ಗಾಂಧೀಜಿ- ಅಂಬೇಡ್ಕರ್ ಸಂವಾದ ಮುಂದುವರಿಕೆ ಅಗತ್ಯ: ಪ್ರೊ.ಫಣಿರಾಜ್
ಉಡುಪಿ, ಅ.2: ಗಾಂಧಿ ಮತ್ತು ಅಂಬೇಡ್ಕರ್ ಹಾಗೂ ದಲಿತರು ಮತ್ತು ಮುಸ್ಲಿಮರ ನಡುವೆ ಧ್ವೇಷವನ್ನು ಹರಡುವ ಹುನ್ನಾರ ನಡೆಯುತ್ತಿದೆ. ಗಾಂಧಿ ಯಾವ ವಿಮರ್ಶೆಗೂ ಅತೀತರಲ್ಲ. ಗಾಂಧೀಜಿ ತಪ್ಪು ಮಾಡಿದರೆ ಅವರನ್ನು ವಿಮರ್ಶಿಸುವಂತಹ ಸಾರ್ವಜನಿಕ ವೇದಿಕೆಯನ್ನು ಗಾಂಧೀಜಿಯವರೇ ಕೊಟ್ಟು ಹೋಗಿದ್ದಾರೆ. ಗಾಂಧೀಜಿ- ಅಂಬೇಡ್ಕರ್ ಸಂವಾದವನ್ನು ನಾವು ಮುಂದುವರೆಸ ಬೇಕು ಸಹಬಾಳ್ವೆ ಕರ್ನಾಟಕ ಸಂಚಾಲಕ, ಹಿರಿಯ ಚಿಂತಕ ಪ್ರೊ. ಫಣಿರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಹಬಾಳ್ವೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸಬ್ ಕೋ ಸನ್ಮತಿ ದೇ ಭಗವಾನ್ ಘೋಷ್ಯ ವಾಕ್ಯದೊಂದಿಗೆ ಧರ್ಮಗಳ ಮಧ್ಯೆ ಸೌಹಾರ್ದತೆ ಬೆಸೆಯುವ ನಿಟ್ಟಿನಲ್ಲಿ ರವಿವಾರ ಅಜ್ಜರಕಾಡು ಉದ್ಯಾನವನದಲ್ಲಿ ನಡೆದ ಸದ್ಭಾವನಾ ನಡಿಗೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ದಲಿತರು ಏನೆಲ್ಲ ಗಾಂಧೀಜಿ ಬಗ್ಗೆ ಅಪ್ರಚಾರ ಕೇಳುತ್ತಿದ್ದಾರೆ. ಅದಕ್ಕೆ ನಾವು ಸಮರ್ಥವಾಗಿ ಉತ್ತರ ಕೊಡಬೇಕು. ಗಾಂಧೀಜಿ ತಪ್ಪು ಮಾಡಿದ್ದರೆ ಅವರ ಪರವಾಗಿ ಕ್ಷಮೆ ಕೇಳುತ್ತೇವೆ ಎಂದು ಧೀಮಂತಿಕೆ ನಮ್ಮಲ್ಲಿ ಇಲ್ಲದಿದ್ದರೆ ನಾವು ಗಾಂಧೀಜಿಯವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಅವರು ತಿಳಿಸಿದರು.
ಹಿಂಸೆಯನ್ನು ದೂರ ಮಾಡಲು ಪ್ರೀತಿ ಮತ್ತು ಶಾಂತಿ ಮಂತ್ರವೇ ನಿಜವಾದ ಅಸ್ತ್ರ ಎಂಬುದಾಗಿ ಗಾಂಧೀಜಿ, ಮೌಲಾನ ಅಜಾದ್, ಸುಶೀಲಾ ನಾಯ್ದು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಇವರು 1948ರಲ್ಲಿ ಜಾತಿ, ಮತ, ಜನಾಂಗೀಯ ದ್ವೇಷವನ್ನು ಹರಡುತ್ತಿದ್ದ ಜನರನ್ನು ಮಧ್ಯೆ ಧೀಮಂತವಾಗಿ ಶಾಂತಿಯ ಮಂತ್ರ ವನ್ನು ಪಠಿಸಿ, ಶಾಂತಿ ನೆಲೆಸುವಂತೆ ಮಾಡಿದರು ಎಂದು ಅವರು ಹೇಳಿದರು.
