ಶಿಕ್ಷಣ ವ್ಯಾಪಾರವಲ್ಲ; ವ್ಯಕ್ತಿತ್ವ ನಿರ್ಮಾಣ ಸಾಧನ: ಸಚಿವ ಸುನಿಲ್ ಕುಮಾರ್
ಉಡುಪಿ, ಅ.2: ಶಿಕ್ಷಣವೆಂಬುದು ವ್ಯಾಪಾರವಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನ. ವ್ಯಕ್ತಿತ್ವ ನಿರ್ಮಿಸದ ಶಿಕ್ಷಣ, ಶಿಕ್ಷಣವೇ ಅಲ್ಲ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಹೆಗ್ಗುಂಜೆ ರಾಜೇವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಉಡುಪಿ ಜಿಲ್ಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಿಲ್ಲೆಯ 350 ಸರಕಾರಿ ಮತ್ತು ಅನುದಾನಿತ ಪ್ರೌಢ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ 31,679 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಸಮವಸ್ತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮವಸ್ತಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆಗಳ ಸಹಯೋಗದೊಂದಿಗೆ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಮಗುವಿನ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿದ್ದು, ಸಹಾಯ ಮಾಡಬೇಕು ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲೆಗಳ ಅಭಿವೃದ್ಧಿ ಸರಕಾರಕ್ಕಿಂತ ಹೆಚ್ಚಾಗಿ ಸಹೃದಯಿ ದಾನಿಗಳ ನೆರವಿನಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಎಚ್.ಎಸ್.ಶೆಟ್ಟಿ ಅಂಥವರು ತಮ್ಮ ಹುಟ್ಟೂರಿನ ಮಮಕಾರದಿಂದ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ವಿಶೇಷ ನೆರವು ನೀಡುತ್ತಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟ ಉಳಿದೆಡೆಗಳಿಗಿಂತ ಉನ್ನತ ಮಟ್ಟದಲ್ಲಿರಲು ಕಾರಣ ಎಂದರು.
ದೇಶದಲ್ಲಿ ಎಚ್.ಎಸ್.ಶೆಟ್ಟಿಯಂಥ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ಇಂಥವರು ನವಭಾರತದ ಕನಸು ಕಾಣುತ್ತಿರುವ ಪ್ರಧಾನಿಯವರ ಆಶಯಗಳನ್ನು ನನಸು ಮಾಡಲು ಪೂರಕವಾಗುತ್ತಾರೆ ಎಂದು ಸುನಿಲ್ ಕುಮಾರ್ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ಬಹುಮುಖ ಪ್ರತಿಭೆಯ ಕಲಾವಿದ ಹಾಗೂ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್, ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಪೂರಕವಾಗುವ ಅಂಶ ಗಳ ಕಡೆಗೆ ಗಮನ ಸೆಳೆದು, ನಿಮ್ಮ ಭವಿಷ್ಯ ಉಜ್ವಲವಾಗಿದೆ. ಅದು ನಿಮ್ಮ ಕೈಯಲ್ಲಿದೆ.ಆದರೆ ಅದನ್ನು ರೂಪಿಸಿ ಕೊಳ್ಳಬೇಕಾದವರು ನೀವೇ ಆಗಿದ್ದೀರಿ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಲಾಲಾಜಿ ಆರ್.ಮೆಂಡನ್, ಬಿ.ಎಂ. ಸುಕುಮಾರ್ ಶೆಟ್ಟಿ, ಪಾಂಡಿಚೇರಿ ವಿವಿಯ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ.ಹಾಲಾಡಿ ಪ್ರತಾಪ್‌ಕುಮಾರ್ ಶೆಟ್ಟಿ, ಜಿಪಂ ಸಿಇಓ ಪ್ರಸನ್ನ ಎಚ್., ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಎನ್.ಕೆ.ಶಿವರಾಜ್, ಸೊಸೈಟಿಯ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಎಚ್.ಎಸ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಸಂಘಟನಾ ಕಾರ್ಯದರ್ಶಿ ರಾಜೀವ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕುಂದಾಪುರದ ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.