ಪುತ್ತೂರಿನ ಬಾಲವನದಲ್ಲಿ ಬೃಹತ್ ವಾಚನಾಲಯ ಆರಂಭ: ಶಾಸಕ ಸಂಜೀವ ಮಠಂದೂರು

Update: 2022-10-01 17:16 GMT

ಪುತ್ತೂರು: ಕನ್ನಡದಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಇಂದು ಯಾವ ಹಂತಕ್ಕೆ ತಲುಪಿದೆ ಎಂಬ ಅವಲೋಕನ ನಡೆಸಬೇಕಾಗಿದೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಪುತ್ತೂರಿನ ಡಾ.ಶಿವರಾಮ ಕಾರಂತರ ಬಾಲವನದಲ್ಲಿ ಬೃಹತ್ ವಾಚನಾಲಯ ಆರಂಭಿಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.   

ಅವರು ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ತಾಲೂಕಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ 5 ಕೋಟಿಗೂ ಹೆಚ್ಚು ಅನುದಾನ ನೀಡುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲಾಗಿದೆ. 75 ಕೊಠಡಿಗಳನ್ನೂ ಆರ್.ಸಿ.ಸಿ. ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಕೊಂಬೆಟ್ಟಿನ ಪದವಿಪೂರ್ವ ಕಾಲೇಜನ್ನು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ ನವೀಕರಣ ಕೆಲಸ ಮಾಡಲಾಗುವುದು. 100 ವರ್ಷಕ್ಕೂ ಅಧಿಕ ವರ್ಷದ ಶಾಲೆ, ಕಾಲೇಜುಗಳನ್ನೂ ಪಾರಂಪರಿಕ ಕಟ್ಟಡದ ಮಾನ್ಯತೆ ನೀಡಿ ನವೀಕರಣ ಮಾಡಲಾಗುವುದು. ಪ್ರಶಸ್ತಿ ನೀಡುವ ಸಂದರ್ಭ ಕನ್ನಡದ ಅಭಿವೃದ್ಧಿಗೆ ಶ್ರಮಿಸುವವರಿಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು. 

ಸಮಾರೋಪ ಭಾಷಣ ಮಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ, ಕನ್ನಡ ಭಾಷೆಯ ಕುರಿತು ಕನ್ನಡ ಶಿಕ್ಷಕರು ಹಾಗೂ ಉಪನ್ಯಾಸಕರು ಮಾತನಾಡುವುದಲ್ಲ. ಇತರರೂ ಕನ್ನಡದ ಪರವಾಗಿ ಧ್ವನಿಯೆತ್ತಬೇಕಾದ ಅಗತ್ಯತೆಯಿದೆ. ಇಂದಿನ ದಿನಗಳಲ್ಲಿ ಉದ್ಯಮಿಗಳು, ವೈದ್ಯ ವೃತ್ತಿಯಲ್ಲಿರುವವರೂ ಪುಸ್ತಕ ಬರೆಯುವ ಮೂಲಕ ಸಾಹಿತ್ಯದ ಕುರಿತು ಒಲವು ಮೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. 

ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್.ಜಿ. ಮಾತನಾಡಿ, ಪುತ್ತೂರಿನಲ್ಲಿ ನಡೆದಿರುವ ಈ ಬಾರಿಯ ಸಾಹಿಯತ್ಯ ಸಮ್ಮೇಳನವನ್ನು ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿತ್ತು. ಅದ್ದರಿಂದಲೇ 'ಸಾಹಿತ್ಯದ ನಡಿಗೆ ಯುವ ಜನತೆಗೆಯ ಕಡೆಗೆ' ಎಂಬ ಘೋಷ ವಾಕ್ಯದೊಂದಿಗೆ ಯುವ ಜನತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂದರಲ್ಲದೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾ ವಿದ್ಯಾಲಯದ ಗ್ರಂಥಾಲಯಕ್ಕೆ  ಕಾರ್ಯಕ್ರಮದ ನೆನಪಿಗಾಗಿ ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯಾದ್ಯಂತ ಯುವ ಸಮೂಹ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸದ್ಯ ಪಡೆದವರ ಸಂಖ್ಯ ಕಡಿಮೆಯಾಗಿದ್ದು, ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು. 

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಸಂಚಾಲಕ ರಾಜಶ್ರೀ ಎಸ್. ನಟ್ಟೋಜ ದಂಪತಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್. ಜಿ. ದಂಪತಿಯನ್ನು ಗೌರವಿಸಿದರು. ವೇದಿಕೆಯಲ್ಲಿ ಪುತ್ತೂರು ನಗರಸಭೆ ಆಯುಕ್ತ ಮಧು ಎಸ್. ಮನೋಹರ್, ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಬಿ, ಕ.ಸಾ.ಪ ಉಳ್ಳಾಲ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ತಾಲೂಕು ಕ.ಸಾ.ಪ ಗೌರ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ.ಹರ್ಷಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು. 

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಸ್ವಾಗತಿಸಿದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ವಂದಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News