'ಭಾರತ್ ಜೋಡೊ' ಯಾಕೆ ಬೇಕು?

Update: 2022-10-02 03:13 GMT

ರಾಹುಲ್ ಗಾಂಧಿಯವರು ಆರಂಭಿಸಿರುವ ಭಾರತ ಜೋಡಿಸುವ ಅಥವಾ ಬಹುತ್ವ ಭಾರತ ಉಳಿಸುವ ಎಂದರೇನು? ಈ ಪಾದಯಾತ್ರೆ ಯಾಕಾಗಿ ನಡೆಯುತ್ತಿದೆ? ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಯಾತ್ರೆಯಿಂದ ಭೀತರಾದ ಬಿಜೆಪಿಯವರು ನಿರಂತರವಾಗಿ ಸುಳ್ಳುಗಳನ್ನು ಉತ್ಪಾದಿಸುತ್ತಿದ್ದಾರೆ. ವ್ಯವಸ್ಥಿತವಾಗಿ ಸುಳ್ಳುಗಳನ್ನು ಉತ್ಪಾದಿಸಿ ಹಂಚುವುದಕ್ಕಾಗಿ ಬೃಹತ್ತಾದ ಸುಳ್ಳಿನ ಫ್ಯಾಕ್ಟರಿಯನ್ನು ನಡೆಸುತ್ತಿರುವ ಬಿಜೆಪಿಯು ಅದಕ್ಕಾಗಿ ನೂರಾರು ಕೋಟಿ ರೂ.ಯನ್ನು ಖರ್ಚುಮಾಡುತ್ತಿದೆ. ಪಾದಯಾತ್ರೆಯ ವಿರುದ್ಧ ಅಸಹ್ಯ ಜಾಹೀರಾತನ್ನೂ ನೀಡುತ್ತಿದೆ. ಹಾಗಾಗಿ ಸುಳ್ಳಿನ ವಿರುದ್ಧ ಮತ್ತು ಸತ್ಯದ ಪ್ರತಿಪಾದನೆಗಾಗಿ ಈ ಪಾದಯಾತ್ರೆ ನಡೆಯುತ್ತಿದೆ. ಎಲ್ಲ ಒಡೆಯುವ, ಇವನಾರವನೆನ್ನುವ ಶಕ್ತಿಗಳ ವಿರುದ್ಧ ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆಯ ಮುಖ್ಯ ಉದ್ದೇಶವೇ ನಮ್ಮೆಂದಿಗೆ ಬದುಕುತ್ತಿರುವ ಎಲ್ಲ ರೀತಿಯ, ಎಲ್ಲ ಸ್ತರದ ಜನರೊಂದಿಗೆ ಹೃದಯ ಸಂವಾದವನ್ನು ಸಾಧ್ಯಗೊಳಿಸಿ ವಿವೇಕದ ಬೆಳಕನ್ನು ಕಂಡುಕೊಳ್ಳುವುದು ಹಾಗೂ ಕಂಡುಕೊಳ್ಳುವಂತೆ ಪ್ರೇರೇಪಿಸುವುದು ಆಗಿದೆ.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಯಾವ ಉದ್ದೇಶಕ್ಕಾಗಿ ತಮ್ಮ ಜೀವಿತಾವಧಿ ಪೂರಾ ಹೋರಾಟ ವಾಡಿ, ಅಪಾರ ಸಂಖ್ಯೆಯ ದೇಶಪ್ರೇಮಿಗಳು ಹುತಾತ್ಮರಾಗಿ ಸ್ವಾತಂತ್ರ್ಯ ಗಳಿಸಿಕೊಟ್ಟರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನಗಳ ವಿರುದ್ಧವಾಗಿ ಹಲವಾರು ಬಾರಿ ಗುಪ್ತವಾಗಿ, ಕೆಲವು ಬಾರಿ ಬಹಿರಂಗವಾಗಿ ವಿರೋಧಪಡಿಸಿ ಕೊಂಡು ಬಂದಿದ್ದ ಆರೆಸ್ಸೆಸ್ ಮತ್ತು ಅದರ ಸಹ ಸಂಘಟನೆಗಳಿಗೆ ಜನಬೆಂಬಲ ದೊರೆತಿರಲಿಲ್ಲ. ಆದರೆ ಸಂಘಪರಿವಾರದವರು ಜನಸಂಘ, ಆನಂತರ ಬಿಜೆಪಿಯನ್ನು ಹುಟ್ಟು ಹಾಕಿದರು. ಜನರನ್ನು ಜಾತಿ ಧರ್ಮಗಳ ಮೇಲೆ ಒಡೆದು, ದ್ವೇಷ ಹಿಂಸೆಯನ್ನು ಬೆಳೆಸಿ ಅಧಿಕಾರ ಹಿಡಿಯಲು ಇವು ನಿರಂತರ ಪ್ರಯತ್ನಪಟ್ಟಿವೆ. ಈಗಲೂ ಅದನ್ನೇ ಮಾಡುತ್ತಿವೆ.