ಸದ್ಭಾವನಾ ನಡಿಗೆ ಚಾಲನೆ: ಬನ್ನಂಜೆ ನಾರಾಯಣ ಗುರು ಸಭಾಭವನ ವಠಾರದಲ್ಲಿ ರಾಷ್ಟ್ರಧ್ವಜವನ್ನು ಬನ್ನಂಜೆ ಬಿಲ್ಲವ ಸಂಘ ಉಡುಪಿ ಇದರ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಉಡುಪಿ ಜಿಲ್ಲಾ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಅವರಿಗೆ ಹಸ್ತಾಂತರಿಸುವ ಮೂಲಕ ಸದ್ಭಾವನಾ ನಡಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬನ್ನಂಜೆ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಮಾಧವ ಬನ್ನಂಜೆ, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬುದು ನಾರಾಯಣ ಗುರು ಸಂದೇಶವಾಗಿದೆ. ಮಾನವ ಕುಲದಲ್ಲಿ ಹುಟ್ಟಿರುವ ನಾವೆಲ್ಲ ಒಂದೇ. ಈ ಕಾರ್ಯಕ್ರಮದ ಮೂಲಕ ನಾಡಿನಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸಿದರು.
ಅಲ್ಲಿಂದ ಹೊರಟ ನಡಿಗೆ ಸಿಟಿ ಬಸ್ ನಿಲ್ದಾಣ, ಉಡುಪಿ ಜಾಮೀಯ ಮಸೀದಿ, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ.ಮಾರ್ಗ, ಶೋಕಾಮಾತಾ ಇಗರ್ಜಿ, ಜೋಡುಕಟ್ಟೆ ಮಾರ್ಗವಾಗಿ ಸಾಗಿ ಅಜ್ಜರಕಾಡು ಗಾಂಧಿ ಉದ್ಯಾನವನದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಸಹಬಾಳ್ವೆ ಜಿಲ್ಲಾ ಸಂಚಾಲಕ ಪ್ರಶಾಂತ್ ಜತ್ತನ್ನ, ಸಹಬಾಳ್ವೆ ಕರ್ನಾಟಕ ಸಂಚಾಲಕ ಯಾಸೀನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ಕೆಥೋಲಿಕ್ ಸಭಾ ಅಧ್ಯಕ್ಷೆ ಮೇರಿ ಡಿಸೋಜ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ನಗರಸಭೆ ಸದಸ್ಯ ರಮೇಶ್ ಕಾಂಚನ್, ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮಂದಿರ, ಮಸೀದಿ, ಚರ್ಚ್‌ಗಳಿಗೆ ಭೇಟಿ!
ಆರಂಭದಲ್ಲಿ ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ಪೂಜೆ ಸಲ್ಲಿಸಿ, ಬಳಿಕ ಸದ್ಭಾವನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಹೊರಟ ನಡಿಗೆ ಉಡುಪಿ ಜಾಮೀಯ ಮಸೀದಿ ಆವರಣಕ್ಕೆ ತಲುಪಿತು.
ಅಲ್ಲಿ ಮೆವರಣಿಗೆಯಲ್ಲಿ ಬಂದವರಿಗೆ ತಂಪು ಪಾನೀಯ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಸೀದಿಯ ಧರ್ಮಗುರು ಮೌಲಾನ ರಶೀದ್ ಉಮ್ರಿ ಸಂದೇಶ ನೀಡಿದರು. ಅದೇ ರೀತಿ ಉಡುಪಿ ಮದರ್ ಆಫ್ ಸಾರೋಸ್ ಚರ್ಚ್‌ಗೆ ಸಾಗಿ ಬಂದ ನಡಿಗೆಯನ್ನುದ್ದೇಶಿಸಿ ಚರ್ಚ್‌ನ ಧರ್ಮಗುರು ರೆ.ಫಾ.ಚಾರ್ಲ್ಸ್ ಮೆನೇಜಸ್ ಮಾತನಾಡಿದರು.