ಉತ್ತರಪ್ರದೇಶ: ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿ; 22 ಕ್ಕೂ ಅಧಿಕ ಭಕ್ತರು ಸಾವು

Update: 2022-10-02 16:10 GMT
Photo: Twitter

ಕಾನ್ಪುರ,ಅ.2: ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಶನಿವಾರ ಸಂಜೆ ಕಾನ್ಪುರ ಜಿಲ್ಲೆಯ ಭಡೆವುನಾ ಗ್ರಾಮದ ಬಳಿ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ ಕನಿಷ್ಠ 26 ಜನರು ಮೃತಪಟ್ಟಿದ್ದು,ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದು,ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ವಿಶಾಕ ಜಿ.ಅಯ್ಯರ್ ತಿಳಿಸಿದರು.ಸುಮಾರು 50 ಜನರನ್ನು ಹೊತ್ತಿದ್ದ ಟ್ರಾಕ್ಟರ್ ಫತೇಪುರದ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಮಗುವಿನ ಮುಡಿಯೊಪ್ಪಿಸುವ ವಿಧಿಯ ಬಳಿಕ ಘಟಂಪುರಕ್ಕೆ ಸಾಗುತ್ತಿತ್ತು ಎಂದರು.ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನೀರಿನಿಂದ ಜನರನ್ನು ಹೊರಕ್ಕೆ ತೆಗೆದರಾದರೂ ಕೆಲವರು ಅದಾಗಲೇ ಮೃತಪಟ್ಟಿದ್ದು,ಉಳಿದವರು ಆಸತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ.

ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶೋಕವನ್ನು ವ್ಯಕ್ತಪಡಿಸಿದ್ದಾರೆ.ಮೋದಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.ರಾಜ್ಯ ಸರಕಾರವೂ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.ರಾಜ್ಯದ ಸಚಿವರಾದ ರಾಕೇಶ ಸಚನ್ ಮತ್ತು ಅಜಿತ್ ಪಾಲ್ ಅವರು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.ಟ್ರಾಕ್ಟರ್‌ಗಳನ್ನು ಪ್ರಯಾಣಿಕರನ್ನು ಸಾಗಿಸಲು ಬಳಸದೆ ಕೃಷಿ ಉದ್ದೇಶಕ್ಕಾಗಿ ಮತ್ತು ಸರಕುಗಳ ಸಾಗಾಣಿಕೆಗೆ ಮಾತ್ರ ಬಳಸುವಂತೆ ಆದಿತ್ಯನಾಥ ಅವರು ಜನರನ್ನು ಕೋರಿಕೊಂಡಿದ್ದಾರೆ.ದುರಂತಕ್ಕೆ ಕಾರಣಗಳನ್ನು ತಿಳಿದುಕೊಳ್ಳಲು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅಯ್ಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News