ದಲಿತ ಸಮುದಾಯಗಳನ್ನೊಳಗೊಂಡ ಶೂದ್ರ ಸಮುದಾಯ ಎಲ್ಲ ಮಹಿಳೆಯರು, ಲಿಂಗಾಯತ, ಒಕ್ಕಲಿಗ, ಕುರುಬರಾದಿಯಾಗಿ ಎಲ್ಲ ಶೂದ್ರರ ಕೆಲವರು ಅಧಿಕಾರದ ಆಸೆಯಿಂದ ತಮ್ಮನ್ನು ಶತಶತಮಾನಗಳಿಂದ ದಮನಿಸಿದವರ ಜೊತೆಗೆ ಸೇರಿಕೊಂಡಿರುವುದು ದೊಡ್ಡ ದುರಂತ. ಕಳೆದ 2,500 ವರ್ಷಗಳಿಂದ ನಮ್ಮ ಹಿರಿಯರು ಯಾರ ವಿರುದ್ಧ ಹೋರಾಟ ಮಾಡಿದ್ದರೋ, ಯಾರನ್ನು ತೋಳಗಳು, ಅಂಥ ತೋಳಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂದು ಹೇಳಿದ್ದರೋ ಅವರ ಜೊತೆಯೇ ಶೂದ್ರಾದಿ ಸಮುದಾಯಗಳ ಕೆಲವು ಜನರು ಹೋಗಿ ಸೇರಿಕೊಂಡಿದ್ದಾರೆ. ಈ ಕುರಿತು ಅರಿವಿಲ್ಲದಿದ್ದರೆ ಬುದ್ಧ, ಬಸವಣ್ಣನವರು, ಪಂಪ, ಕನಕದಾಸರು, ಸಂತಕಬೀರ, ನಾರಾಯಣ ಗುರುಗಳು, ವಿವೇಕಾನಂದರು, ಭಗತ್ ಸಿಂಗ್, ಗಾಂಧೀಜಿ, ಬಾಬಾ ಸಾಹೇಬರು, ಕುವೆಂಪು ಮುಂತಾದವರ ಮಾತುಗಳನ್ನು, ದರ್ಶನಗರ್ಭಿತ ವಿವೇಕದ ಮಾತುಗಳನ್ನು ಕೇಳಬೇಕು.

ಈ ಶೂದ್ರ ಸಮುದಾಯಗಳ ಅಥವಾ ದುಡಿಯುವ ಸಮುದಾಯಗಳ ಜನರ ಬೆಂಬಲಗಳಿಸಿಕೊಂಡಿದ್ದೇವೆಂದು ಕೊಬ್ಬಿ ಕೂತಿರುವ ಮನುವಾದಿಗಳೇ ಈಗ ನಮ್ಮ ಸಂವಿಧಾನದ ಮೂಲ ಆಶಯವನ್ನು ಧ್ವಂಸ ಮಾಡಿ, ಸಂವಿಧಾನದ ಬದಲಿಗೆ ಮನುಸ್ಮತಿಯನ್ನು ದೇಶದ ಕಾನೂನಾಗಿಸಲು ಹೊರಟಿದ್ದಾರೆ. ಮನುಸ್ಮತಿಯು ಬೆರಳೆಣಿಕೆಯಷ್ಟು ಜನರ ಬಳಿ ವಿದ್ಯೆ, ಅಧಿಕಾರ ಮತ್ತು ಹಣ ಇರಬೇಕು ಶೂದ್ರಾದಿ ದುಡಿಯುವ ಜನರು ಮನುವಾದದಿಂದ ಅನುಕೂಲ ಪಡೆವ ಬೆರಳೆಣಿಕೆಯಷ್ಟು ಜನರ ಬಳಿ ಜೀತ ಹಾಗೂ ಗುಲಾಮಗಿರಿ ಮಾಡಿಕೊಂಡಿರಬೇಕು ಎಂದು ಹೇಳುತ್ತದೆ. ಇಂಥ ಸ್ಥಿತಿಯನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದಲೇ ಸಂಘಪರಿವಾರದವರು ಬಿಜೆಪಿಯ ಮೂಲಕ ಈಗಾಗಲೇ ನಮ್ಮ ಪ್ರಾಣ ಸಮಾನವಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಈ ವಿಚಾರಗಳನ್ನು ಆಧರಿಸಿ ಜನರೊಂದಿಗೆ ಹೃದಯ ಸಂವಾದ ನಡೆಸಲು ಭಾರತ ಜೋಡಿಸುವ ಯಾತ್ರೆ ನಡೆಯುತ್ತಿದೆ.

