆ ಗ್ರಾಪಂ ಅಧ್ಯಕ್ಷ ವಾಮನ ಆಚಾರ್ಯ, ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷ ಪ್ರಕಾಶ್ ಆಳ್ವ, ಮೇರೆಮಜಲು ಗ್ರಾಪಂ ಅಧ್ಯಕ್ಷೆ ಜಯಶ್ರೀ ಕರ್ಕೇರ, ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರಬಾಬು, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಜಿಕೆ ನಾಯಕ್, ಗುತ್ತಿಗೆದಾರ ಸುಧಾಕರ ಶೆಟ್ಟಿ, ಗಿರಿಪ್ರಕಾಶ್ ತಂತ್ರಿ ಹಾಗೂ ಗ್ರಾಪಂ ಸದಸ್ಯರು, ಪಿಡಿಒಗಳು ಮತ್ತಿತರರು ಉಪಸ್ಥಿತರಿದ್ದರು.

ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News