ಉಡುಪಿ: ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ; ಪ್ರಕರಣ ದಾಖಲಿಸಲು ವಿವಿಧ ಸಂಘಟನೆಗಳ ಒತ್ತಾಯ

Update: 2022-10-02 14:23 GMT

ಉಡುಪಿ, ಅ.2: ಉಡುಪಿ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಉಡುಪಿ ನಗರದಲ್ಲಿ ರವಿವಾರ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಒತ್ತಾಸಿಯಿವೆ.

ಕಡಿಯಾಳಿಯಿಂದ ಆರಂಭಗೊಂಡ ಮೆರವಣಿಗೆಯು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಹಳೆಯ ಡಯಾನ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯ ಮುಂಭಾಗದಲ್ಲಿದ್ದ ಕೆಲವು ಕಾರ್ಯಕರ್ತರು ತಮ್ಮ ಕೈಯಲ್ಲಿ ತಲವಾರು ಹಿಡಿದುಕೊಂಡು ಸಾಗಿ ಬರುತ್ತಿರುವುದು ಕಂಡುಬಂದಿದೆ.

ಮೆರವಣಿಗೆಯಲ್ಲಿ ಸಚಿವ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. 

‘ದುರ್ಗಾ ದೌಡ್ ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಖಂಡನೀಯ. ಇದು ಸಂವಿಧಾನ ವಿರೋಧಿಯಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ಸಂಘಟಕರು ಹಾಗೂ ತಲವಾರು ಪ್ರದರ್ಶನ ಮಾಡಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು’ ಎಂದು ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.

ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಇದು ದೇಶದ ಸಂವಿಧಾನಕ್ಕೆ ಒಡ್ಡಿರುವ ಬೆದರಿಕೆಯಾಗಿದೆ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಘಟಕ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News