ಮಾನವತಾವಾದಿ ಸಂತರಾದ ನಾರಾಯಣ ಗುರುಗಳು, ''ಹಸುಗಳಿಗೆ 'ಗೋತ್ವ' ಎಂಬುದು ಜಾತಿಯಾಗಿರುವಂತೆ ಮನುಷ್ಯನಿಗೆ 'ಮಾನವತ್ವ'ವೇ ಜಾತಿ. ಬ್ರಾಹ್ಮಣಾದಿ ಜಾತಿಗಳು ಹೀಗಲ್ಲ. ... ಒಂದೇ ಜಾತಿ, ಒಂದೇ ಮತ, ಒಂದೇ ದೈವ (ಮನುಷ್ಯನಿಗೆ ಎಲ್ಲ ಧರ್ಮಗಳ ಸಾರವೂ ಏಕವೆ)..ಇದರಲ್ಲಿ ಯಾವ ಭೇದವೂ ಇಲ್ಲ. ಬ್ರಾಹ್ಮಣನೂ ದಲಿತನೂ ನರಜಾತಿಯಲ್ಲೇ ಹುಟ್ಟುವುದು. ಒಂದೇ ಜಾತಿಯಲ್ಲಲ್ಲವೇ ಮಕ್ಕಳು ಹುಟ್ಟುವುದು? ಆದ್ದರಿಂದ ಇರುವುದು ಒಂದೇ ಜಾತಿ. ಹಿಂದೆ ಪರಾಶರ ಮುನಿಗಳು ಮಾದಿಗ ಸ್ತ್ರೀಯಲ್ಲಿ ಹುಟ್ಟಿದರು. ವೇದಗಳನ್ನು ಬರೆದ ವ್ಯಾಸರು ಬೆಸ್ತನಾರಿಯಲ್ಲಿ ಹುಟ್ಟಿದವರು.'' (ನಾರಾಯಣಗುರು- ಸಂಪೂರ್ಣ ಕೃತಿಗಳು, ಕನ್ನಡಕ್ಕೆ ವಿನಯ ಚೈತನ್ಯ, ಪುಟ, 23) ಹಾಗಾಗಿ ಮನುಷ್ಯರನ್ನು ಇವನಾರವನೆಂದು ಹೊರಗಿಡದೆ ದ್ವೇಷ ಮಾಡದೆ ಬದುಕನ್ನು ಕಟ್ಟಬೇಕು ಎನ್ನುತ್ತಾರೆ.

