×
Ad

ವಿದ್ಯುತ್ ದರ ಏರಿಕೆ ನಿಯಮಾವಳಿ ಹಿಂದಕ್ಕೆ ಪಡೆಯಲು ಚಿಂತನೆ: ಸಚಿವ ಸುನಿಲ್‌ ಕುಮಾರ್

Update: 2022-10-02 19:14 IST

ಉಡುಪಿ, ಅ.2: ವಿದ್ಯುತ್ ದರ ಏರಿಕೆಗೆ ನಮ್ಮ ಸರಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ಹಿಂದಿನ ನಿಯಮಾವಳಿಯೇ ಮುಂದುವರೆಯುತ್ತಿದೆ. ಈ ನಿಯಮಾವಳಿ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ದರ ಹೊಂದಾಣಿಕೆ ಮಾಡುವ ನಿಯಮದ ಬಗ್ಗೆ ಮರುಚಿಂತನೆ ಮಾಡುತ್ತೇವೆ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  2014ರಲ್ಲಿ ಕಲ್ಲಿದ್ದಲಿನ ಬೆಲೆಯ ಹೊಂದಾಣಿಕೆಗೋಸ್ಕರ ನಿಯಮಾವಳಿ ರೂಪಿಸಲಾಗಿತ್ತು. ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸಿದೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಅಗತ್ಯ ಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯು ವುದಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ರೇಸ್‌ನಲ್ಲಿ ಖರ್ಗೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಕಾಂಗ್ರೆಸ್‌ನಲ್ಲಿ ಈಗಾಗಲೇ ಎರಡು ಮೂರು ಶಕ್ತಿಗಳು ಕೆಲಸ ಮಾಡುತ್ತಿವೆ. ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ. ಸ್ವತಂತ್ರವಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಯುವಕರ ಪಾರ್ಟಿ ಎಂದು ಹೇಳುವ ಕಾಂಗ್ರೆಸ್‌ನವರು ಖರ್ಗೆ ಅಂತ ಹಿರಿಯರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಗುಂಪು ಜೊತೆಗೆ ಖರ್ಗೆಯವರ ಗುಂಪು ಉದಯವಾಗುತ್ತದೆ ಎಂದರು.

ಕಾಂಗ್ರೆಸಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ 5 ಜಿ ವೇಗದಲ್ಲಿ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸ್ ಟ್ರೇಡ್ ಮಾರ್ಕ್ ಆಗಿದೆ. ಭ್ರಷ್ಟಾಚಾರ ಮಾಡಿ ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಇದ್ದಾರೆ. ಭ್ರಷ್ಟಾಚಾರದ ಬಗ್ಗೆ ಟಿ-ಶರ್ಟ್‌ಗಳನ್ನು ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ. ಯಾವುದೇ ವಿಚಾರ ಸ್ಪಷ್ಟತೆ ಇಲ್ಲದೆ ಭಾರತ ಜೋಡೊ ಯಾತ್ರೆ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಈ ದೇಶದಲ್ಲಿ ಕಾಂಗ್ರೆಸ್ ಭಾರತಕ್ಕೊಂದು ಕಾಶ್ಮೀರಕ್ಕೊಂದು ಎರಡು ಧ್ವಜದ ಸಂಸ್ಕೃತಿ ಮಾಡಿದೆ. ಭಾರತವನ್ನು ವಿಭಜಿಸುವ ಎಲ್ಲಾ ಪ್ರಯತ್ನ ಮಾಡಿ ಈ ಪಕ್ಷ ಮಾಡಿದೆ. ಭಾರತ ಜೋಡೊ ಅನ್ನುವ ಶಬ್ದಕ್ಕೂ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಮೊದಲು ಜೋಡಿಸಿ. ಕಾಂಗ್ರೆಸಿಗೆ ನಮ್ಮ ಕಾಮನ್ ಮ್ಯಾನ್ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ 21 ದಿನಗಳ ಯಾತ್ರೆಗೆ ಜನ ಬೆಂಬಲ ಇಲ್ಲ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News