ನಮ್ಮ ರಾಷ್ಟ್ರಕವಿ ಕುವೆಂಪು ಅವರು ಬೀದಿಯಲ್ಲಿ ಜಲಗಾರರಲ್ಲಿ ಈಶ್ವರನನ್ನು ಕಾಣುತ್ತಾರೆ. ಸರ್ವೋದಯವಾಗಲಿ ಸರ್ವರಲಿ ಎನ್ನುತ್ತಾರೆ. ಈ ಪುಣ್ಯಭೂಮಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಪೂರ್ಣದೃಷ್ಟಿ ತತ್ವವನ್ನು ಮಂಡಿಸುತ್ತಾರೆ. ಗಾಂಧೀಜಿಯವರು, ''ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ, ಈಶ್ವರ ಅಲ್ಲಾ ತೇರೋ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್'' ಎಂದು ಮಂತ್ರ ಸೂತ್ರದ ತತ್ವವನ್ನೇ ರೂಪಿಸಿ ನಿತ್ಯ ಶ್ರದ್ಧೆಯ ಭಾಗದಂತೆ ಸಭೆಗಳಲ್ಲಿ ಹಾಡುತ್ತಿದ್ದರು. ಎಲ್ಲ ದೇವರ ಮೂಲ ತತ್ವ ಒಂದೆ ಎಂದು ಭಾವಿಸಿದ್ದರು. ಈ ಎಲ್ಲ ಆಶಯಗಳಿಗೆ ಧ್ವನಿಕೊಟ್ಟಂತೆ ಬಾಬಾ ಸಾಹೇಬರು ''ಕಾನೂನಿನ ಮುಂದೆ ಎಲ್ಲರೂ ಸಮಾನರು'' ಎಂಬ ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ತಮ್ಮ ಇಡೀ ಜೀವಿತಾವಧಿಯನ್ನು ಮನುವಾದದ ವಿರುದ್ಧ ಹೋರಾಟಕ್ಕಾಗಿ ಮೀಸಲಿರಿಸಿದ್ದರು. ಮನುಷ್ಯ ಪ್ರೇಮ, ಸಹಾನುಭೂತಿ, ಕರುಣೆ, ದಯೆ, ಸಮಾನತೆ, ಇವ ನಮ್ಮವನೆನ್ನುವ ಗುಣಗಳ ಕಾರಣಕ್ಕಾಗಿ ಬುದ್ಧನ ಮಾರ್ಗವನ್ನು ಅನುಸರಿಸಿದರು. ಈ ಎಲ್ಲ ಮಹನೀಯರ ಹೋರಾಟ, ಸಂಘರ್ಷ, ತ್ಯಾಗದ ಫಲವಾಗಿ ದೇಶ ಸುಭದ್ರವಾಗಿತ್ತು. ಎಲ್ಲರನ್ನೂ ಒಳಗೊಂಡು ಬಾಳುವ, ವರ್ಣ ವ್ಯವಸ್ಥೆಯೆಂಬ ಅನಿಷ್ಠ ಪದ್ಧತಿಯನ್ನು ತೊಲಗಿಸಿ ಸಂವಿಧಾನದ ಆಶಯಗಳ ಮೇಲೆ ದೇಶ ಕಟ್ಟಿ ಮುನ್ನಡೆಸುವ ಆಶಯಗಳಿಗೆ, ಪ್ರಯತ್ನಕ್ಕೆ ಈಗ ಧಕ್ಕೆ ಬಂದಿದೆ. ಹಾಗಾಗಿ ನಮ್ಮ ಮುಂದಿನ ತಲೆಮಾರು ನೆಮ್ಮದಿಯ ಜೀವನ ನಡೆಸಬೇಕಾದರೆ ಇಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಮಮತೆಗಳು ತುಂಬಿ ಸರ್ವಜನಾಂಗದ ಶಾಂತಿಯ ತೋಟವಾಗಬೇಕಾದರೆ ಸಂವಿಧಾನ ವಿರೋಧಿಯಾದ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಶಕ್ತಿಗಳು ನಿರ್ಮೂಲನೆಗೊಳ್ಳಬೇಕು. ಈ ವಿಚಾರವನ್ನು ಜನರು ಪರಸ್ಪರ ಚರ್ಚಿಸಿ ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಮುನ್ನುಗ್ಗಬೇಕು. ಅದಕ್ಕಾಗಿ ಈ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರು ಹಾಗೂ ನಾಗರಿಕ ಸಮಾಜದ ಹಿರಿಯರು ಕೈಗೆತ್ತಿಕೊಂಡಿದ್ದಾರೆ.

ದೇಶ ದುಃಖಿತವಾಗಿದ್ದಾಗ, ರಕ್ತಪಾತ, ಹಿಂಸೆ, ಅನಾಚಾರ, ಅತ್ಯಾಚಾರಗಳಲ್ಲಿ ಬೆಂದು ಮನುಷ್ಯರು ಗುಮಾನಿಗಳಲ್ಲಿ, ದ್ವೇಷದಲ್ಲಿ ಮುಳುಗಿದ್ದಾಗ ಗಾಂಧೀಜಿಯವರು ನೌಖಾಲಿ ಸೇರಿದಂತೆ ಅನೇಕ ಕಡೆ ಪಾದಯಾತ್ರೆ ಮಾಡಿದ್ದರು. ಇದರ ಉದ್ದೇಶ ಕೂಡ ಒಂದೇ ಮನುಷ್ಯ ಮನುಷ್ಯರ ನಡುವಿನ ದ್ವೇಷ ಮತ್ತು ಗುಮಾನಿಗಳನ್ನು ಅಳಿಸಿ ಹಾಕಿ ಪ್ರೀತಿ ಮತ್ತು ಮನುಷ್ಯತ್ವಗಳ ಹಣತೆ ಬೆಳಗಿಸುವುದಾಗಿತ್ತು. ಈಗ ದೇಶದ ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಮಹಾಯಾತ್ರೆಯ ಉದ್ದೇಶ ಕೂಡ ಇದೇ ಆಗಿದೆ.

ರಾಜಕೀಯ ಸ್ವಾರ್ಥಕ್ಕಾಗಿ, ಸ್ಥಾಪಿತ ಹಿತಾಸಕ್ತಿಗಳ ರಕ್ಷಣೆಗಾಗಿ ಸಾವರ್ಕರ್, ಮುಹಮ್ಮದ್ ಅಲಿ ಜಿನ್ನಾ ಮುಂತಾದವರು ಭಾರತ ಮತ್ತು ಪಾಕಿಸ್ತಾನಗಳೆಂಬ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದರು. ಈ ಸಿದ್ಧಾಂತವನ್ನು ಮೊತ್ತ ಮೊದಲ ಬಾರಿಗೆ ಪ್ರತಿಪಾದಿಸಿದ ಕುಖ್ಯಾತಿ ಸಾವರ್ಕರ್ ಅವರದ್ದಾಗಿದೆ. ಸಾವರ್ಕರ್ ಅವರು 1937ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ಸಭೆಯೊಂದರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದರು. ಎರಡು ಧರ್ಮಗಳನ್ನು ಆಚರಿಸುವ ಜನರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬಂತೆ ವ್ಯಾಖ್ಯಾನಿಸಿದರು. ಆದರೆ ಅದೇ ಸಂದರ್ಭದಲ್ಲಿ ಮುಸ್ಲಿಮ್ ಲೀಗ್‌ನೊಂದಿಗೆ ಸೇರಿ ಸರಕಾರ ರಚಿಸಿದ್ದರು. ಹೀಗೆ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಹುಟ್ಟು ಹಾಕಿದ ಮೇಲೆ 1940ರ ವೇಳೆಗೆ ಮುಹಮ್ಮದ್ ಅಲಿ ಜಿನ್ನಾ ಅವರು ಈ ವಾದವನ್ನು ಕೈಗೆತ್ತಿಕೊಂಡರು ಸಾವರ್ಕರ್ ಅವರ ಈ ಸಿದ್ಧಾಂತವು ಮುಂದೆ ರಕ್ತ ಕೆಟ್ಟ ಬಾವಿನಂತಾಗಿ 1947ರಲ್ಲಿ ಒಡೆದು ಹೋಯಿತು. ಆದರೆ ದೇಶ ಒಡೆಯಬಾರದೆಂದು ನಿರಂತರ ಪ್ರಯತ್ನ ಪಟ್ಟ ಗಾಂಧೀಜಿ, ನೆಹರೂ ಮುಂತಾದವರು ದೇಶ ಒಡೆದರು, ದೇಶ ಒಡೆದದ್ದರಲ್ಲಿ ಸಂಘಪರಿವಾರದ ನಾಯಕರ ಪಾತ್ರವಿಲ್ಲವೆಂದು ಬಿಜೆಪಿಯವರು ಸುಳ್ಳನ್ನು ಪದೇ ಪದೇ ಹೇಳುತ್ತಿದ್ದಾರೆ.

ಒಂದು ಕಡೆ ದೇಶ ಇಬ್ಭಾಗವಾಗಲು ಕಾರಣರಾದ ಸಾವರ್ಕರ್ ಮುಂತಾದ ಸಂಘಪರಿವಾರದ ನಾಯಕರು ದೇಶ ಒಂದಾಗಲೂ ಅಡ್ಡಿಯಾಗಿದ್ದರು ಎಂಬುದಕ್ಕೆ ಅನೇಕ ದಾಖಲೆಗಳಿವೆ. ರಾಜಸಂಸ್ಥಾನಗಳ ವ್ಯವಸ್ಥೆಯನ್ನು ತೆರವುಮಾಡಿ ಐಕ್ಯ ತತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೆ ಸಾವರ್ಕರ್ ಮುಂತಾದ ಸಂಘಪರಿವಾರದ ನಾಯಕರು ವಿರುದ್ಧವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣಧ್ವಜ ಹಾರಿಸುತ್ತಿದ್ದರೆ, ಸಂಘಪರಿವಾರದ ನಾಯಕರು ಕಾಶ್ಮೀರದ ಜನವಿರೋಧಿ ರಾಜ ಹರಿಸಿಂಗ್ ಜೊತೆ ಸೇರಿ ಹರಿಸಿಂಗ್‌ನ ಧ್ವಜ ಹಾರಿಸಿದ್ದರು. ತಿರುವನಂತಪುರ ಸಂಸ್ಥಾನವು ಭಾರತದ ಜೊತೆ ಸೇರುವುದಿಲ್ಲವೆಂದು ಅಮೆರಿಕದ ಜೊತೆ ಪತ್ರಗಳ ಮೂಲಕ ಮಾತುಕತೆ ನಡೆಸುತ್ತಿದ್ದಾಗ ಸಾವರ್ಕರ್ ತಿರುವನಂತಪುರ ಸಂಸ್ಥಾನದ ನಿಲುವಿನ ಪರವಾಗಿ ನಿಂತಿದ್ದರು. ಇಂಥವೆಷ್ಟೋ ಘಟನೆಗಳಿವೆ. ಈ ಎಲ್ಲ ಘಟನೆಗಳನ್ನು ನೋಡಿದರೆ ಬಿಜೆಪಿಯ ಪಿತೃಗಳಿಗೆ ಭಾರತ ಐಕ್ಯವಾಗುವುದೂ ಬೇಕಿರಲಿಲ್ಲ. ಅಕಸ್ಮಾತ್ ಐಕ್ಯವಾದರೆ ಹಿಂದೂ ಮುಸ್ಲಿಮ್ ದೇಶಗಳಾಗಬೇಕು ಎಂದು ಬಯಸಿದ್ದರು. ಇಂಥ ದೇಶ ವಿರೋಧಿ ಹಿನ್ನೆಲೆಯ ಬಿಜೆಪಿಯವರು ರಾಹುಲ್ ಗಾಂಧಿಯವರು ನಡೆಸುತ್ತಿರುವ ಭಾರತ ಐಕ್ಯತಾ ಪಾದಯಾತ್ರೆಯ ಬಗ್ಗೆ ಕೆಟ್ಟ ಜಾಹೀರಾತುಗಳನ್ನು ಕೊಟ್ಟಿದ್ದಾರೆ. ಅಂಥ ಜಾಹೀರಾತುಗಳನ್ನು ಪತ್ರಿಕೆಯು ಪ್ರಕಟಿಸಿದೆ.

ದೇಶ ವಿಭಜನೆಗೆ ಬೇಕಾದ ಬೀಜ ಬಿತ್ತಿ ಭಾರತದ ಹೃದಯವನ್ನು ಗಾಯಗೊಳಿಸಿದ ಬಿಜೆಪಿಯವರು ಇಂದು ಅದೇ ವ್ರಣವನ್ನು ರಾಜಕೀಯ ಅಗತ್ಯಕ್ಕಾಗಿ ಕೆರೆದು ಕೆರೆದು ರಕ್ತ ಸಿಕ್ತ ಮಾಡುತ್ತಿದ್ದಾರೆ. ಗಾಯ ಒಣಗಲು ಅವಕಾಶವನ್ನೇ ನೀಡುತ್ತಿಲ್ಲ. ಭಾರತದ ಪ್ರತೀ ಮನುಷ್ಯನ ಎದೆಯಲ್ಲಿ ವಿವೇಕದ ಬೆಳಕು ಹೊತ್ತಿ ಬೆಳಗಿದಾಗ ಮಾತ್ರ ಈ ಗಾಯ ಒಣಗಲು ಸಾಧ್ಯ. ಈ ಗಾಯ ಒಣಗಬೇಕು. ಮನುಷ್ಯನ ಪುಟ್ಟದಾದ ಹೃದಯದಲ್ಲಿ ಸಾಗರಸಮವಾದ ವಿವೇಕ ಬೆಳಗಬೇಕು. ಆಗ ಮಾತ್ರ 'ವಸುದೈವ ಕುಟುಂಬಕಂ', 'ಸಹನಾವವತು ಸಹನೌ ಭುನಕ್ತು' ಎಂಬ ವಿಶ್ವಾತ್ಮಕವಾದ ಚಿಂತನೆಗಳಿಗೆ ಗೌರವ ಬರುತ್ತದೆ. ಅಂಥ ಪ್ರಯತ್ನದ ಭಾಗವೇ ಈ ಪಾದಯಾತ್ರೆ.

ದೇಶ ಮಾರುವುದನ್ನು ಬಿಜೆಪಿಯವರು ದೇಶದ ಅಭಿವೃದ್ಧಿ ಎನ್ನುತ್ತಾರೆ. ಕಾರ್ಪೊರೇಟ್ ಬಂಡವಾಳಿಗರ ಮತ್ತು ಮನುವಾದಿಗಳ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿ ಎನ್ನುತ್ತಾರೆ. ಮೀಸಲಾತಿಯನ್ನು, ಬಡಜನರಿಗೆ ನೀಡಬೇಕಾದ ಸಬ್ಸಿಡಿಗಳನ್ನು ನಿಲ್ಲಿಸುವುದನ್ನು ಸಾಮಾಜಿಕ ನ್ಯಾಯವೆನ್ನುತ್ತಾರೆ.

ಬಿಜೆಪಿ ಆಡಳಿತದಲ್ಲಿ ಕಾರ್ಪೊರೇಟ್ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ ಆಸ್ತಿಗಳನ್ನು ಕೆಲವೇ ಸಾವಿರ ಕೋಟಿಗಳಿಗೆ ಮಾರುತ್ತಿದ್ದಾರೆ. ಇದನ್ನೆಲ್ಲ ಪ್ರಶ್ನಿಸಬೇಕಾದ ಸಿಎಜಿಯನ್ನು ದುರ್ಬಲಗೊಳಿಸಲಾಗಿದೆ. ಯೋಜನಾ ಆಯೋಗವನ್ನು ಬರ್ಖಾಸ್ತುಗೊಳಿಸಲಾಗಿದೆ. ಚುನಾವಣಾ ಆಯೋಗ, ನ್ಯಾಯಾಂಗ, ಐಟಿ, ಈ.ಡಿ., ಸಿಬಿಐ ಮುಂತಾದ ಎಲ್ಲವನ್ನೂ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಹೊರಟಿದ್ದಾರೆ. ಇದರಲ್ಲಿ ಬಹಳಷ್ಟು ವಿಚಾರದಲ್ಲಿ ಯಶಸ್ವಿಯೂ ಆಗಿದ್ದಾರೆ. ಸಂವಿಧಾನ ಬದ್ಧವಾದ ಸಂಸ್ಥೆಗಳು ಆಡಳಿತಾರೂಢ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿವೆ. ಮೋದಿ ಸರಕಾರ ಇದುವರೆಗೆ ಲೋಕಪಾಲರನ್ನು ನೇಮಿಸಿಲ್ಲ. ಈ ವಿಚಾರಗಳನ್ನು ಜನರಿಗೆ ತಿಳಿಸಬೇಕಾದ ಬಹುಪಾಲು ಮಾಧ್ಯಮಗಳನ್ನು ಕಾರ್ಪೊರೇಟ್ ಹಿತಾಸಕ್ತಿಗಳೇ ನಿಯಂತ್ರಿಸುತ್ತಿವೆ. ಬಂಡವಾಳ ಕಾರ್ಪೊರೇಟ್‌ಗಳಾದ ಅದಾನಿ, ಅಂಬಾನಿಗಳದ್ದು. ಮಾಧ್ಯಮಗಳ ದೈನಂದಿನ ವ್ಯವಹಾರಗಳನ್ನು ನಿಭಾಯಿಸಲು ಮನುವಾದಿಗಳನ್ನು ನೇಮಿಸಿಕೊಂಡಿದ್ದಾರೆ. ಈ ಎಲ್ಲ ಶಕ್ತಿಗಳು ಸೇರಿ ಭಾರತವನ್ನು ಧ್ವಂಸ ಮಾಡುತ್ತಿವೆ.

ಆರೆಸ್ಸೆಸ್, ಅದರ ಅಂಗಸಂಸ್ಥೆಗಳು, ಕಾರ್ಪೊರೇಟ್ ಬಂಡವಾಳಿಗರು, ಇವರು ನಡೆಸುತ್ತಿರುವ ಮಾಧ್ಯಮಗಳು ಸೇರಿಕೊಂಡು ಬಿಜೆಪಿಯನ್ನು ಬೆಳೆಸಿ ಪೋಷಿಸುತ್ತಿವೆ. ಬಿಜೆಪಿಯು ಸಂವಿಧಾನಬದ್ಧವಾದ ಸಂಸ್ಥೆಗಳ ನರನಾಡಿಗಳು ಕಿತ್ತೆಸೆದು ತಮ್ಮನ್ನು ಪೋಷಿಸುತ್ತಿರುವ ಮನುವಾದಿಗಳಾದ ಆರೆಸ್ಸೆಸ್ ಮತ್ತು ಅದಾನಿ, ಅಂಬಾನಿಗಳಂಥ ಬಂಡವಾಳಿಗರ ಹಿತಾಸಕ್ತಿಯನ್ನು ಮಾತ್ರ ನೋಡಿಕೊಳ್ಳುತ್ತಿದೆ. ಇವರೆಲ್ಲರೂ ಸೇರಿಕೊಂಡು ದೇಶದ ಸಂಪತ್ತನ್ನು ಕಬಳಿಸಿದ್ದಾರೆ, ಬೆಲೆ ಏರಿಕೆಗೆ, ನಿರುದ್ಯೋಗಕ್ಕೆ ಕಾರಣರಾಗಿದ್ದಾರೆ. ರೈತರ, ದಲಿತರ, ಯುವಜನರ, ಮಹಿಳೆಯರ, ಕಾರ್ಮಿಕರ, ಆದಿವಾಸಿಗಳ, ವಿದ್ಯಾರ್ಥಿಗಳ ಬದುಕನ್ನು ಛಿದ್ರ ಮಾಡಿದ್ದಾರೆ. ತಮ್ಮ ದುಷ್ಟ ಉದ್ದೇಶಗಳನ್ನು ಮರೆಮಾಚಿಕೊಳ್ಳಲು ಪದೇ ಪದೇ ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತರಲು ನೋಡುತ್ತಾರೆ. ಬಿಜೆಪಿ ಮತ್ತು ಅದರ ಮಹಾ ಪೋಷಕರು ಸೇರಿಕೊಂಡು ನಮ್ಮ ಅನ್ನ, ಬಟ್ಟೆ, ಶಿಕ್ಷಣ, ಭಾಷೆ, ಉದ್ಯೋಗ, ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗಳ ಮೇಲೆ ಒಟ್ಟಾರೆ ದೇಶದ ಆತ್ಮದ ಮೇಲೆ ಮುಗಿಬಿದ್ದು ಹಿಂಸೆ ಮಾಡುತ್ತಿದ್ದಾರೆ. ಭರವಸೆಗಳನ್ನು ಛಿದ್ರಗೊಳಿಸುತ್ತಿದ್ದಾರೆ. ಛಿದ್ರವಾಗುವುದನ್ನು ತಡೆದು ಐಕ್ಯಗೊಳಿಸಲು ಈ ಭಾರತವನ್ನು ಐಕ್ಯಗೊಳಿಸುವ ಮಹಾ ಪಾದಯಾತ್ರೆ ನಡೆಯುತ್ತಿದೆ.

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News